ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಂದಲೂ ಲಿಂಗಾಯತರ ನಿಷ್ಠೆ ಬದಲಾಯಿಸಲು ಸಾಧ್ಯವಿಲ್ಲ : ಸಿ.ಸಿ.ಪಾಟೀಲ

Published 22 ಏಪ್ರಿಲ್ 2023, 15:34 IST
Last Updated 22 ಏಪ್ರಿಲ್ 2023, 15:34 IST
ಅಕ್ಷರ ಗಾತ್ರ

ಗದಗ: ‘ಲಿಂಗಾಯತ ಮತಗಳು ಬಿಜೆಪಿ ಎಂಬ ಕಮಲ ಚಿನ್ಹೆ ಅಡಿಯಲ್ಲಿ ಕಟ್ಟಿದ ಅಣೆಕಟ್ಟಿನಲ್ಲಿ ಸುಭದ್ರವಾಗಿವೆ. ಇಂತಹ ಹತ್ತು ಮಂದಿ ಡಿ.ಕೆ.ಶಿವಕುಮಾರ್‌ಗಳು ಬಂದರೂ ಆ ಡ್ಯಾಂ ಒಡೆಯಲು ಸಾಧ್ಯವಿಲ್ಲ’ ಎಂದು ಸಚಿವ ಸಿ.ಸಿ.ಪಾಟೀಲ ಗುಡುಗಿದರು.

ಬಿಜೆಪಿಯ ಲಿಂಗಾಯತ ಮತಬ್ಯಾಂಕಿನ ಡ್ಯಾಂ ಒಡೆದಿದ್ದು, ಕಾಂಗ್ರೆಸ್‌ನತ್ತ ಹರಿದು ಬರುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆ ಖಂಡಿಸಿ ನಗರದಲ್ಲಿ ಶನಿವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್‌ ಪಕ್ಷ ನಿಂತಿರುವ ನೆಲವೇ ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಬಿಜೆಪಿಯ ಪಾರಂಪರಿಕ ಮತದಾರರಾದ ಲಿಂಗಾಯತ ಸಮುದಾಯದ ಬಗ್ಗೆ ಮಾತನಾಡಿದ್ದಾರೆ. ಲಿಂಗಾಯತರ ನಿಷ್ಠೆ, ಆ ಸಮಾಜದ ಬೆಂಬಲ ಯಾವತ್ತಿಗೂ ಬಿಜೆಪಿಗೆ ಎಂಬುದು ಅವರಿಗೆ ತಿಳಿದಂತಿಲ್ಲ’ ಎಂದು ಲೇವಡಿ ಮಾಡಿದರು.

‘ಕಾಂಗ್ರೆಸ್‌ ಪಕ್ಷ ನಿಂತಿರುವ ನೆಲವೇ ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಬಿಜೆಪಿಯ ಪಾರಂಪರಿಕ ಮತದಾರರಾದ ಲಿಂಗಾಯತ ಸಮುದಾಯದ ಬಗ್ಗೆ ಮಾತನಾಡಿದ್ದಾರೆ. ಲಿಂಗಾಯತರ ನಿಷ್ಠೆ, ಆ ಸಮಾಜದ ಬೆಂಬಲ ಯಾವತ್ತಿಗೂ ಬಿಜೆಪಿಗೆ ಎಂಬುದು ಅವರಿಗೆ ತಿಳಿದಂತಿಲ್ಲ’ ಎಂದು ಲೇವಡಿ ಮಾಡಿದರು.

‘ಕಾಂಗ್ರೆಸ್‌ನವರು ಈಗ ಏರಿ ಮೇಲೆ ನಿಂತಿದ್ದಾರೆ. ನೀರು ಯಾವಾಗಲೂ ಹಳ್ಳದ ಕಡೆಗೆ ಹರಿಯುತ್ತದೆಯೇ ಹೊರತು; ಏರಿ ಕಡೆಗಲ್ಲ. ಮೇ 10ರಂದು ಚುನಾವಣೆ ನಡೆಯಲಿದೆ. ಆಗ ಲಿಂಗಾಯತ ಮತಬ್ಯಾಂಕ್‌ ಬಿಜೆಪಿಗೆ ಹರಿದು ಬಂದು ಡ್ಯಾಂ ಸಂಪೂರ್ಣವಾಗಿ ತುಂಬಿರುತ್ತದೆ. ಮೇ 13ಕ್ಕೆ ಚುನಾವಣೆ ಫಲಿತಾಂಶ ಬರಲಿದ್ದು, ಆಗ ಕಾಂಗ್ರೆಸ್‌ನ ವೋಟ್‌ ಬ್ಯಾಂಕ್‌ನ ಡ್ಯಾಂ ಖಾಲಿಯಾಗಿರುವುದು ಅವರಿಗೆ ತಿಳಿಯುತ್ತದೆ’ ಎಂದು ಕಾಲೆಳೆದರು.

‘ಜಗದೀಶ್‌ ಶೆಟ್ಟರ್‌ ಅವರಂತಹ ಯಾರೋ ಒಂದಿಬ್ಬರು ಪಕ್ಷ ತೊರೆದರೆ ನಷ್ಟವಿಲ್ಲ. ಕಾಂಗ್ರೆಸ್‌ನವರು ಶೆಟ್ಟರ್‌ ಅವರನ್ನು ಸ್ಟಾರ್‌ ಕ್ಯಾಂಪೇನರ್‌ ಮಾಡುವುದಾಗಿ ಹೇಳಿದ್ದಾರೆ. ಬಿಜೆಪಿಯಿಂದ ಬಂದ ನಾಯಕರಿಂದ ಕಾಂಗ್ರೆಸ್‌ ಪಕ್ಷಕ್ಕೆ ಶಕ್ತಿ ಬಂದಿದೆ ಅನ್ನುವುದಾದರೆ ಆ ಪಕ್ಷ ಎಷ್ಟು ಅಶಕ್ತವಾಗಿದೆ ಎಂಬುದನ್ನು ನೋಡಿಕೊಳ್ಳಬೇಕು’ ಎಂದು ಮಾತಿನಲ್ಲೇ ತಿವಿದರು.

‘ಕಾಂಗ್ರೆಸ್‌ ನಾಯಕರಿಗೆ ಈಗ ದಿಢೀರ್‌ ಅಂತ ಲಿಂಗಾಯತ ಸಮುದಾಯದ ಮೇಲೆ ಪ್ರೀತಿ ಮೊಳೆತಿದೆ. ಆದರೆ, ಕಾಂಗ್ರೆಸ್‌ನವರ ಮೊಸಳೆ ಕಣ್ಣೀರು ಎಂತಹದ್ದು ಎಂಬುದು ರಾಜ್ಯದ ಜನರಿಗೆ ತಿಳಿದಿದೆ. ಈ ಚುನಾವಣೆಯಲ್ಲಿ ಎಷ್ಟು ಮಂದಿ ಲಿಂಗಾಯತ ಮುಖಂಡರಿಗೆ ಟಿಕೆಟ್‌ ಕೊಟ್ಟಿದ್ದೀರಿ, ಹಿಂದೆ ಮುಖ್ಯಮಂತ್ರಿ ಆಗಿದ್ದ ವೀರೇಂದ್ರ ಪಾಟೀಲರನ್ನು ಯಾವ ರೀತಿ ನಡೆಸಿಕೊಂಡಿರಿ ಎಂಬುದು ಸಮಾಜದ ಜನರ ಮನಸ್ಸಿನಲ್ಲಿದೆ. ಅಷ್ಟಕ್ಕೂ ಮೀರಿ ಲಿಂಗಾಯತರ ಮೇಲೆ ಪ್ರೀತಿ ಇದ್ದರೆ, ಒಂದು ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಲಿಂಗಾಯತ ನಾಯಕನನ್ನು ಸಿಎಂ ಮಾಡುವುದಾಗಿ ಹೇಳುವ ತಾಕತ್ತು ಪ್ರದರ್ಶಿಸಲಿ’ ಎಂದು ಸವಾಲು ಹಾಕಿದರು.

‘ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ರಾಜ್ಯಕ್ಕೆ ಪ್ರಚಾರಕ್ಕೆ ಬರುತ್ತಿದ್ದಾರೆ. ನಮ್ಮ ಪಕ್ಷ 130 ಸೀಟುಗಳನ್ನು ಗೆದ್ದು, ಮೇ 20ರ ಒಳಗಾಗಿ ಮತ್ತೇ ಸರ್ಕಾರ ರಚನೆ ಮಾಡಲಿದೆ. ಅಲ್ಲೀವರೆಗೂ ಕಾಂಗ್ರೆಸ್‌ ನಾಯಕರು ‘ತಿರುಕನ ಕನಸು’ ಕಾಣುತ್ತಿರಬಹುದು’ ಎಂದು ವ್ಯಂಗ್ಯವಾಡಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಮುಖಂಡರಾದ ರಾಜಣ್ಣ ಕುರುಡಗಿ, ಶಿವಣ್ಣ ಮುಳುಗುಂದ, ಮಾಧ್ಯಮ ವಕ್ತಾರ ಜಿ.ಸಿ.ರೇಷ್ಮೆ ಹಾಗೂ ಸಂಚಾಲಕರಾದ ವಿನಾಯಕ ಹಬೀಬ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT