ಮುಖ್ಯಮಂತ್ರಿ ಸ್ಥಾನದಿಂದ ಇಳಿದು ಒಂದು ವರ್ಷ ಪೂರೈಸುತ್ತಿರುವ ಹೊತ್ತಿನಲ್ಲಿ ಮೌನ ಮುರಿದಿರುವ ಬಿ.ಎಸ್. ಯಡಿಯೂರಪ್ಪ, ತಮ್ಮ ರಾಜಕೀಯ ಕರ್ಮಭೂಮಿ ಶಿಕಾರಿಪುರಕ್ಕೆ ಬಿ.ವೈ. ವಿಜಯೇಂದ್ರ ಅವರೇ ಮುಂದಿನ ಅಭ್ಯರ್ಥಿ ಎಂದು ಘೋಷಿಸುವ ಮುಖೇನ ಬಿಜೆಪಿ ವರಿಷ್ಠರಿಗೆ ಸವಾಲು ಎಸೆದಿದ್ದಾರೆ.

ಮೈಕೈ–ಮನಸ್ಸು ಸದೃಢವಾಗಿರುವಾಗಲೇ ‘ಮಮತೆ’ಯ ಪುತ್ರನನ್ನು ವಿಧಾನಸಭೆಯೊಳಗೆ ಪ್ರತಿಷ್ಠಾಪಿಸಲೇಬೇಕೆಂಬ ಶಪಥ ಮಾಡಿದಂತಿರುವ ಯಡಿಯೂರಪ್ಪ, ಚುನಾವಣೆಗೆ ಒಂಬತ್ತು ತಿಂಗಳು ಇರುವ ಮೊದಲೇ, ಅಖಾಡಕ್ಕೆ ಇಳಿದಿದ್ದಾರೆ. ಮಗನಿಗೆ ಬಿಜೆಪಿ ಟಿಕೆಟ್ ಸಿಗದಿದ್ದರೂ ಆತ ಸ್ಪರ್ಧಿಸುವುದು ಖಚಿತ ಎಂಬರ್ಥದಲ್ಲಿ ಹೇಳುವ ಮೂಲಕ ತಮ್ಮನ್ನು ನಿರ್ಲಕ್ಷಿಸುತ್ತಾ ಬಂದಿರುವ ವರಿಷ್ಠರಿಗೆ ಸಂದೇಶವನ್ನೂ ರವಾನಿಸಿದ್ದಾರೆ.

2018ರ ಚುನಾವಣೆಯಲ್ಲಿ ಬಹುಮತ ಬರದೇ ಇದ್ದರೂ ಛಲ ಬಿಡದ ಯಡಿಯೂರಪ್ಪ, ‘ಆಪರೇಷನ್ ಕಮಲ’ ನಡೆಸಿ ಬಿಜೆಪಿಯನ್ನು ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ತಂದರು. ಎರಡು ವರ್ಷ ಪೂರೈಸುತ್ತಿದ್ದಂತೆ ಅವರನ್ನು ರಾಜೀನಾಮೆಯ ನೆಪದಲ್ಲಿ ಅಧಿಕಾರದಿಂದ ಕೆಳಗಿಳಿಸಲಾಯಿತು. ಅಧಿಕಾರ ಪೂರೈಸಲು ವರಿಷ್ಠರು ಬಿಡಲಿಲ್ಲ ಎಂಬ ಅಸಮಾಧಾನ– ಸಿಟ್ಟು ಯಡಿಯೂರಪ್ಪ ಮನದಿಂದ ಹೋಗಲೇ ಇಲ್ಲ. ‘ಉತ್ತರಾಧಿಕಾರಿ’ ಎಂದು ಅವರ ಕುಟುಂಬಸ್ಥರು ಬಿಂಬಿಸಿರುವ ವಿಜಯೇಂದ್ರ ಅವರಿಗೆ ಪಕ್ಷ ಹಾಗೂ ಸರ್ಕಾರದಲ್ಲಿ ಆಯಕಟ್ಟಿನ ಹುದ್ದೆ ಕೊಡಿಸಲು ಯಡಿಯೂರಪ್ಪ ಶತಾಯಗತಾಯ ಯತ್ನಿಸುತ್ತಲೇ ಬಂದರು.

‘ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮೇಲೆ ಒತ್ತಡ ತಂದು, ವಿಜಯೇಂದ್ರಗೆ ರಾಜಕೀಯ ಪ್ರವೇಶಕ್ಕೆ ಅವಕಾಶ ಕಲ್ಪಿಸು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಆರಂಭಿಕ ನಾಲ್ಕೈದು ತಿಂಗಳು ಒತ್ತಡವನ್ನೂ ಹಾಕಿದರು. ಬೊಮ್ಮಾಯಿಯವರು ಈ ವಿಷಯವನ್ನು ಮೋದಿ–ಶಾ ಗಮನಕ್ಕೆ ತಂದರೂ ನಿರೀಕ್ಷಿತ ಮಟ್ಟದ ಸ್ಪಂದನೆ ಸಿಗಲಿಲ್ಲ. ಈ ವಿಷಯವನ್ನು ಯಡಿಯೂರಪ್ಪರಿಗೆ ಮನವರಿಕೆ ಮಾಡಿಕೊಟ್ಟ ಬೊಮ್ಮಾಯಿ, ಒತ್ತಡದಿಂದ ಪಾರಾದರು. ಆದರೆ, ಕುಟುಂಬದವರ ಒತ್ತಡದ ಕಾರಣಕ್ಕೆ ಈ ವಿಷಯದಿಂದ ಹಿಂಜರಿಯುವ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಕೂಡ ಇರಲಿಲ್ಲ.

ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಯಡಿಯೂರಪ್ಪ ಅನೇಕ ಬಾರಿ ಪ್ರಕಟಿಸಿದರು. ಆದರೆ, ಪಕ್ಷದ ವರಿಷ್ಠರಿಂದ ಸಮ್ಮತಿ ಸಿಗಲೇ ಇಲ್ಲ. ಒಂದು ವರ್ಷದಿಂದ ಈಚೆಗೆ ನಡೆದ ವಿಧಾನಸಭೆ, ರಾಜ್ಯಸಭೆ, ವಿಧಾನಪರಿಷತ್ತಿನ ಚುನಾವಣೆಗಳ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ತಮ್ಮನ್ನು ಕಡೆಗಣಿಸಿರುವುದು ಯಡಿಯೂರಪ್ಪ ಅವರ ಸಹನೆಯನ್ನು ಕೆಡಿಸಿದೆ. ಜೂನ್ 20 ಮತ್ತು 21ರಂದು ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಿದಾಗಲೂ ಅಧಿಕೃತ ಕಾರ್ಯಕ್ರಮಗಳಿಗೆ ಆಹ್ವಾನ ನೀಡದಿರುವುದು ಅವರ ಅಸಮಾಧಾನ ಹೆಚ್ಚಲು ಕಾರಣವಾಗಿತ್ತು.

‘ಬಿಜೆಪಿಯಲ್ಲಿ ಇನ್ನು ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ’ ಎಂದು ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅನೇಕ ಬಾರಿ ಹೇಳಿದ್ದಾರೆ. ಈಗ ಶಾಸಕರಾಗಿರುವ ಯಡಿಯೂರಪ್ಪ ಬಿಜೆಪಿ ರಾಜ್ಯ ಘಟಕದ ಪ್ರಮುಖರ ಸಮಿತಿಯಲ್ಲಿ ಸದಸ್ಯ ಮಾತ್ರ ಆಗಿದ್ದಾರೆ. ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಶಿಫಾರಸು ಮಾಡುವುದಷ್ಟೇ ಈ ಸಮಿತಿಗೆ ಇರುವ ಅಧಿಕಾರ. ಅಭ್ಯರ್ಥಿ ಘೋಷಿಸುವ ಅಧಿಕಾರ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಗೆ ಮಾತ್ರ ಇರುವುದು. ಹೀಗಿದ್ದರೂ, ಯಡಿಯೂರಪ್ಪ ತಾವು ಪ್ರತಿನಿಧಿಸುವ ಶಿಕಾರಿಪುರ ವಿಧಾನಸಭಾ ಕ್ಷೇತ್ರಕ್ಕೆ ಮಗನೇ ಅಭ್ಯರ್ಥಿ ಎಂದು ಘೋಷಿಸಿರುವುದು ಅನೇಕರ ಹುಬ್ಬೇರಿಸಿದೆ.

2018ರ ಚುನಾವಣೆಯಲ್ಲಿಯೇ ಮೈಸೂರಿನ ವರುಣಾ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆಯನ್ನು ವಿಜಯೇಂದ್ರ ಹೊಂದಿದ್ದರು. ಯಡಿಯೂರಪ್ಪ ಅವರಿಗೂ ಅಪೇಕ್ಷೆ ಇತ್ತು. ಆದರೆ, ಅವಕಾಶ ನಿರಾಕರಿಸಿದ್ದ ಪಕ್ಷದ ವರಿಷ್ಠರು, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದರು. ನಂತರ ಮಂಡ್ಯದ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟು ಅವರು ಕೆಲಸ ಮಾಡುತ್ತಿದ್ದರು. ಪ್ರತಿ ಉಪಚುನಾವಣೆ ವೇಳೆಯೂ ಅವರ ಹೆಸರು ಮುನ್ನೆಲೆಗೆ ಬರುವಂತೆ ವಿಜಯೇಂದ್ರ ‘ಆಪ್ತವಲಯ’ ನೋಡಿಕೊಳ್ಳುತ್ತಲೇ ಇತ್ತು. ಸಂಪುಟ ವಿಸ್ತರಣೆ ವೇಳೆ ವಿಜಯೇಂದ್ರ ಅವರು ಸಚಿವರಾಗಲಿದ್ದಾರೆ ಎಂಬ ಸುದ್ದಿಯನ್ನೂ ಹರಿಬಿಡಲಾಗಿತ್ತು. ಆದರೆ, ಅದು ಯಾವುದೂ ನಡೆಯಲೇ ಇಲ್ಲ.

ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ, ವಿಜಯೇಂದ್ರ ಅಭ್ಯರ್ಥಿ ಎಂದು ಸ್ವಯಂ ಪ್ರಕಟಿಸಿರುವ ಯಡಿಯೂರಪ್ಪ, ಜನರ ಆಶೀರ್ವಾದವನ್ನೂ ಕೋರಿದ್ದಾರೆ. ಅಲ್ಲಿಗೆ, ತಮ್ಮ ಉತ್ತರಾಧಿಕಾರಿ ವಿಜಯೇಂದ್ರ ಎಂಬುದನ್ನೂ ಬಹಿರಂಗವಾಗಿ ಹೇಳಿದ್ದಾರೆ. ಇದಕ್ಕೆ ವರಿಷ್ಠರಿಂದ ಬರಲಿರುವ ಪ್ರತಿಕ್ರಿಯೆ ಗಮನಿಸಿ, ತಮ್ಮ ಮುಂದಿನ ‘ರಾಜಕೀಯ ನಡೆ’ಯನ್ನು ನಿರ್ಧರಿಸುವ ಸೂಚನೆಯನ್ನೂ ಯಡಿಯೂರಪ್ಪ ಈ ಪ್ರಕಟಣೆಯ ಮೂಲಕ ನೀಡಿರುವುದಂತೂ ನಿಜ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.