ಬೆಂಗಳೂರು: ಆಧುನಿಕ ತಂತ್ರಜ್ಞಾನಗಳಲ್ಲಿ ಜಾಗತಿಕ ಸ್ಮರ್ಧಾತ್ಮಕತೆಗಾಗಿ ಕೌಶಲ ತರಬೇತಿ ನೀಡುವ ‘ನಿಪುಣ ಕರ್ನಾಟಕ’ ಯೋಜನೆ ಆರಂಭಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಈ ಯೋಜನೆಯನ್ನು ₹100 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು. 2024–25 ನೇ ಸಾಲಿನಲ್ಲಿ ಈ ಯೋಜನೆಯನ್ನು ₹10 ಕೋಟಿ ವೆಚ್ಚದಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗುವುದು. ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉದಯೋನ್ಮುಖ ತಂತ್ರಜ್ಞಾನಗಳ ಕ್ಷೇತ್ರದ ಕೈಗಾರಿಕೆಗಳ ಬೇಡಿಕೆಗಳನ್ನು ಈಡೇರಿಸಲು ಮತ್ತು ಕರ್ನಾಟಕದ ಯುವಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಕೌಶಲ ಮತ್ತು ಪುನರ್ ಕೌಶಲ ಹಾಗೂ ವೃತ್ತಿಪರ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಹಾಸಿಗೆ, ದಿಂಬು, ಡೆಸ್ಕ್ ಖರೀದಿಗೆ ₹18.54 ಕೋಟಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲಾ– ಕಾಲೇಜುಗಳಿಗೆ ₹18.54 ಕೋಟಿ ವೆಚ್ಚದಲ್ಲಿ ಹಾಸಿಗೆ, ದಿಂಬು, ಡೆಸ್ಕ್ ಕಂ ಬೆಂಚ್ ಪೂರೈಕೆಗಾಗಿ ಟೆಂಡರ್ ಕರೆಯಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.
ರಾಜ್ಯದಲ್ಲಿ 174 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಕ್ರೈಸ್ ಅಡಿ ಕಾರ್ಯನಿರ್ವಹಿಸುತ್ತಿವೆ. 43,030 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 174 ರಲ್ಲಿ 66 ವಸತಿ ಶಾಲಾ–ಕಾಲೇಜುಗಳಿಗೆ 16,025 ಹಾಸಿಗೆ ಮತ್ತು ದಿಂಬುಗಳು ಹಾಗೂ 158 ವಸತಿ ಶಾಲಾ ಕಾಲೇಜುಗಳಿಗೆ 5,835 ಡೆಸ್ಕ್ ಕಂ ಬೆಂಚ್‌ಗಳನ್ನು ತುರ್ತಾಗಿ ಒದಗಿಸಬೇಕಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.