ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯವಾಗಿ ಮಂಕಾದ ವಿರೋಧ ಪಕ್ಷಗಳು: ಸಿದ್ದರಾಮಯ್ಯ

Published 16 ಫೆಬ್ರುವರಿ 2024, 15:26 IST
Last Updated 16 ಫೆಬ್ರುವರಿ 2024, 15:26 IST
ಅಕ್ಷರ ಗಾತ್ರ

ಬೆಂಗಳೂರು: ‘ಗ್ಯಾರಂಟಿ ಯೋಜನೆಗಳಿಂದಾಗಿ ಜನರ ಖರೀದಿಸುವ ಸಾಮರ್ಥ್ಯ ವೃದ್ಧಿಸಿದೆ. ಆರ್ಥಿಕ ಚಲನೆಗೆ ವೇಗ ದೊರೆತಿದೆ. ಬರಗಾಲದ ಮಧ್ಯೆಯೂ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ₹ 52 ಸಾವಿರ ಕೋಟಿ ನೀಡಿದ್ದೇನೆ. ಅಗತ್ಯವಿದ್ದರೆ ಹೆಚ್ಚುವರಿ ಅನುದಾನ ಒದಗಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಜೆಟ್‌ ಮಂಡನೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ಯಾರಂಟಿ ಯೋಜನೆಗಳು ಬಡವರ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿವೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ, ಹಣದುಬ್ಬರ ಇರುವಾಗ ಗ್ಯಾರಂಟಿಗಳು ಜನರ ಬದುಕಿಗೆ ಆಸರೆಯಾಗಿವೆ. ಇತರೆ ಅಭಿವೃದ್ಧಿ ಕೆಲಸಗಳಿಗೆ ₹ 1 ಲಕ್ಷ ಕೋಟಿಗೂ ಹೆಚ್ಚು ಹಣ ಹೊಂದಿಸಲಾಗಿದೆ’ ಎಂದರು.

‘ಹೆಚ್ಚುವರಿ ತೆರಿಗೆಯನ್ನೂ ವಿಧಿಸದೆ ಬಜೆಟ್‌ ಗಾತ್ರವನ್ನು ₹ 3.71 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಇದನ್ನು ಅರ್ಥ ಮಾಡಿಕೊಳ್ಳದ ವಿರೋಧ ಪಕ್ಷಗಳು ಬಿಟ್ಟಿ ಭಾಗ್ಯ ಎನ್ನುತ್ತಾ ಬಡವರಿಗೆ ಅನ್ಯಾಯ ಮಾಡಿವೆ. ಬಜೆಟ್‌ ಮಂಡಿಸುವ ಮೊದಲೇ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ. ಇತಿಹಾಸದಲ್ಲೇ ಯಾವ ವಿರೋಧ ಪಕ್ಷಗಳೂ ಹೀಗೆ ನಡೆದುಕೊಂಡಿಲ್ಲ. ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಅವರ ತಲೆಯಲ್ಲಿ ಏನೂ ಇಲ್ಲ. ರಾಜಕೀಯವಾಗಿ ಮಂಕಾಗಿದ್ದಾರೆ. ಕಾಮಾಲೆ ಕಣ್ಣು ಆವರಿಸಿಕೊಂಡಿದೆ. ತಲೆಗೆ ಮಂಜು ಕವಿದಿದೆ’ ಎಂದು ಟೀಕಿಸಿದರು.

‘ಬಜೆಟ್‌ ಮಂಡನೆಗೂ ಮೊದಲೇ ಫಲಕಗಳನ್ನು ತಂದಿದ್ದಾರೆ. ಇದರ ಅರ್ಥ ಬಜೆಟ್‌ ಓದುವುದನ್ನು ಕೇಳಿಸಿಕೊಳ್ಳಬಾರದು ಎಂದು ಮೊದಲೇ ನಿರ್ಧಾರ ಮಾಡಿಕೊಂಡು ಬಂದಿದ್ದಾರೆ. ಅವರು ಕೇಳದಿದ್ದರೆ ಚಿಂತೆ ಇಲ್ಲ. ವಿತ್ತೀಯ ಶಿಸ್ತು ಪಾಲಿಸಿ ಬಜೆಟ್‌ ಸಿದ್ಧಪಡಿಸಿದ್ದೇನೆ. ರಾಜ್ಯದ ಎಲ್ಲ ಜನರಿಗಾಗಿ ಬಜೆಟ್‌ ವಿವರಗಳನ್ನು ನೀಡಿದ್ದೇನೆ’ ಎಂದರು.

‘ನಮ್ಮ ಪಾಲಿನ ನ್ಯಾಯಯುತ ಪಾಲು ಬರದಿದ್ದರೂ ರಾಜ್ಯ ಆರ್ಥಿಕವಾಗಿ ಸುಭದ್ರವಾಗಿದೆ. ಉತ್ತರದ ರಾಜ್ಯಗಳು ಕಡಿಮೆ ತೆರಿಗೆ ನೀಡಿದರೂ, ಹೆಚ್ಚಿನ ನೆರವು ಪಡೆಯುತ್ತಿವೆ. ಕರ್ನಾಟಕದ ತೆರಿಗೆ ಪಾಲು ಶೇ 77ರಷ್ಟು ಇದ್ದರೂ, ಮರಳಿ ಪಡೆಯುವ ಮೊತ್ತ ಶೇ 23ರಷ್ಟಿದೆ. ಕರ್ನಾಟಕವೆಂಬ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕತ್ತರಿಸಿದಂತೆ ಕೇಂದ್ರದ ನಡೆ ಇದೆ. ಕೇಂದ್ರ ಸರ್ಕಾರ  ಅನ್ಯಾಯ ಮಾಡಬಾರದು. 2017-2018ರಿಂದ ಇಲ್ಲಿಯವರೆಗೆ 1.87 ಲಕ್ಷ ಕೋಟಿ ಬಾಕಿ ಹಣವನ್ನು ನೀಡಿದ್ದರೆ ರಾಜ್ಯವನ್ನು ಯುರೋಪ್‌ನಂತೆ ಅಭಿವೃದ್ಧಿ ಪಡಿಸಬಹುದಿತ್ತು’ ಎಂದರು.

‘ಬಿಜೆಪಿ ವಕ್ತಾರರಾದ ಕುಮಾರಸ್ವಾಮಿ’

ಕೇಂದ್ರ ಬಜೆಟ್‌ನಲ್ಲಿ ಹಿಂದೆ ಭದ್ರಾ ಯೋಜನೆ ₹5,300 ಕೋಟಿ ಘೋಷಿಸಲಾಗಿತ್ತು. ಇದುವರೆಗೂ ನಯಾಪೈಸೆ ಹಣ ಬಂದಿಲ್ಲ. ಬರ ಪರಿಹಾರಕ್ಕೆ ನೆರವು ನೀಡಿಲ್ಲ. ಹಣಕಾಸು ಆಯೋಗದ ಅನುದಾನ ನೀಡಿಲ್ಲ. ಈ ಕುರಿತು ಬಿಜೆಪಿ ಸಂಸದರು, ಶಾಸಕರು ತುಟಿ ಬಿಚ್ಚುತ್ತಿಲ್ಲ. ಬಜೆಟ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿದರೆ ರಾಜ್ಯದ ಜನರಿಗೆ ಸತ್ಯ ಗೊತ್ತಾಗಿ ಬಿಡುತ್ತದೆ ಎಂದು ನಾಟಕ ಮಾಡುತ್ತಿದ್ದಾರೆ. ಇದು ಕನ್ನಡಿಗರಿಗೆ ಬಿಜೆಪಿ ಬಗೆದ ದ್ರೋಹ, ಅವರ ಜತೆ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿಯೂ ಸೇರಿಕೊಂಡಿದ್ದಾರೆ. ಬಿಜೆಪಿ ವಕ್ತಾರಾರಾಗಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಗ್ಯಾರಂಟಿಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ಬಳಕೆ

ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕಾಗಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಗೆ ₹39 ಸಾವಿರ ಕೋಟಿ ನೀಡಲಾಗಿದೆ. ಅಗತ್ಯಬಿದ್ದರೆ ಗ್ಯಾರಂಟಿ ಯೋಜನೆಯಲ್ಲಿನ ಪರಿಶಿಷ್ಟ ಫಲಾನುಭವಿಗಳಿಗೆ ಅದರಲ್ಲೂ ಹಣ ಬಳಸಲಾಗುವುದು. ಮುಸ್ಲಿಂ, ಕ್ರೈಸ್ತರೂ ಸೇರಿದಂತೆ ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ಬಜೆಟ್‌ನಲ್ಲಿ ನೀಡಿರುವುದು ಶೇ 0.8 ಅಷ್ಟೇ. ಆದರೆ, ಬಿಜೆಪಿ ನಾಯಕರು ಇದನ್ನೇ ಮುಸ್ಲಿಮರ ಓಲೈಕೆ ಎನ್ನುತ್ತಾರೆ. ಅವರಿಗೆ ಬೇರೆ ವಿಷಯಗಳೇ ಇಲ್ಲ ಎಂದು ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT