ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಎಸ್‌ಇ – ಶುಲ್ಕ ನಿಗದಿ ಅಧಿಕಾರ ರಾಜ್ಯ ಸರ್ಕಾರದ್ದು: ಮಂಡಳಿ ಸ್ಪಷ್ಟನೆ

Last Updated 11 ಜುಲೈ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಜೊತೆ ಸಂಯೋಜನೆಗೊಂಡಿರುವ ಶಾಲೆಗಳಲ್ಲಿ ಶುಲ್ಕ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ರಾಜ್ಯದಲ್ಲಿರುವ ಸಿಬಿಎಸ್‌ಇ ಶಾಲೆಗಳಲ್ಲಿನ ಶುಲ್ಕ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೇಳಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಮಾರ್ಚ್‌ 12ರಂದು ಮಂಡಳಿಗೆ ಪತ್ರ ಬರೆದಿದ್ದರು. ಆ ಪತ್ರಕ್ಕೆ ಇದೇ 9ರಂದು ಪ್ರತಿಕ್ರಿಯಿಸಿರುವ ಮಂಡಳಿಯ ಜಂಟಿ ಕಾರ್ಯದರ್ಶಿ, ‘ಶುಲ್ಕ ಎಷ್ಟಿರಬೇಕೆಂದು ನಿರ್ಣಯಿಸುವ ಅಧಿಕಾರ ರಾಜ್ಯ ಸರ್ಕಾರಗಳದ್ದು’ ಎಂದಿದ್ದಾರೆ.

ಈ ಬಗ್ಗೆ ಸಿಬಿಎಸ್‌ಇ ಸಂಯೋಜಿತ ಶಾಲೆಗಳ ಬೈಲಾ –2018ರಲ್ಲಿರುವ ನಿಯಮವನ್ನು ಪತ್ರದಲ್ಲಿ ಉಲ್ಲೇಖಿಸಿರುವ ಅವರು, ‘ನಿಯಮ 7.3ರ ಪ್ರಕಾರ ರಾಜ್ಯ ಸರ್ಕಾರಗಳ ಶಿಕ್ಷಣ ಇಲಾಖೆಗಳು ಸೂಚಿಸಿರುವ ಮುಖ್ಯಸ್ಥರು ಶುಲ್ಕ ನಿಗದಿಪಡಿಸಬಹುದು. ನಿಯಮ 7.8ರ ಪ್ರಕಾರ, ರಾಜ್ಯಗಳಲ್ಲಿರುವ ಶಾಲೆಗಳ ಕೆಟಗರಿಗಳಿಗೆ ಅನುಗುಣವಾಗಿ ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸುವ ಕಾಯ್ದೆಗಳು ಮತ್ತು ನಿಯಂತ್ರಣ ಗಳು, ಸಿಬಿಎಸ್‌ಇ ಮಂಡಳಿಯ ಜೊತೆ ಸಂಯೋಜಿತ ಶಾಲೆಗಳಿಗೂ ಅನ್ವಯವಾಗಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ, ರಾಜ್ಯ ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಒಪ್ಪಲು ಸಿಬಿಎಸ್‌ಇ ಪಠ್ಯ ಕ್ರಮ ಬೋಧಿಸುವ ಶಾಲಾ ಆಡಳಿತ ಮಂಡಳಿಗಳು ತಯಾರಿಲ್ಲ. ‘ಸಿಬಿಎಸ್‌ಇ ಪಠ್ಯಕ್ರಮ ಬೋಧಿಸುವ ಶಾಲೆಗಳು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಶುಲ್ಕ ನಿಗದಿಪಡಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ’ ಎಂದೂ ಹೇಳುತ್ತಿವೆ.

ಕೋವಿಡ್‌ ಕಾರಣದಿಂದ ಶಾಲೆಗಳು ಮುಚ್ಚಿದ್ದು, ಖಾಸಗಿ ಶಾಲಾ ಆಡಳಿತ ಮಂಡಳಿಗಳು ಪೂರ್ಣ ಶುಲ್ಕ ಪಡೆಯುವ ಬಗ್ಗೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಶುಲ್ಕದ ವಿಚಾರದಲ್ಲಿ ಉಂಟಾಗಿದ್ದ ಗೊಂದಲ ಪರಿಹರಿಸಲು 2021 ಜ. 29ರಂದು ಸುತ್ತೋಲೆ ಹೊರಡಿಸಿದ್ದ ರಾಜ್ಯ ಸರ್ಕಾರ, 2020–21ನೇ ಸಾಲಿಗೆ ಮಾತ್ರ ಅನ್ವಯಿಸುವಂತೆ ಶೇ 70 ರಷ್ಟು ಬೋಧನಾ ಶುಲ್ಕ ಮಾತ್ರ ಪಡೆಯಬೇಕು ಎಂದು ಆದೇಶಿಸಿತ್ತು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಾಲಾ ಆಡಳಿತ ಮಂಡಳಿಗಳುಹೈಕೋರ್ಟ್‌ ಮೆಟ್ಟಿಲೇರಿದ್ದು, ಪ್ರಕರಣ ವಿಚಾರಣೆಯ ಹಂತದಲ್ಲಿದೆ.

ಈ ಮಧ್ಯೆ, ಶುಲ್ಕದಗೊಂದಲ ಪರಿಹರಿಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸುವ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿದೆ. ಶುಲ್ಕದಲ್ಲಿ ಶೇ 30 ರಷ್ಟು ಕಡಿತ ಮಾಡಿದ್ದ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆಯಾಗಿಮಧ್ಯಂತರ ಅರ್ಜಿಯನ್ನು (ಐ.ಎ) ಸರ್ಕಾರ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT