ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಶಾಕ್‌ಗೆ ಒಳಗಾಗಿದ್ದ ಬಾಲಕ ನಾಲ್ಕು ದಿನಗಳ ನಂತರ ಕೊನೆಯುಸಿರು 

ಮನೆ ಮಾಲೀಕ, ಕೆಪಿಟಿಸಿಎಲ್– ಬೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌
Last Updated 20 ಮೇ 2019, 19:01 IST
ಅಕ್ಷರ ಗಾತ್ರ

ಬೆಂಗಳೂರು: ಹೈ–ಟೆನ್ಶನ್ ವೈರ್ ತಗುಲಿ ತೀವ್ರವಾಗಿ ಗಾಯಗೊಂಡಿದ್ದ ನಿಖಿಲ್ (14) ಎಂಬ ಬಾಲಕ ಚಿಕಿತ್ಸೆಗೆ ಸ್ಪಂದಿಸದೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಮವಾರ ಬೆಳಿಗ್ಗೆ ಅಸುನೀಗಿದ್ದಾನೆ.

ಅಪಾರ್ಟ್‌ಮೆಂಟ್ ಸಮುಚ್ಚಯ ಒಂದರ ಮೇಲ್ವಿಚಾರಕ ಅಮರೇಶ್ ಹಾಗೂ ರಮಾಬಾಯಿ ದಂಪತಿಯ ಮಗನಾಗಿದ್ದ ನಿಖಿಲ್, ಯಲಹಂಕದ ಡೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ. ಮೇ 16ರಂದು ಬೆಳಿಗ್ಗೆ 11 ಗಂಟೆಗೆ ಆಟವಾಡಲೆಂದು ಸ್ನೇಹಿತರ ಜೊತೆಯಲ್ಲಿ ಮತ್ತಿಕೆರೆ ಬಳಿಯ ಜೆ.ಪಿ.ಪಾರ್ಕ್‌ಗೆ ಹೋಗಿದ್ದಾಗ ಈ ಅವಘಡ ಸಂಭವಿಸಿತ್ತು.

‘ಘಟನೆಯಿಂದ ನಿಖಿಲ್‌ನ ದೇಹದ ಶೇ 47ರಷ್ಟು ಭಾಗ ಸುಟ್ಟುಹೋಗಿತ್ತು. ವೈದ್ಯರು ಆತನಿಗೆ ನಿತ್ಯವೂ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಆತ ಚಿಕಿತ್ಸೆಗೆ ಸ್ಪಂದಿಸಲಿಲ್ಲ’ ಎಂದು ಯಶವಂತಪುರ ಪೊಲೀಸರು ಹೇಳಿದರು.

‘ಶಾಲೆಗಳಿಗೆ ಬೇಸಿಗೆ ರಜೆ ಇದ್ದ ಕಾರಣ, ಸ್ಥಳೀಯ ಹುಡುಗರೆಲ್ಲ ಕ್ರಿಕೆಟ್ ಆಡಲು ನಿತ್ಯವೂ ಜೆ.ಪಿ.ಪಾರ್ಕ್‌ಗೆ ಹೋಗುತ್ತಿದ್ದರು. ಮೇ 16ರಂದು ಸಹ ನಿಖಿಲ್‌ ಹಾಗೂ ಸ್ನೇಹಿತರು ಬ್ಯಾಟ್, ಬಾಲ್ ಹಾಗೂ ವಿಕೆಟ್‌ಗಳನ್ನು ತೆಗೆದುಕೊಂಡು ಉದ್ಯಾನದ ಕಡೆಗೆ ಹೊರಟಿದ್ದರು’

‘ಗೆಳೆಯನೊಬ್ಬ ಕ್ಯಾಚ್ ಹಿಡಿಯುವಂತೆ ಚೆಂಡನ್ನು ರಸ್ತೆಯಲ್ಲೇ ಮೇಲಕ್ಕೆ ಎಸೆದಿದ್ದ. ಆದರೆ, ಆ ಚೆಂಡು ಕಟ್ಟಡವೊಂದರ ಮಹಡಿಗೆ ಹೋಗಿತ್ತು. ಅದನ್ನು ತರಲು ನಿಖಿಲ್‌ ಮಹಡಿಗೆ ಹೋದಾಗಲೇಹೈ–ಟೆನ್ಶನ್ ವೈರ್ ತಗುಲಿ ಸ್ಫೋಟವಾಗಿತ್ತು. ಆ ಸದ್ದು ಕೇಳಿ ಮನೆಗಳಿಂದ ಹೊರಗೆ ಬಂದಿದ್ದ ಸ್ಥಳೀಯರು, ಬಾಲಕನನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದರು’ ಎಂದು ಪೊಲೀಸರು ಹೇಳಿದರು.

ಮನೆ ಮಾಲೀಕ, ಅಧಿಕಾರಿಗಳ ವಿರುದ್ಧ ಎಫ್‌ಐಆರ್‌: ಬಾಲಕನ ಸಾವಿನ ಬಗ್ಗೆ ಆತನ ಅಕ್ಕ ದೂರು ನೀಡಿದ್ದಾರೆ. ‘ಮನೆ ಮಾಲೀಕ, ಕೆಪಿಟಿಸಿಎಲ್– ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ನಿಖಿಲ್ ಸಾವಿಗೆ ಕಾರಣ’ ಎಂದು ಆರೋಪಿಸಿದ್ದಾರೆ.

ಆ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ‘ಮನೆ ಮಾಲೀಕ ಜಗನ್ನಾಥ್ ಹಾಗೂ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಲಾಗುವುದು’ ಎಂದರು.

‘ಹೈಟೆನ್ಷನ್ ತಂತಿ ಹಾದುಹೋಗಿರುವ ಜಾಗದಲ್ಲೇ ಮನೆ ಕಟ್ಟಿಕೊಳ್ಳಲು ಬಿಬಿಎಂಪಿಯವರು ಅನುಮತಿ ನೀಡಿದ್ದಾರೆ. ಅದು ಸಹ ಅನಾಹುತಕ್ಕೆ ಕಾರಣವಾಗಿದ್ದು, ಆ ಬಗ್ಗೆಯೂ ವಿಚಾರಣೆ ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT