ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಕಾರಣಿಗಳಿಗಿಲ್ಲ ಸಂತೃಪ್ತಿ: ಬಿ.ಎಲ್‌. ಸಂತೋಷ್‌

Published : 15 ಆಗಸ್ಟ್ 2024, 15:39 IST
Last Updated : 15 ಆಗಸ್ಟ್ 2024, 15:39 IST
ಫಾಲೋ ಮಾಡಿ
Comments

ಬೆಂಗಳೂರು: ಬಹುತೇಕ ರಾಜಕಾರಣಗಳಿಗೆ ಸಂತೃಪ್ತಿ ಎನ್ನುವುದೇ ಇರುವುದಿಲ್ಲ. ಸಿಕ್ಕ ಸ್ಥಾನಮಾನ, ಅವಕಾಶಗಳನ್ನು ಸುದುದ್ದೇಶಕ್ಕೆ ಬಳಸಿಕೊಳ್ಳುವುದೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್ ಹೇಳಿದರು.

ಬೆಂಗಳೂರಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ನಮೋ ವಿದ್ಯಾನಿಧಿ ವಿದ್ಯಾರ್ಥಿವೇತನ’ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜಕಾರಣಿಗಳು ಅಜೀರ್ಣವಾಗುವಷ್ಟು ಆಸ್ತಿ ಸಂಪಾದನೆ ಮಾಡಲು ಹೆಚ್ಚಿನ ಗಮನ ಹರಿಸುತ್ತಾರೆ. ಆ ಮೂಲಕ ಅವರ ಮುಂದಿನ ಪೀಳಿಗೆಯನ್ನೂ ಹಾಳು ಮಾಡುತ್ತಾರೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವ ಮನೋಭಾವ ಕಾಣದಾಗಿದೆ ಎಂದರು.

ದಾನಿಗಳ ಸಂಖ್ಯೆ ಈಚೆಗೆ ಕಡಿಮೆಯಾಗುತ್ತಿದೆ. ದಾವಣಗೆರೆಯಂತಹ ನಗರದಲ್ಲಿ ಹೆಜ್ಜೆಗೊಬ್ಬರು ದಾನಿ ಸಿಗುತ್ತಾರೆ. ಅಂತಹ ದಾನಿಗಳು ಕೊಟ್ಟ ಜಮೀನಿನಿಂದಲೇ ಅಲ್ಲಿ ಶಾಲೆ–ಕಾಲೇಜು, ಆಸ್ಪತ್ರೆ, ಧರ್ಮಛತ್ರಗಳು ತಲೆ ಎತ್ತಿವೆ. ಅಂತಹ ಮನಸ್ಥಿತಿ ಎಲ್ಲ ಜನರಲ್ಲೂ ಬರಬೇಕು. ರಾಜಕಾರಣಿಗಳು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ‘ಬಹಳಷ್ಟು ಪೋಷಕರು ಆರ್ಥಿಕ ಕಾರಣಗಳಿಗಾಗಿ ತಮ್ಮ ಮಕ್ಕಳ ಶಿಕ್ಷಣವನ್ನೇ ಸ್ಥಗಿತಗೊಳಿಸಿದ್ದಾರೆ. ಹಲವು ವಿದ್ಯಾರ್ಥಿಗಳ ಕನಸು ಇಂತಹದ್ದೇ ಕಾರಣಗಳಿಗಾಗಿ ಕಮರಿಹೋದ ಸನ್ನಿವೇಶಗಳಿವೆ. ಅದಕ್ಕಾಗಿಯೇ ನಮೋ ವಿದ್ಯಾನಿಧಿ ವಿದ್ಯಾರ್ಥಿ ವೇತನ ಜಾರಿಗೊಳಿಸಲಾಗಿದೆ’ ಎಂದರು.

‘ಹಲವು ದಾನಿಗಳು ನೆರವಾಗಿದ್ದಾರೆ. ಇದುವರೆಗೂ ₹12 ಕೋಟಿ ವಿತರಿಸಲಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ 200 ವಿದ್ಯಾರ್ಥಿಗಳು ಪ್ರಸಕ್ತ ವರ್ಷ ₹10 ಲಕ್ಷ ನೆರವು ಪಡೆದಿದ್ದಾರೆ. ಸಹಾಯ ಪಡೆದ ಮಕ್ಕಳು ಹೆಚ್ಚಿನ ಅಂಕಗಳನ್ನು ಗಳಿಸುವ ಮೂಲಕ ನಮ್ಮ ಪ್ರಯತ್ನಕ್ಕೆ ಹೆಚ್ಚಿನ ಬಲ ತುಂಬಿದ್ದಾರೆ’ ಎಂದು ಶ್ಲಾಘಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ, ವಿದ್ಯಾನಿಧಿ ಟ್ರಸ್ಟಿಗಳಾದ ಎಸ್‌.ವಿ.ಎಸ್‌. ಗುಪ್ತಾ, ಗುರುಪ್ರಸಾದ್‌ ಮಾಕಮ್‌ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT