ಬೆಂಗಳೂರು: ‘ಮಹಿಳಾ ಪ್ರಾತಿನಿಧ್ಯ ಮತ್ತು ಮಹಿಳಾ ಮೀಸಲಾತಿ ಎರಡೂ ಹೆಚ್ಚಾಗಬೇಕು’ ಎಂದು ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಉಸ್ತುವಾರಿ ಶಿಲ್ಪಿ ಅರೋರ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ಸದಸ್ಯತ್ವ ನೋಂದಣಿಗೆ ಭಾನುವಾರ ಚಾಲನೆ ನೀಡಿದ ಅವರು, ‘ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ’ ಎಂದರು.
‘ಮಹಿಳೆಯರ ಹಕ್ಕುಗಳಿಗಾಗಿ ಮಹಿಳಾ ಕಾಂಗ್ರೆಸ್ ಹೋರಾಡುತ್ತಿದೆ. ‘ನಾರಿ ನ್ಯಾಯ’ ಹೆಸರಿನಲ್ಲಿ ಮಹಿಳೆಯರ ಸಂಘಟನೆ ಮಾಡಲಾಗಿದೆ. ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದು ನಮ್ಮ ಗುರಿ’ ಎಂದರು.
ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಅವರು, ‘ನಿರ್ಣಾಯಕ ಸ್ಥಾನದಲ್ಲಿರುವ ಮಹಿಳೆಗೆ ಇನ್ನೂ ಶೇ 50 ರಷ್ಟು ಮೀಸಲಾತಿ ಸೌಲಭ್ಯ ಸಿಕ್ಕಿಲ್ಲ. 30 ವರ್ಷಗಳ ಹೋರಾಟಕ್ಕೆ ಇನ್ನೂ ಫಲ ಸಿಕ್ಕಿಲ್ಲ’ ಎಂದರು.
ಮಾಜಿ ಸಚಿವೆ ಮೋಟಮ್ಮ, ‘ನರೇಂದ್ರ ಮೋದಿ ಅವರು ಕೇವಲ ಮಾತಿನಲ್ಲಿ ಭೇಟಿ ಬಚಾವೊ ಭೇಟಿ ಪಡಾವೊ ಎನ್ನುತ್ತಾರೆ. ಹೆಣ್ಣು ಮಕ್ಕಳ ರಕ್ಷಣೆಯನ್ನು ಬಿಜೆಪಿ ಮಾಡಿಲ್ಲ’ ಎಂದರು.
ಮಹಿಳಾ ಕಾಂಗ್ರೆಸ್ ಉಸ್ತುವಾರಿ ನಾರಾಯಣಸ್ವಾಮಿ, ‘ಹೆಚ್ಚು ಹೆಚ್ಚು ಮಹಿಳಾ ಸದಸ್ಯರನ್ನು ನೋಂದಣಿ ಮಾಡಿಸಿದರೆ ತಳಮಟ್ಟದಲ್ಲಿ ಪಕ್ಷದ ಬಲ ಹೆಚ್ಚುತ್ತದೆ. ಅಭಿಯಾನದ ಮೂಲಕ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಕೈಯನ್ನು ಬಲಪಡಿಸಬೇಕು’ ಎಂದು ಪಕ್ಷದ ಕಾರ್ಯಕರ್ತೆಯರಿಗೆ ಮನವಿ ಮಾಡಿದರು.
ಮಾಜಿ ಮೇಯರ್ ಪದ್ಮಾವತಿ, ಕುಸುಮ ಹನುಮಂತರಾಯಪ್ಪ, ಕೆಪಿಸಿಸಿ ಉಪಾಧ್ಯಕ್ಷೆ ಅಕ್ಕೈ ಪದ್ಮಶಾಲಿ, ಕಾರ್ಯದರ್ಶಿ ರುಕ್ಮಿಣಿ ಸಾಹುಕಾರ್ ಇದ್ದರು.