ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ: ಕುಟುಂಬಕ್ಕೊಂದೇ ಟಿಕೆಟ್‌; ಕುಟುಂಬ ರಾಜಕಾರಣಕ್ಕೆ ‘ಸೀಮಿತ’ ಕಡಿವಾಣ

ಹೊಸಬರಿಗೆ, ಅಲಕ್ಷಿತ ಸಮುದಾಯಕ್ಕೆ ಆದ್ಯತೆ
Last Updated 10 ಅಕ್ಟೋಬರ್ 2022, 19:43 IST
ಅಕ್ಷರ ಗಾತ್ರ

ಬೆಂಗಳೂರು: 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯನ್ನು ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಬಿಜೆಪಿ ಹಲವು ಪ್ರಯೋಗಗಳಿಗೆ ಕೈಹಾಕಿದೆ. ಟಿಕೆಟ್‌ ಹಂಚಿಕೆಯಲ್ಲಿ ಹೊಸಬರಿಗೆ ಆದ್ಯತೆ ನೀಡುವುದರ ಜತೆಗೆ ಕುಟುಂಬ ರಾಜಕಾರಣಕ್ಕೆ ಲಗಾಮು ಹಾಕಲು ‘ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌’ ನೀಡಲು ತೀರ್ಮಾನಿಸಿದೆ.

‘ಟಿಕೆಟ್‌ ಹಂಚಿಕೆಗೆ ಉತ್ತರಪ್ರದೇಶದ ಚುನಾವಣಾ ಮಾದರಿಯನ್ನು ಅನುಸರಿಸಲಾಗುವುದು. ಹೆಸರು ಕೆಡಿಸಿಕೊಂಡವರು ಮತ್ತು ಕೆಲಸ ಮಾಡದವರನ್ನುಅಲ್ಲಿ ಕೈಬಿಡಲಾಗಿತ್ತು. ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಲ್ಲಿರುವ ನಿರ್ಲಕ್ಷಿತ ಸಮುದಾಯಗಳಿಗೆ ಆದ್ಯತೆ ನೀಡುವ ‘ಸೋಷಿಯಲ್ ಎಂಜಿನಿಯರಿಂಗ್‌’ನ ಪ್ರಯೋಗಕ್ಕೂ ಕೈಹಾಕಿ ಯಶಸ್ಸು ಸಾಧಿಸಲಾಗಿತ್ತು. ಅದೇ ಮಾದರಿ ಇಲ್ಲೂ ಅನುಸರಿಸಲಾಗುವುದು’ ಎಂದು ಪಕ್ಷದ ಹಿರಿಯ ಪದಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಾಲಿ ವಿಧಾನಸಭಾ ಸದಸ್ಯರ ಪೈಕಿ 70 ವರ್ಷ ದಾಟಿದವರು, ಗೆಲ್ಲುವ ಸಾಧ್ಯತೆ ಕಡಿಮೆ ಇರುವವರು ಮತ್ತು ಕೆಲಸ ಮಾಡದೇಕ್ಷೇತ್ರದಲ್ಲಿ ವರ್ಚಸ್ಸು ಕಳೆದುಕೊಂಡ ಶಾಸಕರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಕಡಿಮೆ.ರಾಜ್ಯ ಬಿಜೆಪಿಯಲ್ಲಿ ಕೆಲವು ಸಚಿವರು ಮತ್ತು ಶಾಸಕರು ತಮ್ಮ ಮಕ್ಕಳು ಅಥವಾ ಕುಟುಂಬದ ಸದಸ್ಯರಿಗೆ ಚುನಾವಣೆಯಲ್ಲಿ ಟಿಕೆಟ್‌ ಪಡೆಯಲು ಕಸರತ್ತು ನಡೆಸುತ್ತಿದ್ದು, ಆ ಒತ್ತಡಗಳಿಗೆ ಮಣೆ ಹಾಕುವ ಸಾಧ್ಯತೆ ಇಲ್ಲ’ ಎಂದೂ ಅವರು ಮಾಹಿತಿ ನೀಡಿದರು.

‘ವಿಧಾನಸಭೆ ಚುನಾವಣೆಯಲ್ಲಿ ಒಂದೇ ಕುಟುಂಬದ ಇಬ್ಬರಿಗೆ ಪಕ್ಷ ಟಿಕೆಟ್‌ ಕೊಡುವುದಿಲ್ಲ. ಅಂದರೆ, ಅಣ್ಣ–ತಮ್ಮ ಅಥವಾ ತಂದೆ– ಮಕ್ಕಳಿಗೆ ಟಿಕೆಟ್‌ ಒಟ್ಟಿಗೇ ಸಿಗುವುದಿಲ್ಲ. ಅಪ್ಪನಿಗೆ ಕೊಟ್ಟರೆ ಮಗನಿಗೆ ಸಿಗುವುದಿಲ್ಲ. ಅಣ್ಣನಿಗೆ ಕೊಟ್ಟರೆ ತಮ್ಮನಿಗೆ ಕೊಡುವುದಿಲ್ಲ. ಹಾಲಿ ಶಾಸಕ ರಾಜಕೀಯದಿಂದ ನಿವೃತ್ತಿ ಹೊಂದಿದರೆ ಅಥವಾ ಮೃತಪಟ್ಟಿದ್ದರೆ, ಆತನ ಮಕ್ಕಳು ಅಥವಾ ಸಹೋದರರಲ್ಲಿ ಒಬ್ಬರಿಗೆ ಟಿಕೆಟ್‌ ನೀಡಬೇಕು ಎಂಬ ಚಿಂತನೆ ವರಿಷ್ಠರಲ್ಲಿ ನಡೆದಿದೆ’ ಎಂದು ಅವರು ಹೇಳಿದರು.

‘ಈ ನಿಯಮ ವಿಧಾನಸಭೆ ಚುನಾವಣೆಗೆ ಮಾತ್ರ ಅನ್ವಯವಾಗುತ್ತದೆ.ಲೋಕಸಭೆಯಲ್ಲಿ ತಂದೆ ಇದ್ದು, ವಿಧಾನ ಸಭೆಯಲ್ಲಿ ಮಗ ಇದ್ದರೆ ಅನ್ವಯವಾಗದು. ಸಚಿವೆ ಶಶಿಕಲಾ ಜೊಲ್ಲೆ ಅವರ ಪತಿ ಅಣ್ಣಾಸಾಹೇಬ ಜೊಲ್ಲೆ ಸಂಸದರು. ಇಂತಹ ಪ್ರಕರಣದಲ್ಲಿ ಈ ನಿಯಮ ಪಾಲಿಸುವ ಆಲೋಚನೆ ಇಲ್ಲ. ಆದರೆ, ಬೆಳಗಾವಿ ಜಿಲ್ಲೆಯ ಜಾರಕಿಹೊಳಿ ಸಹೋದರರು, ಬಳ್ಳಾರಿಯ ರೆಡ್ಡಿ ಸಹೋದರರಿಗೆ ಯಾವ ಮಾನದಂಡ ಅನುಸರಿಸಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಮೂಡಿಲ್ಲ’ ಎಂದು ತಿಳಿಸಿದರು.

ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರೂ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಶಿಕಾರಿಪುರದಿಂದ ಸ್ಪರ್ಧಿಸಲಿದ್ದಾರೆ ಎಂದು ಯಡಿಯೂರಪ್ಪ ಅವರೇ ಘೋಷಿಸಿದ್ದಾರೆ. ‘ಆದರೆ, ಅವರು ಎಲ್ಲಿಂದ ಸ್ಪರ್ಧಿಸಬೇಕು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ’. ಯಡಿಯೂರಪ್ಪ ನಿವೃತ್ತಿ ಹೊಂದಿದರೆ ವಿಜಯೇಂದ್ರ ಅವರಿಗೆ ಟಿಕೆಟ್‌ ನೀಡಲಾಗುತ್ತದೆಯೇ ಎಂಬಪ್ರಶ್ನೆಗೆ, ‘ಅದನ್ನೂ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ’ ಎಂದರು.

ಉಮೇಶ ಕತ್ತಿ ನಿಧನರಾಗಿರುವುದರಿಂದ ಅವರ ಸಹೋದರ ರಮೇಶ ಕತ್ತಿ ಟಿಕೆಟ್‌ ಬಯಸಿದರೆ, ಗೆಲ್ಲುವ ಸಾಮರ್ಥ್ಯ ಇದ್ದರೆ ಪಕ್ಷ ಟಿಕೆಟ್‌ ನೀಡುತ್ತದೆ. ಇಂತಹ ಪ್ರಕರಣಗಳನ್ನು ಕುಟುಂಬ ರಾಜಕಾರಣ ಎಂದು ಪರಿಗಣಿಸುವುದು ಕಷ್ಟವಾಗುತ್ತದೆ ಎಂದೂ ಅವರು ಅಭಿಪ್ರಾಯಪಟ್ಟರು.

ಹೊಸಬರಿಗೆ ಆದ್ಯತೆ: ‘ಕ್ಷೇತ್ರದಲ್ಲಿ ವರ್ಚಸ್ಸು ಕಳೆದುಕೊಂಡು ಮತದಾರರ ವಿಶ್ವಾಸ ಕಳೆದುಕೊಂಡವರಿಗೆ ಟಿಕೆಟ್‌ ಸಿಗುವು
ದಿಲ್ಲ. ಅಲ್ಲಿ ಹೊಸಬರಿಗೆ ಟಿಕೆಟ್‌ ಸಿಗಲಿದೆ. ಈ ಪ್ರಯೋಗವನ್ನು ಕಳೆದ ಮೂರು ವರ್ಷಗಳಲ್ಲಿ ನಡೆದ ವಿಧಾನಸಭಾ ಉಪಚುನಾವಣೆಗಳಲ್ಲಿ ಮಾಡಿದ್ದೇವೆ. ಅದು 2023ರ ಚುನಾವಣೆಯಲ್ಲೂ ಮುಂದುವರೆಯಲಿದೆ’ ಎಂದೂ ವಿವರಿಸಿದರು. ಅಲ್ಲದೆ, ಇದುವರೆಗೂ ಪ್ರಾತಿನಿಧ್ಯ ಸಿಗದ, ಹಿಂದುಳಿದ ಮತ್ತು ನಿರ್ಲಕ್ಷಿತ ಸಮುದಾಯಗಳಿಗೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್‌ ನೀಡಲಾಗುತ್ತದೆ ಎಂದರು.

ಇಂದಿನಿಂದ ‘ಜನಸಂಕಲ್ಪ ಯಾತ್ರೆ’

ಪಕ್ಷ ಮತ್ತು ಜನಸಂಘಟನೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ‘ಜನಸಂಕಲ್ಪ ಯಾತ್ರೆ’ಗೆ ರಾಯಚೂರಿನಲ್ಲಿ ಮಂಗಳವಾರ ಚಾಲನೆ ಸಿಗಲಿದೆ.

ರಾಯಚೂರು, ಕೊಪ್ಪಳ, ವಿಜಯಪುರ, ವಿಜಯನಗರ, ಬೀದರ್, ಯಾದಗಿರಿ, ಕಲಬುರಗಿ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣಕನ್ನಡ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಹಾಸನ, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ 52 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಹಾದು ಹೋಗಲಿದೆ.

ಒಟ್ಟು 26 ದಿನಗಳ ಈ ಯಾತ್ರೆಯ ಮಧ್ಯೆ ಏಳು

ಬೃಹತ್‌ ಸಮಾವೇಶಗಳು ನಡೆಯುಲಿವೆ.ಈ ಯಾತ್ರೆ ಡಿಸೆಂಬರ್‌ 25ಕ್ಕೆ ಮುಕ್ತಾಯವಾಗಲಿದೆ ಎಂದು ಯಾತ್ರೆಯ ಸಂಯೋಜಕ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಹೇಳಿದರು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಗಳು ನಡೆಯಲಿವೆ. ಏಳು ಸಮಾವೇಶಗಳ ಪೈಕಿ ಒಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನ.10 ರಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡುಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸಲಿದ್ದಾರೆ ಎಂದೂ ಹೇಳಿದರು.

ಎಲ್ಲೆಲ್ಲಿ ಸಮಾವೇಶಗಳು: ಅಕ್ಟೋಬರ್‌ 16ಕ್ಕೆ ಮೈಸೂರಿನಲ್ಲಿ ಎಸ್‌ಸಿ ಮೋರ್ಚಾ ಸಮಾವೇಶ, ಅ.30ಕ್ಕೆ ಕಲಬುರಗಿಯಲ್ಲಿ ಒಬಿಸಿ ಮೋರ್ಚಾ ಸಮಾವೇಶ, ನ.13 ರಂದು ಹುಬ್ಬಳ್ಳಿಯಲ್ಲಿ ರೈತ ಮೋರ್ಚಾ ಸಮಾವೇಶ, ನ.27ಕ್ಕೆ ಶಿವಮೊಗ್ಗದಲ್ಲಿ ಯುವ ಮೋರ್ಚಾ ಸಮಾವೇಶ, ಡಿ.11ಕ್ಕೆ ಬಳ್ಳಾರಿಯಲ್ಲಿ ಎಸ್‌.ಟಿ. ಮೋರ್ಚಾ ಸಮಾವೇಶ, ಡಿ.25ಕ್ಕೆ ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾ ಸಮಾವೇಶ, ಜನವರಿ 8ಕ್ಕೆ ವಿಜಯಪುರದಲ್ಲಿ ಅಲ್ಪಸಂಖ್ಯಾತ ಮೋರ್ಚಾದ ಸಮಾವೇಶ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT