ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಗಣತಿ ವರದಿ ಬಿಡುಗಡೆ ನಂತರ ಅಭಿಪ್ರಾಯ ನೀಡಿ: ಎಚ್. ಕಾಂತರಾಜ

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜ ಹೇಳಿಕೆ
Published 25 ನವೆಂಬರ್ 2023, 16:03 IST
Last Updated 25 ನವೆಂಬರ್ 2023, 16:03 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾತಿ ಗಣತಿ ವರದಿಯು ಅತ್ಯಂತ ವೈಜ್ಞಾನಿಕವಾಗಿದೆ. ಆಯೋಗದ ವರದಿಯನ್ನು ಸರ್ಕಾರ ಬಿಡುಗಡೆ ಮಾಡಿದ ನಂತರ ಪರಿಶೀಲಿಸಿ, ಅಧ್ಯಯನ ಮಾಡಿ ಅಭಿಪ್ರಾಯಗಳನ್ನು ನೀಡುವುದು ಸೂಕ್ತ’ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರೂ ಆದ ಹೈಕೋರ್ಟ್‌ ವಕೀಲ ಎಚ್. ಕಾಂತರಾಜ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಈ ಹಂತದಲ್ಲಿ ಆಯೋಗದ ವರದಿಯನ್ನು ಅವೈಜ್ಞಾನಿಕವಾಗಿದೆ ಎಂದು ಹೇಳುವುದು ಸರಿಯಲ್ಲ’ ಎಂದರು.

‘ರಾಜ್ಯದಾದ್ಯಂತ ಮನೆ–ಮನೆಗೆ ಹೋಗಿ ಜಾತಿಗಣತಿಯ ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಉದ್ಯೋಗ, ಕೌಟುಂಬಿಕ, ಚಿರಾಸ್ತಿಗೆ ಸಂಬಂಧಪಟ್ಟ ಒಟ್ಟು 55 ಅಂಶಗಳ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ಕಾನೂನಿನಲ್ಲಿ ಆಯೋಗದ ವರದಿ ಮರುಪರಿಶೀಲನೆಗೆ ಅವಕಾಶವಿಲ್ಲ. ಸರ್ಕಾರಕ್ಕೆೆ ಮಾತ್ರ ಅದು ಸಾಧ್ಯ. ಕೆಲವರು ಈ ವರದಿ ಸೋರಿಕೆಯಾಗಿದೆ, ಅವೈಜ್ಞಾನಿಕವಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಮಾತಿನಲ್ಲಿ ಯಾವುದೇ ಸತ್ಯವಿಲ್ಲ. ಸೋರಿಕೆ ಆಗಿರುವುದನ್ನು ಸಾಬೀತುಮಾಡಲಿ. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸಮೀಕ್ಷೆಯನ್ನು ಪರಿಶೀಲಿಸಿದ್ದು, ‘ವೈಜ್ಞಾನಿಕವಾಗಿದೆ’ ಎಂದು ದೃಢೀಕರಿಸಿದೆ’ ಎಂದರು.

‘ಸಮೀಕ್ಷಾ ವರದಿಯನ್ನು ರಾಜ್ಯ ಸರ್ಕಾರ ಸ್ವೀಕರಿಸಬೇಕೆಂದು ಆಯೋಗ ಮನವಿ ಮಾಡುತ್ತಾ ಬಂದಿದೆ. ಹಿಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೂ ವರದಿ ಸ್ವೀಕರಿಸುವಂತೆ ಮನವಿ ಮಾಡಲಾಗಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲು ಅವಕಾಶ ಕೋರಲಾಗಿತ್ತು. ಆದರೆ, ಅವಕಾಶ ದೊರೆಯಲಿಲ್ಲ’ ಎಂದು ದೂರಿದರು.

‘ನಾವು ತಯಾರಿಸಿದ ಕೊನೆಯ ಸಂಪುಟಕ್ಕೆ ಸದಸ್ಯ ಕಾರ್ಯದರ್ಶಿಯು ಸಹಿ ಮಾಡಿರುವುದಿಲ್ಲ. ಆದರೆ ಈ ಪುಸ್ತಕದಲ್ಲಿರುವ ವಿಷಯಗಳಿಗೆ ಸಂಬಂಧಪಟ್ಟ ಆಯೋಗದ ನಡಾವಳಲ್ಲಿ ಭಾಗವಹಿಸಿ ಒಪ್ಪಿಗೆ ನೀಡಿದ್ದಾರೆ. 2019ರ ಸೆ. 21ರಂದು ಆಯೋಗದ ಅಧ್ಯಕ್ಷರ ಮತ್ತು ಸದಸ್ಯರ ನೇಮಕಾತಿ ರದ್ದುಪಡಿಸಿದ ಹಿನ್ನೆೆಲೆಯಲ್ಲಿ ಆಗ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿದ್ದ ಪಿ. ವಸಂತಕುಮಾರ್ ಅವರಿಗೆ ಸಮೀಕ್ಷೆ ವರದಿಯನ್ನು ನೀಡಲಾಗಿತ್ತು. ಆಯೋಗ ಸಂಗ್ರಹಿಸಿದ ಮಾಹಿತಿಯನ್ನು ಅಧ್ಯಕ್ಷರು, ಎಲ್ಲ ಸದಸ್ಯರು,ಸದಸ್ಯ ಕಾರ್ಯದರ್ಶಿಗಳು ಸಹಿ ಮಾಡಿ ದೃಢೀಕರಿಸಿರುತ್ತಾರೆ. ಈ ಅವಧಿಯಲ್ಲಿ 3 ಜನ ಸದಸ್ಯ ಕಾರ್ಯದರ್ಶಿಗಳು ಕಾರ್ಯ ನಿರ್ವಹಿಸಿದ್ದು ಕಲಾವಧಿಗೆ ತಕ್ಕಂತೆ ಎಲ್ಲಾ ಸಂಪುಟಗಳಿಗೂ ಎಲ್ಲ ದತ್ತಾಂಶಗಳಿಗೂ ಸಹಿ ಮಾಡ್ಡಿದಾರೆ’ ಎಂದು ಹೇಳಿದರು.

ಆಯೋಗದ ಮಾಜಿ ಸದಸ್ಯರಾದ ಜಿ.ಡಿ. ಗೋಪಾಲ್, ಎಂ. ಗುರುಲಿಂಗಯ್ಯ, ಎನ್.ಪಿ. ಧರ್ಮರಾಜ್, ಶರಣಪ್ಪ ಡಿ. ಮಾನೇಗಾರ, ಕೆ.ಎನ್. ಲಿಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT