ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಜನಗಣತಿ ನಡೆಸುವುದರಿಂದ ಅರ್ಹರಿಗೆ ಮೀಸಲಾತಿ ಒದಗಿಸಲು ಸಾಧ್ಯ- ಸಿದ್ದರಾಮಯ್ಯ

Last Updated 31 ಆಗಸ್ಟ್ 2021, 9:16 IST
ಅಕ್ಷರ ಗಾತ್ರ

ಬೆಂಗಳೂರು: ‌'ಪ್ರತಿ 10 ವರ್ಷಕ್ಕೊಮ್ಮೆ ಜಾತಿವಾರು ಜನಗಣತಿ ನಡೆಸುವುದರಿಂದ ವೈಜ್ಞಾನಿಕವಾಗಿ ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳನ್ನು ರೂಪಿಸಲು, ಅರ್ಹರಿಗೆ ಮೀಸಲಾತಿ ಒದಗಿಸಲು ಸಾಧ್ಯವಾಗಲಿದೆ' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, '90 ವರ್ಷಗಳ ಹಿಂದಿನ ಜಾತಿ ಜನಗಣತಿ ವರದಿ ಇಟ್ಟುಕೊಂಡು ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇದು ಸರಿಯಲ್ಲ' ಎಂದು ಪ್ರತಿಪಾದಿಸಿದರು.

'ಸ್ವಾತಂತ್ರ್ಯ ನಂತರ ಎಲ್ಲ ಜಾತಿ, ವರ್ಗಗಳಿಗೂ ಸೂಕ್ತ ಅವಕಾಶಗಳು ಸಿಗುತ್ತಿಲ್ಲ. ಹೀಗಾಗಿ ನಮ್ಮ ಕಾಂಗ್ರೆಸ್ ಸರ್ಕಾರಇದ್ದಾಗ ₹ 180 ಕೋಟಿ ಖರ್ಚು ಮಾಡಿಸಿ ಜಾತಿ ಜನಗಣತಿ ಮಾಡಿಸಿದ್ದೇನೆ. ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರೂ ಪ್ರಧಾನಿ ಮೋದಿ ಅವರ ಬಳಿಗೆ ನಿಯೋಗ ಕರೆದೊಯ್ದು ಜಾತಿ ಜನಗಣತಿ ಬೇಡಿಕೆ ಮುಂದಿಟ್ಟಿದ್ದಾರೆ' ಎಂದರು.

'ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿ ನಡೆಯುವ ರೀತಿಯಲ್ಲೇ ಜಾತಿಗಣತಿ ನಡೆದರೆ ಒಳ್ಳೆಯದು. ಜಾತಿ ಜನಗಣತಿ ಅನುಷ್ಠಾನದ ಬಗ್ಗೆ ವಿಧಾನಸಭೆ ಅಧಿವೇಶನದಲ್ಲೂ ಹೋರಾಟ ಮಾಡುತ್ತೇವೆ. ಧ್ವನಿ ಎತ್ತುತ್ತೇವೆ' ಎಂದರು.

ಜಿ.ಟಿ.ದೇವೇಗೌಡ ಅವರು ಜೆಡಿಎಸ್ ತೊರೆದಿದ್ದು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಜಿ.ಟಿ.ದೇವೇಗೌಡ ನನ್ನ ಜತೆಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜತೆಗೂ ಚರ್ಚಿಸಿದ್ದಾರೆ. ಈ ಬಗ್ಗೆ ಹೈಕಮಾಂಡ್ ಜತೆಗೆ ಚರ್ಚಿಸುವುದಾಗಿ ತಿಳಿಸಿದ್ದೇನೆ. ಈ ವಿಚಾರದಲ್ಲಿ ಸದ್ಯಕ್ಕೆ ನಡೆದಿರುವುದು ಇಷ್ಟೇ ಬೆಳವಣಿಗೆ. ಹೈಕಮಾಂಡ್ ಜತೆ ಚರ್ಚಿಸಿದ ಬಳಿಕ ಮುಂದಿನ ಬೆಳವಣಿಗೆ ತಿಳಿಸುತ್ತೇನೆ' ಎಂದರು.

ಮೈಸೂರು ಪಾಲಿಕೆ ಬಿಜೆಪಿ ವಶವಾದ ಕುರಿತು ಪ್ರಸ್ತಾಪಿಸಿದ ಅವರು, 'ಜೆಡಿಎಸ್ ಒಪ್ಪಂದದ ಪ್ರಕಾರ ನಡೆದುಕೊಳ್ಳಲಿಲ್ಲ. ಹೀಗಾಗಿ ಮೂರು ಪಕ್ಷದವರು ಮೇಯರ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದರು. ಅತಿ ಹೆಚ್ಚು ಮತಗಳು ಬಿಜೆಪಿಗೆ ಬಿದ್ದಿದ್ದರಿಂದ ಅವರಿಗೆ ಮೇಯರ್ ಸ್ಥಾನ ಹೋಗಿದೆ' ಎಂದರು.

ಮೆಟ್ರೋ ಅಧಿಕಾರಿಗಳು ಕನ್ನಡವನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ' ಈ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಕನ್ನಡಕ್ಕೆ ಅಗ್ರಸ್ಥಾನ ಇರಬೇಕು. ಕೇಂದ್ರ ಸಚಿವರು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದರೆ ತಪ್ಪಲ್ಲ. ಆದರೆ ಕನ್ನಡ ನೆಲದಲ್ಲಿ ಮೆಟ್ರೋ ಅಧಿಕಾರಿಗಳು ಕನ್ನಡಕ್ಕೆ ಅವಮಾನ ಮಾಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಇದನ್ನು ನಾನು ಖಂಡಿಸುತ್ತೇನೆ' ಎಂದರು.

ಕೋವಿಡ್ ಮೂರನೇ ಅಲೆ ಆತಂಕದಲ್ಲಿ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಸರ್ಕಾರ ಚರ್ಚಿಸುತ್ತಿರುವ ಬಗ್ಗೆಕೇಳಿದ ಪ್ರಶ್ನೆಗೆ ಉತ್ತರಿಸಿ, ಕೋವಿಡ್ ನಿಯಂತ್ರಣದಲ್ಲಿ ಇದ್ದಾಗ ಸೂಕ್ತ ಮುನ್ನೆಚ್ಚರಿಕೆ ಮತ್ತು ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಂಡು ಶಾಲೆಗಳನ್ನು ತೆರೆಯುವುದು ಒಳ್ಳೆಯದು. ಗಣೇಶ ಹಬ್ಬವನ್ನು ಕೂಡಾ ಸಂಭ್ರಮದಿಂದ ಆಚರಿಸಬೇಕು. ಆದರೆ ಅತಿ ಹೆಚ್ಚು ಜನ ಗುಂಪು ಸೇರದಂತೆ, ಸಾರ್ವಜನಿಕವಾಗಿ ಗುಂಪು ಗುಂಪಾಗಿ ಆಚರಣೆ ಮಾಡದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು' ಎಂದು ಹೇಳಿದರು.

ಜನಾಶೀರ್ವಾದ ಯಾತ್ರೆಗೆ ಸಹಸ್ರಾರು ಮಂದಿಯನ್ನು ಸೇರಿಸಿ ಕೇಂದ್ರ ಸಚಿವರು ಮತ್ತು ಬಿಜೆಪಿ ಕೋವಿಡ್ ನಿಯಮ ಉಲ್ಲಂಘಿಸಿದ್ದನ್ನು ತೀವ್ರವಾಗಿ ಖಂಡಿಸಿದ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಫ್ಯೂಸ್ ಹೋಗಿದೆ ಎನ್ನುವ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ವಿಧಾನಸಭಾ ಚುನಾವಣೆ ಬರಲಿ. ನಾಡಿನ ಜನ ಯಾರ ಫ್ಯೂಸ್ ಕಿತ್ತಾಕುತ್ತಾರೆ ಎನ್ನುವುದು ಗೊತ್ತಾಗುತ್ತದೆ. ನಾಲಗೆಗೂ ಮತ್ತು ಮೆದುಳಿಗೂ ಸಂಪರ್ಕವೇ ಕಟ್ ಆಗಿರುವ ಈಶ್ವರಪ್ಪರ ಹೇಳಿಕೆಗಳಿಗೆ ಮಹತ್ವ ನೀಡುವ ಅಗತ್ಯ ಇಲ್ಲ ಎಂದು ಕಿಡಿ ಕಾರಿದರು.

ತೂಕ ಕಡಿಮೆಯಾಗಿದೆ: '10 ದಿನಗಳ ಚಿಕಿತ್ಸೆ ಬಳಿಕ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಿಂದ ಇಂದು ವಾಪಾಸಾಗಿದ್ದೇನೆ. ಕೊರೊನಾ ಸೋಂಕಿಗೆ ಒಳಗಾದ ಬಳಿಕ ದೇಹದ ತೂಕ 3-4 ಕೆ.ಜಿ. ಹೆಚ್ಚಾಗಿತ್ತು. ಈಗ ಮೂರು ಕೆ.ಜಿ. ಕಡಿಮೆಯಾಗಿದೆ' ಎಂದು ಸಿದ್ದರಾಮಯ್ಯ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT