ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ವರದಿ ಕಳ್ಳತನಕ್ಕೆ ಸರ್ಕಾರ ಕಾರಣವೆ: ಬಿಜೆಪಿ ಪ್ರಶ್ನೆ

Published 23 ನವೆಂಬರ್ 2023, 0:01 IST
Last Updated 23 ನವೆಂಬರ್ 2023, 0:01 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾತಿ ಗಣತಿಯ ಮೂಲಪ್ರತಿ ಕಳ್ಳತನ ಆಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದಿರುವುದು ಗಂಭೀರ ವಿಷಯ. ವರದಿ ಕಳ್ಳತನ ಆಗಿದ್ದರೆ ಸರ್ಕಾರ ಕಳ್ಳತನ ಮಾಡಿದೆಯೇ? ಆಯೋಗ ಕಳ್ಳತನ ಮಾಡಿದೆಯೇ? ಅಥವಾ ಗೃಹ ಇಲಾಖೆಯವರು ಕಳ್ಳತನ ಮಾಡಿದ್ದಾರೆಯೆ’ ಎಂದು ಬಿಜೆಪಿ ಶಾಸಕ ವಿ.ಸುನಿಲ್‌ಕುಮಾರ್‌ ಪ್ರಶ್ನಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವರದಿಯ ಮೂಲ ಪ್ರತಿ ಕಳುವಾಗಿದ್ದರೆ, ಯಾವ ಪ್ರತಿಯನ್ನು ಇಟ್ಟುಕೊಂಡು ವಾದ–‍ಪ್ರತಿವಾದ ನಡೆಸುತ್ತಿದ್ದಾರೆ ಎಂಬ ಬಗ್ಗೆಯೂ ಮುಖ್ಯಮಂತ್ರಿಯವರು ಮಾಹಿತಿ ನೀಡಬೇಕು’ ಎಂದು ಆಗ್ರಹಿಸಿದರು.

‘ಒಂದು ಕಡೆ ವರದಿ ಸರಿ ಇಲ್ಲ ಎಂದು ಉಪಮುಖ್ಯಮಂತ್ರಿ ಹೇಳಿದರೆ, ವರದಿಯನ್ನು ಸ್ವೀಕರಿಸಲು ಸಿದ್ಧ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಆದರೆ, ಆಯೋಗದ ಅಧ್ಯಕ್ಷರು ವರದಿ ಕಳೆದು ಹೋಗಿದೆ ಎಂದಿದ್ದಾರೆ. ಯಾರ ಮಾತನ್ನು ನಂಬಬೇಕು’ ಎಂದು ಪ್ರಶ್ನಿಸಿದ ಸುನಿಲ್‌, ‘ಈ ಬಗ್ಗೆ ಸಾರ್ವಜನಿಕ ಚರ್ಚೆ ಅಗತ್ಯ’ ಎಂದು ಹೇಳಿದರು.

‘ಈ ಎಲ್ಲ ಗೊಂದಲಗಳ ಕುರಿತು ಸರ್ಕಾರ ಸ್ಪಷ್ಟ ನಿಲುವನ್ನು ತಿಳಿಸಬೇಕು. ಸರ್ಕಾರದಲ್ಲಿ ಒಬ್ಬೊಬ್ಬರ ನಿಲುವು ಒಂದೊಂದು ರೀತಿ ಇದೆ. ರಾಜ್ಯದ ಜನ ಯಾರ ಮಾತನ್ನು ನಂಬಬೇಕು? ಕೇವಲ ಲೋಕಸಭಾ ಚುನಾವಣೆ ದೃಷ್ಟಿಯಿಂದ, ಮತಗಳ ದೃಷ್ಟಿಕೋನದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಕತ್ತಲಲ್ಲಿ ಇಡುವ ಪ್ರಯತ್ನ ನಡೆದಿದೆ’ ಎಂದು ಅವರು ದೂರಿದರು.

‘ಬೆಳಗಾವಿ ಅಧಿವೇಶನಕ್ಕೂ ಮೊದಲು ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು. 10 ವರ್ಷಗಳ ಹಿಂದೆ ಈ ವರದಿ ಕೊಡಲಾಗಿದೆ. ಇದಕ್ಕೆ  ರಾಜ್ಯ ಸರ್ಕಾರದ ಸಚಿವರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಅನುಮಾನಕ್ಕೆಡೆ ಮಾಡಿದೆ. ಹಿಂದುಳಿದ ವರ್ಗಗಳನ್ನು ಕತ್ತಲಲ್ಲಿ ಇಡುವ ಪ್ರಯತ್ನ ಸರ್ಕಾರ ನಡೆಸಿದೆ’ ಎಂದು ಸುನಿಲ್‌ಕುಮಾರ್‌ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT