ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆನೆಕಾಲು ರೋಗಕ್ಕೆ ಸಂಯೋಜಿತ ಚಿಕಿತ್ಸಾ ವಿಧಾನ: ಕಾಸರಗೋಡಿನ ಐಎಡಿ ಸಂಶೋಧನೆ

ಆನೆಕಾಲು ರೋಗ: ಸಂಶೋಧನಾ ಮಾಹಿತಿ ಬ್ರಿಟಿಷ್ ಜರ್ನಲ್‌ನಲ್ಲಿ ಪ್ರಕಟ
Published : 5 ಜನವರಿ 2024, 0:30 IST
Last Updated : 5 ಜನವರಿ 2024, 0:30 IST
ಫಾಲೋ ಮಾಡಿ
Comments

ಮಂಗಳೂರು: ಆನೆಕಾಲು (ಲಿಂಫೋಡಿಮಾ/ಫೈಲೇರಿಯಾಸಿಸ್‌) ರೋಗ ಗುಣಪಡಿಸಲು ಸಂಯೋಜಿತ ಚಿಕಿತ್ಸಾ ವಿಧಾನ ಕಂಡುಹಿಡಿದ ಕಾಸರಗೋಡಿನ ಇನ್‌ಸ್ಟಿಟ್ಯೂಟ್‌ ಆಫ್‌ ಅಪ್ಲೈಯ್ಡ್‌ ಡರ್ಮಟಾಲಜಿ (ಐಎಡಿ) ಕುರಿತ ಲೇಖನ ಬ್ರಿಟಿಷ್ ಜರ್ನಲ್ ಆಫ್‌ ಡರ್ಮಟಾಲಜಿಯ (ಬಿಜೆಡಿ) ಈ ತಿಂಗಳ ಸಂಚಿಕೆಯ ಮುಖಪುಟ ಲೇಖನವಾಗಿ ಪ್ರಕಟಗೊಂಡಿದೆ.

ಪರಂಪರಾಗತ ಆಯುರ್ವೇದ ಮತ್ತು ಯೋಗ ಪದ್ಧತಿಗಳಲ್ಲಿ ಲಭ್ಯವಿರುವ ರೋಗ ಉಪಶಮನದ ಕ್ರಮಗಳನ್ನು, ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ಔಷಧಿಗಳನ್ನು ಅಲೋಪತಿ ವಿಧಾನದೊಂದಿಗೆ ಬೆರೆಸಿ, ಆನೆಕಾಲು ರೋಗಕ್ಕೆ ಸಂಯೋಜಿತ ಚಿಕಿತ್ಸಾ ಪದ್ಧತಿಯನ್ನು ಐಎಡಿ ನಿರ್ದೇಶಕ ಡಾ.ಎಸ್‌.ಆರ್‌.ನರಹರಿ ಮತ್ತು ತಂಡ ಸಿದ್ಧಪಡಿಸಿತ್ತು. ಕಾಸರಗೋಡು– ಮಧೂರು ರಸ್ತೆಯ ಉಳಿಯತ್ತಡ್ಕದಲ್ಲಿರುವ ಈ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯಲು ಜಗತ್ತಿನ ಹಲವು ದೇಶಗಳ ರೋಗಿಗಳು ಬರುತ್ತಿದ್ದಾರೆ.

‘ಚರ್ಮರೋಗಕ್ಕೆ ಸಂಬಂಧಪಟ್ಟ ಚಿಕಿತ್ಸೆ ಮತ್ತು ಸಾರ್ವಜನಿಕ ಆರೋಗ್ಯದ ಕುರಿತು ಲೇಖನಗಳನ್ನು
ಪ್ರಕಟಿಸುತ್ತಿರುವ ಬ್ರಿಟಿಷ್ ಜರ್ನಲ್ ಆಫ್ ಡರ್ಮಟಾಲಜಿಗೆ 180 ವರ್ಷಗಳ ಇತಿಹಾಸವಿದೆ. ಅಂಥ ಪತ್ರಿಕೆಯಲ್ಲಿ ಲೇಖನ ಪ್ರಕಟಗೊಳ್ಳುವುದು ದೊಡ್ಡ ಗೌರವ. ಐಎಡಿ ಕುರಿತ ಮುಖಪುಟದ ಲೇಖನ ಪ್ರಕಟವಾಗಿರುವುದು ನಮ್ಮ ಸಂತಸವನ್ನು ನೂರ್ಮಡಿಗೊಳಿಸಿದೆ’ ಎಂದು ‘ಪ್ರಜಾವಾಣಿ’ ಜೊತೆ ಮಾತನಾಡಿದ ಡಾ.ನರಹರಿ ಹೇಳಿದರು.

‘ಬಿಜೆಡಿಯಲ್ಲಿ ಲೇಖನ ಪ್ರಕಟ ಮಾಡುವ ಮೊದಲು ಔಷಧಿ ಅಥವಾ ಚಿಕಿತ್ಸಾ ಪದ್ಧತಿಯನ್ನು ಸಮರ್ಥಿಸಿ
ಕೊಳ್ಳುವ ವೈಜ್ಞಾನಿಕ ಪುರಾವೆಗಳನ್ನು ಸಲ್ಲಿಸಬೇಕಾಗುತ್ತದೆ. ಆನೆಕಾಲು ರೋಗಕ್ಕೆ ಸಿದ್ಧಪಡಿಸಿದ ಸಂಯೋಜಿತ ಔಷಧಿಯ ಕುರಿತು ಸಂಸ್ಥೆಯಿಂದ ಲೇಖನವೊಂದನ್ನು ಕಳುಹಿಸಲಾಗಿತ್ತು. ನಮ್ಮ ಅರಿವಿಗೇ ಬಾರದೆ ಅದರ ಕುರಿತು ಸಮಿತಿಯೊಂದು ಪರಿಶೀಲನೆ ನಡೆಸಿತ್ತು. ನಂತರ ಕೆಲವು ಪ್ರಶ್ನೆಗಳನ್ನು ಕಳುಹಿಸಲಾಗಿತ್ತು. ಅದಕ್ಕೆ ಉತ್ತರಗಳನ್ನು ಕಳುಹಿಸುವಾಗ ಪೂರಕ ಮಾಹಿತಿಯನ್ನೂ ಸಲ್ಲಿಸಲಾಗಿತ್ತು’ ಎಂದು ಅವರು ವಿವರಿಸಿದರು.

ಬ್ರಿಟಿಷ್ ಜರ್ನಲ್‌ ಆಫ್ ಡರ್ಮಟಾಲಜಿಯ ಮುಖಪುಟದಲ್ಲಿ ಐಎಡಿ ಕುರಿತ ಲೇಖನ

ಬ್ರಿಟಿಷ್ ಜರ್ನಲ್‌ ಆಫ್ ಡರ್ಮಟಾಲಜಿಯ ಮುಖಪುಟದಲ್ಲಿ ಐಎಡಿ ಕುರಿತ ಲೇಖನ

ಸಂಯೋಜಿತ ಔಷಧಿ ಸಿದ್ಧಗೊಂಡ ಬಗೆ:

‘ಸಂಯೋಜಿತ ಚಿಕಿತ್ಸಾ ವಿಧಾನದಲ್ಲಿ ಔಷಧಿಯೂ ಸೇರಿದೆ. ಇದನ್ನು ಸಿದ್ಧಪಡಿಸುವ ಮೊದಲು ಆಯುರ್ವೇದ ಮತ್ತಿತರ ಶಾಖೆಗಳ ವೈದ್ಯರ ಜೊತೆ ಚರ್ಚೆ ನಡೆದಿತ್ತು. ಔಷಧಿಗಳ ಸಮೀಕ್ಷೆಯೂ ಆಗಿತ್ತು. ರೋಗಿಗಳು ತರುತ್ತಿದ್ದ ಫೈಲ್‌ಗಳ ಸೂಕ್ಷ್ಮ ಪರಿಶೀಲನೆಯಿಂದ ಚಿಕಿತ್ಸೆಗೆ ಉಪಯೋಗ ಆಗುವಂಥ ಹಾಗೂ ಉಪಯೋಗ ಶೂನ್ಯವಾದ ಔಷಧಿ ಗಳ ಮಾಹಿತಿ ಲಭಿಸಿತು. ರೋಗದ ಲಕ್ಷಣಗಳನ್ನು ಅಲೋಪಥಿ ಪರೀಕ್ಷಾ ವಿಧಾನದ ಮೂಲಕವೇ ಅರಿಯಲಾಯಿತು. ಪೆಥಾಲಜಿಯ ಜ್ಞಾನವನ್ನು ಪೂರಕವಾಗಿ ಬಳಸಿ ಕೊಳ್ಳಲಾಯಿತು. ಇದೆಲ್ಲದರ ಪರಿಣಾಮವಾಗಿ ಕಾಲಿನ ಗಾಯಗಳು ಮಾಯವಾದವು. ಯೋಗಾಸನ ಮತ್ತು ಮಸಾಜ್‌ನಿಂದ ಊತವೂ ಕಡಿಮೆಯಾಯಿತು’ ಎಂದು ಡಾ.ನರಹರಿ ತಿಳಿಸಿದರು.

‘ಐಎಡಿಯಲ್ಲಿ ಆವಿಷ್ಕಾರಗೊಡ ಚಿಕಿತ್ಸಾ ಪದ್ಧತಿ ಬಳಸಿ 2004ರಲ್ಲಿ ಮೊದಲ ಬಾರಿ ಚಿಕಿತ್ಸೆ ನೀಡಲಾಗಿತ್ತು. ಡಬ್ಲ್ಯುಎಚ್‌ಒ ನವದೆಹಲಿಯಲ್ಲಿರುವ ಆಗ್ನೇಯ ಏಷ್ಯಾ ಕಚೇರಿಯಿಂದ ಒಂದು ದಶಕದ ಮಾಹಿತಿಯನ್ನು ಈಚೆಗೆ ಕೇಳಲಾಗಿತ್ತು. 1,698 ಪುಟಗಳ ಮಾಹಿತಿಯನ್ನು ಸಲ್ಲಿಸಲಾಗಿತ್ತು’ ಎಂದರು.

ಕಾಸರಗೋಡಿನ ಇನ್‌ಸ್ಟಿ‌ಟ್ಯೂಷನ್ ಆಫ್ ಅಪ್ಲೈಡ್ ಡರ್ಮಟಾಲಜಿ ಕಟ್ಟಡ

ಕಾಸರಗೋಡಿನ ಇನ್‌ಸ್ಟಿ‌ಟ್ಯೂಷನ್ ಆಫ್ ಅಪ್ಲೈಡ್ ಡರ್ಮಟಾಲಜಿ ಕಟ್ಟಡ

****

ಸಂಯೋಜಿತ ಔಷಧದ ಮೂಲಕ ಚಿಕಿತ್ಸೆ ಪಡೆಯಲು ದೇಶ–ವಿದೇಶಗಳಿಂದ ಜನರು ಬರುತ್ತಿದ್ದರೂ ಕೆಲವರಿಗೆ ಸಂದೇಹವಿತ್ತು. ಈಗ ಈ ಔಷಧಿಗೆ ಅಂತರರಾಷ್ಟ್ರೀಯ ಮಾನ್ಯತೆ ಸಿಕ್ಕಿದಂತಾಗಿದೆ

-ಡಾ.ಎಸ್‌.ಆರ್‌.ನರಹರಿ, ಐಎಡಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT