ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲ್ಯಾಕ್‌ಮೇಲ್‌ ಮಾಡಿ ಅಧ್ಯಕ್ಷರಾದ ವಿಜಯೇಂದ್ರ: ಯತ್ನಾಳ ಕಿಡಿ

Published 12 ಡಿಸೆಂಬರ್ 2023, 15:48 IST
Last Updated 12 ಡಿಸೆಂಬರ್ 2023, 15:48 IST
ಅಕ್ಷರ ಗಾತ್ರ

ಬೆಳಗಾವಿ: ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕೂಡಲಸಂಗಮದ ಪಂಚಮಸಾಲಿ ‍‍ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಎದುರು ತೀವ್ರ ವಾಗ್ದಾಳಿ ನಡೆಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ತಮ್ಮ ಮಗನನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮಾಡದಿದ್ದರೆ ಮುಂದಿನ ಚುನಾವಣೆಯಲ್ಲಿ ಪ್ರಚಾರಕ್ಕೆ ಬರುವುದಿಲ್ಲ ಎಂದು ಯಡಿಯೂರಪ್ಪ ಮುಖಂಡರನ್ನು ‘ಬ್ಲ್ಯಾಕ್‌ಮೇಲ್‌’ ಮಾಡಿದ್ದಾರೆ. ಅದೇ ಕಾರಣಕ್ಕೆ ವಿಜಯೇಂದ್ರಗೆ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಸಿಕ್ಕಿದೆ’ ಎಂದು ಯತ್ನಾಳ ಆರೋಪಿಸಿದ್ದಾರೆ.

‘ವಿಜಯೇಂದ್ರ, ಯಡಿಯೂರಪ್ಪ ಅವರನ್ನು ನಮ್ಮ ಸಮಾಜ ಯಾವತ್ತೂ ಒಪ್ಪುವುದಿಲ್ಲ. ಇದು ಸ್ಪಷ್ಟ. ಏಕೆಂದರೆ, ಉತ್ತರ ಕರ್ನಾಟಕದ ಲಿಂಗಾಯತರಿಗೆ ಇವರ ಕೊಡುಗೆ ಏನೂ ಇಲ್ಲ’ ಎಂದೂ ಅವರು ಹೇಳಿದ್ದಾರೆ.

‘ಯಡಿಯೂರಪ್ಪ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಲು, ಮುಖ್ಯಮಂತ್ರಿ ಆಗಲು ನಾನೇ ಕಾರಣ. ಅರುಣ್‌ ಜೇಟ್ಲಿ ಅವರು ನನ್ನನ್ನು ಪಕ್ಷಕ್ಕೆ ಆಹ್ವಾನಿಸಿದ ಸಂದರ್ಭದಲ್ಲಿ ನಾನೇ ಈ ‘ಕಂಡಿಷನ್‌’ ಹಾಕಿದ್ದೆ. ಯಡಿಯೂರಪ್ಪ ಅವರನ್ನು ರಾಜ್ಯ ನಾಯಕ ಮಾಡಿದರೆ ಮಾತ್ರ ಪಕ್ಷಕ್ಕೆ ಬರುತ್ತೇನೆ ಎಂದಿದ್ದೆ. ಆದರೆ, ಅಪ್ಪ– ಮಗ ಸೇರಿಕೊಂಡು ನನ್ನ ವಿರುದ್ಧವೇ ಮಸಲತ್ತು ಮಾಡಿದರು’ ಎಂದೂ ಯತ್ನಾಳ ದೂರಿದ್ದಾರೆ.

‘ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನೂ ಸೇರಿ ಕೆಲವು ಹಿರಿಯ ನಾಯಕರನ್ನು ಸೋಲಿಸಲು ವಿಜಯೇಂದ್ರ ಕುತಂತ್ರ ಮಾಡಿದ್ದರು. ಆಶ್ಚರ್ಯವೆಂದರೆ ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸಲು ವಿಜಯೇಂದ್ರನೇ ಹಣ ಕಳಿಸಿದ್ದರು. ಇದನ್ನು ಬೊಮ್ಮಾಯಿ ಅವರೇ ನನಗೆ ಹೇಳಿದ್ದಾರೆ. ಇದು ಸುಳ್ಳ ಎನ್ನುವುದಾದರೇ ಬೊಮ್ಮಾಯಿ ಯಾವುದಾದರೂ ದೇವಸ್ಥಾನಕ್ಕೆ ಬರಲಿ, ನಾನೂ ಬರುತ್ತೇನೆ’ ಎಂದೂ ಹೇಳಿದ್ದಾರೆ.

‘ಸೋಮಣ್ಣ ಅವರನ್ನು ಬಲಿ ಕೊಟ್ಟಿದ್ದು ಇವರೇ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ನಾನು ರ್‍ಯಾಲಿ ನಡೆಸಿದ ಸಂದರ್ಭದಲ್ಲಿ, ನನ್ನನ್ನು ಬಂಧಿಸುವಂತೆ ಲಿಂಗಾಯತ ಸಮಾಜಕ್ಕೆ ಸೇರಿದ ಸಂದೀಪ ಪಾಟೀಲ ಎಂಬ ಪೊಲೀಸ್‌ ಅಧಿಕಾರಿಯನ್ನು ಇವರೇ ಕಳುಹಿಸಿದ್ದರು’ ಎಂದೂ ಅವರು ಆರೋಪಿಸಿದ್ದು ವಿಡಿಯೊದಲ್ಲಿದೆ.

‘ಹಿಂದೆ ಕನಿಷ್ಠ ಎಂಟು ಮಂದಿ ಪಂಚಮಸಾಲಿ ಸಮಾಜದ ಸಂಸದರು ಇರುತ್ತಿದ್ದರು. ಈಗ ಕರಡಿ ಸಂಗಣ್ಣ ಒಬ್ಬರೇ ಇದ್ದಾರೆ. ಯಡಿಯೂರಪ್ಪ ಅವರು ಪಂಚಮಸಾಲಿ ಸಮಾಜಕ್ಕೆ ಸಂಸದ ಸ್ಥಾನ ತಪ್ಪಿಸುತ್ತಿದ್ದಾರೆ. ವಿಜಯೇಂದ್ರಗೆ ಯಾರು ಅಡ್ಡಗಾಲು ಆಗುತ್ತಾರೋ ಅವರನ್ನೆಲ್ಲ ತುಳಿಯುವ ಹುನ್ನಾರ ಮಾಡುತ್ತಿದ್ದಾರೆ. ಶಾಸಕ ವಿನಯ ಕುಲಕರ್ಣಿ ಅವರ ಪ್ರಕರಣ ಮತ್ತೆ ಮುನ್ನೆಲೆಗೆ ಬರುವಲ್ಲಿಯೂ ಇವರ ಕೈವಾಡ ಇದೆ’ ಎಂದೂ ಅವರು ಆರೋಪಿಸಿದ್ದಾರೆ.

‘ಅಪ್ಪ– ಮಕ್ಕಳು ಏನು ನಡೆಸಿದ್ದಾರೆ ಎಂಬುದು ಜನರಿಗೆ ಗೊತ್ತಾಗಬೇಕು. ವಿಧಾನಸಭೆ ಚುನಾವಣೆಯಲ್ಲಿ ತಮ್ಮ ವಿರುದ್ಧ ಡಮ್ಮಿ ಅಭ್ಯರ್ಥಿ ಹಾಕಿಸಿಕೊಂಡರು. ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರಿಗೆ ವರುಣಾದಲ್ಲಿ ಪರೋಕ್ಷ ಬೆಂಬಲ ನೀಡಿದರು. ಕನಕಪುರದಲ್ಲಿಯೂ ಇವರ ಹೊಂದಾಣಿಕೆ ಇದೆ’ ಎಂದೂ ಕಿಡಿ ಕಾರಿದ್ದಾರೆ.

ಲಕ್ಷ್ಮೀ ಹೆಬ್ಬಾಳಕರ ವಿರುದ್ಧವೂ ಮಾತು:

‘ಪಂಚಮಸಾಲಿ ಸಮಾಜದ 2ಎ ಮೀಸಲಾತಿಗಾಗಿ ಬಿಜೆಪಿ ಸರ್ಕಾರ ಇದ್ದಾಗ ನಾನು ಹೋರಾಟದ ನಾಯಕತ್ವ ವಹಿಸಿದ್ದೆ. ಅದೇ ರೀತಿ ಈಗ ನೀವು ವಹಿಸಿಕೊಳ್ಳಿ ಎಂದು ಶಾಸಕ ವಿನಯ ಕುಲಕರ್ಣಿ ಅವರಿಗೆ ಹೇಳಿದ್ದೆ. ಅದಕ್ಕೆ ವಿನಯ ಒಪ್ಪಿದರು. ಇದೇ ಮಾತನ್ನು ನಾನು ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ಹೇಳಿದೆ. ಆದರೆ, ಕಾಂಗ್ರೆಸ್‌ನವರು ನಮಗೆ ಯಾವ ಕಾರಣಕ್ಕೂ ಮೀಸಲಾತಿ ಕೊಡುವುದಿಲ್ಲ ಎಂದು ನೇರವಾಗಿ ಹೇಳಿದರು’ ಎಂದೂ ಯತ್ನಾಳ್‌ ಮಾತಾಡಿದ್ದಾರೆ.

ಯತ್ನಾಳ್‌ ಅವರ ಎದುರಿಗೆ ಕುಳಿತ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಲ್ಲ ಮಾತುಗಳನ್ನು ಆಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT