ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಡಿಎಲ್ ರದ್ದು: ಸಿದ್ದರಾಮಯ್ಯ ಸೂಚನೆ

65 ಆಂಬುಲೆನ್ಸ್‌ಗಳನ್ನು ಸಾರ್ವಜನಿಕ ಸೇವೆಗೆ
Published : 23 ಸೆಪ್ಟೆಂಬರ್ 2024, 10:21 IST
Last Updated : 23 ಸೆಪ್ಟೆಂಬರ್ 2024, 10:21 IST
ಫಾಲೋ ಮಾಡಿ
Comments

ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸುವ, ಸಂಚಾರಿ ನಿಯಮ ಪಾಲನೆ ಮಾಡದವರ ಚಾಲನಾ ಪರವಾನಗಿ ರದ್ದು ಮಾಡವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ಆರೋಗ್ಯ ಇಲಾಖೆ, ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಧುನಿಕ‌ ಜೀವ ರಕ್ಷಕ ಸವಲತ್ತುಗಳಿರುವ 65 ಆಂಬುಲೆನ್ಸ್‌ಗಳನ್ನು ಸಾರ್ವಜನಿಕ ಸೇವೆಗೆ ನೀಡಿದ ನಂತರ ಅವರು ಮಾತನಾಡಿದರು.

ಸಂಚಾರ ವ್ಯವಸ್ಥೆಗೆ ಕಟ್ಟುನಿಟ್ಟಿನ ನಿಯಮಗಳಿದ್ದರೂ, ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ಕೆಲವರ ನಿರ್ಲಕ್ಷ್ಯದ ಫಲವಾಗಿ ತಪ್ಪು ಮಾಡದ ಹಲವರು ಜೀವ ಕಳೆದುಕೊಳ್ಳುವಂತಾಗಿದೆ. ಸಂಚಾರಿ ನಿಯಮಗಳನ್ನು ಶಿಸ್ತಿನಿಂದ ಪಾಲಿಸಿದರೆ ಬಹುತೇಕ ಅಪಘಾತಗಳನ್ನು ತಡೆಯಬಹುದು. ಕುಡಿದು, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲಾಯಿಸುವ ಪ್ರಕರಣಗಳಿಗೆ ಸಂಪೂರ್ಣ ಕಡಿವಾಣ ಬೀಳಬೇಕು. ಎಲ್ಲ ರೀತಿಯ ಅಪಘಾತ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ನೀಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ನಿಯಮ ಉಲ್ಲಂಘಿಸಿದವರ ಪರವಾನಗಿ ರದ್ದು ಮಾಡಬೇಕು ಎಂದರು. 

ತುರ್ತು ಚಿಕಿತ್ಸೆಗೆ ನೆರವಾಗಲಿವೆ ಆಂಬುಲೆನ್ಸ್‌

ಅಪಘಾತಗಳು ಸಂಭವಿಸಿದಾಗ ‘‌ಗೋಲ್ಡನ್‌ ಅವರ್‌’ ಬಹಳ ಮುಖ್ಯ. ಅಪಘಾತವಾದ ಒಂದು ಗಂಟೆಯ ಒಳಗೆ ಅಗತ್ಯ ಚಿಕಿತ್ಸೆ ದೊರೆತರೆ ನೂರಾರು ಜನರ ಪ್ರಾಣ ಉಳಿಸಲು ಸಾಧ್ಯವಾಗುತ್ತದೆ. ಅವರಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ, ಸಮೀಪದ ಆಸ್ಪತ್ರೆಗಳಿಗೆ ತ್ವರಿತವಾಗಿ ಕರೆದುಕೊಂಡು ಹೋಗಲು ಹೊಸ ಆಂಬುಲೆನ್ಸ್‌ಗಳು ನೆರವಾಗಲಿವೆ ಎಂದು ಹೇಳಿದರು.

ಸದ್ಯ 65 ಆಂಬುಲೆನ್ಸ್‌ ನೀಡಿದ್ದೇವೆ. ಮುಂದಿನ‌ ದಿನಗಳಲ್ಲಿ ಇಡೀ ರಾಜ್ಯಕ್ಕೆ ಅಗತ್ಯವಿರುವಷ್ಟು ವಾಹನಗಳನ್ನು ನೀಡಲಾಗುವುದು ಎಂದರು.

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ  ಉಪಸ್ಥಿತರಿದ್ದರು.

‘ಸಿ.ಎಂ ಆಪತ್ಕಾಲಯಾನ’ ಕಾರ್ಯ ಹೇಗೆ?

ಅಪಘಾತ ಪ್ರಕರಣಗಳು ನಡೆದಾಗ ಗಾಯಗೊಂಡ ವ್ಯಕ್ತಿಗಳಿಗೆ ತುರ್ತು ಚಿಕಿತ್ಸೆ ದೊರಕಿಸಲು ‘ಸಿ.ಎಂ ಆಪತ್ಕಾಲಯಾನ’ ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಅಪಘಾತ ನಡೆಯುವ ಸ್ಥಳಗಳನ್ನು (ಬ್ಲಾಕ್‌ಸ್ಪಾಟ್‌) ಗುರುತಿಸಲಾಗಿದೆ. ಅಂತಹ ಸ್ಥಳಗಳ ಸಮೀಪ ಇರುವ ಪ್ರತಿ ಆಸ್ಪತ್ರೆಗಳಿಗೆ ಈ ಯೋಜನೆ ಅಡಿ ತಲಾ ಒಂದು ಆಂಬುಲೆನ್ಸ್‌ ನೀಡಲಾಗುತ್ತದೆ.  ವೆಂಟಿಲೇಟರ್‌ ಸೇರಿದಂತೆ ಆಧುನಿಕ ತಂತ್ರಜ್ಞಾನ ಒಳಗೊಂಡ ಉಪಕರಣಗಳನ್ನು ಒಳಗೊಂಡಿರುತ್ತದೆ. ಅಪಘಾತದ ಮಾಹಿತಿ ದೊರೆತ ತಕ್ಷಣ ಆಂಬುಲೆನ್ಸ್ ಸ್ಥಳಕ್ಕೆ ತಲುಪಲಿದೆ. ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಅದಕ್ಕಾಗಿ ಒಬ್ಬರು ಶುಶ್ರೂಣಾಧಿಕಾರಿ ನಿಯೋಜನೆ ಮಾಡಲಾಗುತ್ತದೆ. ಅಪಘಾತಕ್ಕೆ ಒಳಗಾದ ಕುಟುಂಬದವರು ಯಾವುದೇ ವೆಚ್ಚ ಭರಿಸಬೇಕಿಲ್ಲ. ಮೊದಲ ಹಂತದಲ್ಲಿ ಎಂಟು ಜಿಲ್ಲೆಗಳ 65 ಸ್ಥಳಗಳನ್ನು ಗುರುತಿಸಲಾಗಿದ್ದು ಹಂತಹಂತವಾಗಿ ರಾಜ್ಯದ ಎಲ್ಲಡೆ ಇಂತಹ ಆಂಬುಲೆನ್ಸ್‌ ಪೂರೈಸಲಾಗುತ್ತದೆ. 

ಪ್ರತಿ ವರ್ಷ 40 ಸಾವಿರ ಅಪಘಾತ ಪ್ರಕರಣಗಳು ನಡೆಯುತ್ತಿವೆ. 10 ಸಾವಿರ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಜನರ ಜೀವರಕ್ಷಣೆಗೆ ‘ಆಪತ್ಕಾಲಯಾನ’ ಸೇವೆ ಆರಂಭಿಸಲಾಗಿದೆ.
ದಿನೇಶ್‌ ಗುಂಡೂರಾವ್, ಆರೋಗ್ಯ ಸಚಿವ
ಜನರ ಜೀವರಕ್ಷಣೆಗಾಗಿ ರಸ್ತೆ ಸುರಕ್ಷತಾ ನಿಧಿಯಲ್ಲಿ ಹೆಚ್ಚಿನ ಆಂಬುಲೆನ್ಸ್‌ಗಳನ್ನು ಒದಗಿಸಲು ಸಹಕಾರ ನೀಡಲಾಗುವುದು.
ರಾಮಲಿಂಗಾರೆಡ್ಡಿ‌, ಸಾರಿಗೆ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT