ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಜಾತಿಗಣತಿ ವರದಿ ಸ್ವೀಕಾರ: ‘ಅಹಿಂದ ಸಮುದಾಯಗಳ ಬೇಡಿಕೆಗೆ ಮಣೆ’

ಲಿಂಗಾಯತ, ಒಕ್ಕಲಿಗರ ತೀವ್ರ ವಿರೋಧ
Published : 29 ಫೆಬ್ರುವರಿ 2024, 23:30 IST
Last Updated : 29 ಫೆಬ್ರುವರಿ 2024, 23:30 IST
ಫಾಲೋ ಮಾಡಿ
Comments
55 ಮಾನದಂಡ ಆಧರಿಸಿ ಸಮೀಕ್ಷೆ:
2011ರ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆ 6.30 ಕೋಟಿ. ಈ ಪೈಕಿ, ಸರಿಸುಮಾರು 6 ಕೋಟಿ ಜನಸಂಖ್ಯೆ ಈ ಸಮೀಕ್ಷೆಯ ವ್ಯಾಪ್ತಿಗೆ ಬಂದಿದೆ. ಬೆಂಗಳೂರಿನಲ್ಲಿ ಶೇ 84ರಷ್ಟು ಸಮೀಕ್ಷೆ ನಡೆದಿದೆ. ಉಳಿದ ಜಿಲ್ಲೆಗಳಲ್ಲಿ ಶೇ 98ರಷ್ಟು ಜನರನ್ನು ಸಮೀಕ್ಷೆ ಒಳಗೊಂಡಿದೆ. ಪರಿಶಿಷ್ಟ ಜಾತಿಯಲ್ಲಿ 101, ಪರಿಶಿಷ್ಟ ಪಂಗಡದಲ್ಲಿ 51 ಜಾತಿಗಳಿವೆ. ಸರ್ಕಾರ ಗುರುತಿಸಿರುವ 816 ಇತರ ಹಿಂದುಳಿದ ಜಾತಿಗಳು (ಒಬಿಸಿ) ಸೇರಿ ಒಟ್ಟು 1,351 ಜಾತಿಗಳ ಕುರಿತು 55 ಮಾನದಂಡ ಆಧರಿಸಿ ಈ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆಯ ಬಳಿಕ 464 ಜಾತಿಗಳನ್ನು ಹೊಸತಾಗಿ ಗುರುತಿಸಿ ಪಟ್ಟಿ ಮಾಡಲಾಗಿದೆ. ಉತ್ತರಪ್ರದೇಶ, ಬಿಹಾರ, ಆಂಧ್ರ ಪ್ರದೇಶ ಮತ್ತಿತರ ರಾಜ್ಯಗಳಿಂದ ವಲಸೆ ಬಂದು 60–70 ವರ್ಷಗಳಿಂದ ಇಲ್ಲಿ ನೆಲೆಸಿದವರು ತಮ್ಮ ಜಾತಿ ನಮೂದಿಸಿದ್ದಾರೆ. ಈ ಜಾತಿಗಳು ಕೇವಲ 10 ಜನರಿಂದ 200ರವರೆಗೆ ಜನಸಂಖ್ಯೆ ಹೊಂದಿವೆ ಎಂಬ ಮಾಹಿತಿ ವರದಿಯಲ್ಲಿದೆ.
₹158.47 ಕೋಟಿ ವೆಚ್ಚ
ರಾಜ್ಯ ಸರ್ಕಾರ ಈ ಸಮೀಕ್ಷೆಗೆ 2014–2015ನೇ ಸಾಲಿನಿಂದ 2016–17ನೇ ಸಾಲಿನವರೆಗೆ ಒಟ್ಟು ₹206.84 ಕೋಟಿ ನಿಗದಿಪಡಿಸಿದ್ದು, ಅದರಲ್ಲಿ ₹ 192.79 ಕೋಟಿ ಬಿಡುಗಡೆ ಮಾಡಿದೆ. ವರದಿ ಸಿದ್ಧಪಡಿಸಲು ₹158.47 ಕೋಟಿ ವೆಚ್ಚ ಮಾಡಲಾಗಿದೆ. ಜಾತಿ ಜನಗಣತಿಯ ಗಣಕೀಕರಣಕ್ಕೆ ಬಿಇಎಲ್‌ ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದಕ್ಕೆ, ₹43.09 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. 2015ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯನ್ನು 6.50 ಕೋಟಿ ಎಂದು ಅಂದಾಜಿಸಿ, ಪ್ರತಿ ವ್ಯಕ್ತಿಯ ಮಾಹಿತಿ ಗಣಕೀಕರಿಸಲು ಮತ್ತು ಪೋರ್ಟಲ್‌ನಲ್ಲಿ ಅಳವಡಿಸಿ ಆಯೋಗಕ್ಕೆ ಬೇಕಾಗುವ ವರದಿ ಒದಗಿಸಲು ತಲಾ ₹6.14ರಂತೆ ಸಂಸ್ಥೆಗೆ ವಹಿಸಲಾಗಿತ್ತು.
‘ವರದಿ ನೋಡಿ ಅಂತಿಮ ನಿರ್ಧಾರ’
‘ಹಿಂದುಳಿದ ವರ್ಗಗಳ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ಜಾತಿ ಜನಗಣತಿ ವರದಿಯಲ್ಲಿ ಏನಿದೆಯೋ ಗೊತ್ತಿಲ್ಲ. ಅದನ್ನು ಗಮನಿಸಿದ ಮೇಲೆ, ವರದಿಯನ್ನು ಒಪ್ಪಿಕೊಳ್ಳಬೇಕೊ, ಬಿಡಬೇಕೊ ಎನ್ನುವುದನ್ನು ಸರ್ಕಾರ ತೀರ್ಮಾನಿಸಲಿದೆ’ ಎಂದು ಕೈಗಾರಿಕಾ ಸಚಿವ ಎಂ‌.ಬಿ. ಪಾಟೀಲ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜಾತಿ ಗಣತಿ ವರದಿ ಬಗ್ಗೆ ವಿಶೇಷವಾಗಿ ವೀರಶೈವ ಲಿಂಗಾಯತ ಸಮುದಾಯದವರಿಗೆ ಆತಂಕ ಇರುವುದು ನಿಜ. ಏಕೆಂದರೆ, ಇಲ್ಲಿ ಹೆಚ್ಚಿನವರು ಉಪಪಂಗಡಗಳ ಹೆಸರು ಬರೆಸಿದ್ದಾರೆ. ಇದರ ಬದಲು ಎಲ್ಲ ಉಪಪಂಗಡಗಳೂ ‘ವೀರಶೈವ ಲಿಂಗಾಯತ’ ಎಂದಾಗಬೇಕು ಎಂದು ನಾವು ದನಿ ಎತ್ತಿದ್ದು ನಿಜ’ ಎಂದು ಅವರು ವಿವರಿಸಿದರು. ‘ಇದೇ ರೀತಿಯ ಗೊಂದಲ, ಆತಂಕ ಒಕ್ಕಲಿಗರು ಸೇರಿದಂತೆ ಹಲವು ಸಮುದಾಯಗಳಿಗೆ ಇವೆ. ಇವೆಲ್ಲವನ್ನೂ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳಲಿದೆ. ಅಂತಿಮ ತೀರ್ಮಾನ ಸರ್ಕಾರದ ವಿವೇಚನೆಗೆ ಬಿಟ್ಟಿದ್ದು’ ಎಂದರು.
ಹಿಂದುಳಿದ ವರ್ಗಗಳ ಆಯೋಗದಿಂದ ನಾನು ವರದಿ ಸ್ವೀಕರಿಸಿದ್ದೇನೆ. ಸಚಿವ ಸಂಪುಟ ಸಭೆಯ ಮುಂದಿಟ್ಟು ವರದಿ ಬಗ್ಗೆ ಚರ್ಚಿಸಲಾಗುವುದು.
ಸಿದ್ದರಾಮಯ್ಯ,ಮುಖ್ಯಮಂತ್ರಿ
ವರದಿ ಸಲ್ಲಿಸುವ ಮೂಲಕ ಬಹಳ ದೊಡ್ಡ ಜವಾಬ್ದಾರಿ ನಿಭಾಯಿಸಿದ್ದೇವೆ. ಮುಂದಿನ ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದಾಗಿದೆ. ವರದಿ ಸೋರಿಕೆಯಾಗಿಲ್ಲ
.ಕೆ. ಜಯಪ್ರಕಾಶ್‌ ಹೆಗ್ಡೆ, ಅಧ್ಯಕ್ಷ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ
ಜಾತಿ ಜನಗಣತಿ ವರದಿಯನ್ನು ನೋಡದೇ ವಿರೋಧ ಮಾಡುವುದು ಸರಿಯಲ್ಲ. ವರದಿ ಬಿಡುಗಡೆಯಾದ ಬಳಿಕ ಈ ಕುರಿತು ಚರ್ಚೆ ಮಾಡುವುದು ಸೂಕ್ತ
ಶಿವರಾಜ ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ
ಸರ್ಕಾರ ರೂಪಿಸಿರುವ ಜಾತಿ ಗಣತಿ ಅವೈಜ್ಞಾನಿಕವಾಗಿದ್ದು, ಇದನ್ನು ವೈಜ್ಞಾನಿಕವಾಗಿ ರೂಪಿಸಲಿ. ಸರಿಯಾದ ಅಂಕಿ ಅಂಶ ಸಂಗ್ರಹಿಸಿ ವರದಿ ನೀಡಲಿ.
ಆರ್. ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
‘ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ’
‘ಜಾತಿ ಜನಗಣತಿ ವಿರೋಧಿಸಿ ವೀರಶೈವ ಮಹಾಸಭಾದಿಂದ ಮುಖ್ಯಮಂತ್ರಿಗೆ ಈಗಾಗಲೇ ಎರಡು ಬಾರಿ ಮನವಿ ಸಲ್ಲಿಸಲಾಗಿದೆ. ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ವೀರಶೈವ ಮಹಾಸಭಾ ಸಮ್ಮೇಳನದಲ್ಲಿ ಕೂಡ ಜಾತಿ ಜನಗಣತಿ ವಿರೋಧಿಸಿ ನಿರ್ಣಯ ಅಂಗೀಕರಿಸಲಾಗಿದೆ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು. ‘ಜಾತಿ ಜನಗಣತಿ ವರದಿ ಅವೈಜ್ಞಾನಿಕ ಎಂಬ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಮನೆ, ಮನೆಗೆ ಭೇಟಿ ನೀಡದೆ ಅವೈಜ್ಞಾನಿಕವಾಗಿ ತಯಾರಿಸಲಾದ ವರದಿಯನ್ನು ಸಮಾಜ ಒಪ್ಪುವುದಿಲ್ಲ. ಈ ನಿಟ್ಟಿನಲ್ಲಿ ಹೋರಾಟ ಮುಂದುವರಿಯಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT