ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ‘ಭಾರತ್‌ಮಾಲಾ’ ‌ಗ್ರಹಣ

19 ಯೋಜನೆಗಳ ಪೈಕಿ ಎರಡು ಕಾಮಗಾರಿಗಳಷ್ಟೇ ಪೂರ್ಣ
Published 23 ಮೇ 2023, 0:19 IST
Last Updated 23 ಮೇ 2023, 0:19 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವಾಲಯವು ’ಭಾರತ್‌ಮಾಲಾ ಪರಿಯೋಜನಾ’ ಅಡಿ ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವ 19 ಯೋಜನೆಗಳ ಪೈಕಿ ಎರಡು ಯೋಜನೆಗಳಷ್ಟೇ ಪೂರ್ಣಗೊಂಡಿವೆ. ಉಳಿದ ಯೋಜನೆಗಳ ಕಾಮಗಾರಿಗಳು ತೆವಳುತ್ತಾ ಸಾಗಿವೆ. 

19 ಕಾಮಗಾರಿಗಳ ಮೂಲಕ ₹17,668 ಕೋಟಿ ವೆಚ್ಚದಲ್ಲಿ 774 ಕಿ.ಮೀ. ಹೆದ್ದಾರಿಗಳ ವಿಸ್ತರಣೆ ಮಾಡಲಾಗುತ್ತಿದೆ. ಇದರಲ್ಲಿ ₹4,400 ಕೋಟಿ ಮೊತ್ತದ ಬೆಂಗಳೂರು–ಮೈಸೂರು ಹೆದ್ದಾರಿ (ರಾಷ್ಟ್ರೀಯ ಹೆದ್ದಾರಿ 275) ಆರು ಪಥದ ಕಾಮಗಾರಿ ಪೂರ್ಣಗೊಂಡಿದೆ. ಉಳಿದಂತೆ, ಕೆಲವು ಕಾಮಗಾರಿಗಳು ಶೇ 50ರಷ್ಟು ಪೂರ್ಣಗೊಂಡಿವೆ. ಮಂಗಳೂರಿನ ಕೂಳೂರಿನ ಫಲ್ಗುಣಿ ನದಿ ಮೇಲಿನ ಆರು ಪಥದ ಸೇತುವೆ ಕಾಮಗಾರಿ ಈವರೆಗೆ ಆರಂಭವಾಗಿಲ್ಲ. ₹580 ಕೋಟಿ ವೆಚ್ಚದ ಹುಬ್ಬಳ್ಳಿ–ಧಾರವಾಡ ನಡುವಿನ ಆರು ಪಥದ (30 ಕಿ.ಮೀ) ಕಾಮಗಾರಿಗೂ ಚಾಲನೆ ಸಿಕ್ಕಿಲ್ಲ. ₹1,437 ಕೋಟಿ ಮೊತ್ತದ ಅಕ್ಕಲಕೋಟ್‌–ತೆಲಂಗಾಣ ಗಡಿ ನಡುವಿನ ಗ್ರೀನ್‌ಫೀಲ್ಡ್‌ ಹೆದ್ದಾರಿ (71 ಕಿ.ಮೀ) ಯೋಜನೆಯ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಬೆಂಗಳೂರು ವರ್ತುಲ ರಸ್ತೆ (ಹೊಸಕೋಟೆ–ತಮಿಳುನಾಡು ಗಡಿ) ಯೋಜನೆ ಕಾಗದದಲ್ಲಷ್ಟೇ ಉಳಿದಿದೆ. 20 ಕಿ.ಮೀ. ಉದ್ದದ ಈ ಯೋಜನೆಗೆ ಮಂಜೂರಾದ ಮೊತ್ತ ₹387 ಕೋಟಿ. 

ಶಿರಸಿ–ಕುಮಟಾ–ಬೇಲಕೇರಿ ಬಂದರಿಗೆ ಸಂಪರ್ಕಿಸುವ ಹೆದ್ದಾರಿಯ ಶೇ 30ರಷ್ಟು ಕಾಮಗಾರಿ ಆಗಿದೆ. 58 ಕಿ.ಮೀ. ಕಾಮಗಾರಿಗೆ ₹360 ಕೋಟಿ ವ್ಯಯ ಮಾಡಲಾಗುತ್ತಿದೆ. ಚನ್ನರಾಯಪಟ್ಟಣದಿಂದ ಹಾಸನ ಬೈಪಾಸ್‌ ವರೆಗಿನ (₹555 ಕೋಟಿ ಮೊತ್ತ)  ಹೆದ್ದಾರಿ ವಿಸ್ತರಣಾ ಕಾಮಗಾರಿಯಲ್ಲಿ ಶೇ 52ರಷ್ಟು ಪೂರ್ಣಗೊಂಡಿದೆ. ಹಾವೇರಿ–ಶಿರಸಿ ರಸ್ತೆಯ (ಹೆದ್ದಾರಿ 766 ಇ) 74 ಕಿ.ಮೀ. ಕಾಮಗಾರಿ ಪೈಕಿ ಮುಗಿದಿರುವುದು ಒಂದು ಕಿ.ಮೀ.ಯಷ್ಟೇ. ನೆಲಮಂಗಲ–ತುಮಕೂರು ನಡುವಿನ ಆರು ಪಥದ ಹೆದ್ದಾರಿ ಯೋಜನೆಯಲ್ಲಿ 9.37 ಕಿ.ಮೀ. ಕೆಲಸ ಆಗಿದೆ. ಬೆಳಗಾವಿ–ಸಂಕೇಶ್ವರ ಬೈಪಾಸ್‌ ಆರು ಪಥ ಹಾಗೂ ಸಂಕೇಶ್ವರದಿಂದ ಮಹಾರಾಷ್ಟ್ರದ ಗಡಿ ವರೆಗಿನ ಆರು ಪಥದ ಕಾಮಗಾರಿಗಳು ಸಹ ನಿಧಾನಗತಿಯಲ್ಲಿ ಸಾಗಿವೆ. 

ಮಂಜೂರಾತಿ ನೀಡಿರುವ ಯೋಜನೆಗಳು

ಯೋಜನೆ; ಒಟ್ಟು ಉದ್ದ (ಕಿ.ಮೀ); ಮೊತ್ತ (₹ಕೋಟಿಗಳಲ್ಲಿ)

ಹೊನ್ನಾವರ ಬಂದರು–ಕಾಸರಕೋಡ; 4.58; 87.5 

ಬೆಂಗಳೂರು ವರ್ತುಲ ರಸ್ತೆ (ಎಸ್‌ಟಿಆರ್‌ಆರ್‌); 135; 972 

ಸ್ಯಾಂಕ್ವೆಲಿನ್– ಬೆಳಗಾವಿ ದ್ವಿಪಥ ರಸ್ತೆ; 69.48; 131.96

ಅಕ್ಕಲಕೋಟ್‌–ಕೆೆಎನ್‌ಟಿ/ತೆಲಂಗಾಣ ಗಡಿ; 65; 1606 

ಬೆಳಗಾವಿ ಬೈಪಾಸ್‌ (ಪ್ಯಾಕೇಜ್‌ 1); 34.48; 897.37 

ಬೆಳಗಾವಿ–ಹುನಗುಂದ–ರಾಯಚೂರು (ಪ್ಯಾಕೇಜ್‌ 4); 46.2; 716.47 

ಬೆಳಗಾವಿ–ಹುನಗುಂದ– ರಾಯಚೂರು (ಪ್ಯಾಕೇಜ್‌ 5); 44.9; 740.77 

2028ಕ್ಕೆ ಪೂರ್ಣ

‘19 ಯೋಜನೆಗಳಲ್ಲಿ 314 ಕಿ.ಮೀ. ಹೆದ್ದಾರಿ ವಿಸ್ತರಣೆ ಕಾಮಗಾರಿಗಳು ಮುಗಿದಿವೆ. ಎಲ್ಲ ಕಾಮಗಾರಿಗಳನ್ನು 2027–
28ರಲ್ಲಿ ಮುಗಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ’ ಎಂದು ಕೇಂದ್ರ ಹೆದ್ದಾರಿ ಸಚಿವಾಲಯದ ಮೂಲಗಳು ತಿಳಿಸಿವೆ.

‘ರಾಜ್ಯದಲ್ಲಿ ₹5,152 ಕೋಟಿ ಮೊತ್ತದಲ್ಲಿ 301 ಕಿ.ಮೀ.ಯ 6 ಯೋಜನೆಗಳಿಗೆ ಮಂಜೂರಾತಿ ನೀಡಿದ್ದು, ಕಾಮಗಾರಿಗಳು ಇನ್ನಷ್ಟೇ
ಆರಂಭವಾಗಬೇಕಿದೆ’ ಎಂದಿವೆ.

ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ವೇ ಕಾಮಗಾರಿಯೂ ನಿಧಾನ

ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ವೇ ಯೋಜನೆಯನ್ನು ಮೂರು ಪ್ಯಾಕೇಜ್‌ಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. 27 ಕಿ.ಮೀ. ಉದ್ದದ ಪ್ಯಾಕೇಜ್‌ 1 ಕಾಮಗಾರಿಗೆ ಮೀಸಲಿಟ್ಟ ಮೊತ್ತ ₹1,160 ಕೋಟಿ. ಈ ತನಕ 14 ಕಿ.ಮೀ. ಕಾಮಗಾರಿ ಮುಗಿದಿದೆ. ಎರಡನೇ ಪ್ಯಾಕೇಜ್‌ನಲ್ಲಿ (ಮಾಲೂರು–ಬಂಗಾರಪೇಟೆ) ₹1,279 ಕೋಟಿ ಮೊತ್ತದಲ್ಲಿ 27 ಕಿ.ಮೀ. ಕಾಮಗಾರಿ ಮಾಡಲಾಗುತ್ತಿದೆ. ಪೂರ್ಣಗೊಂಡಿರುವುದು 12 ಕಿ.ಮೀ. ಮಾತ್ರ. ಮೂರನೇ ಪ್ಯಾಕೇಜ್‌ಗೆ (ಬಂಗಾರಪೇಟೆ–ಬೇತಮಂಗಲ ನಡುವಿನ 17 ಕಿ.ಮೀ) ₹863 ಕೋಟಿ ಮಂಜೂರಾಗಿದ್ದು, 5 ಕಿ.ಮೀ. ಕಾಮಗಾರಿ ಮುಗಿದಿದೆ. 

ಈ ಕಾಮಗಾರಿಯನ್ನು ಜನವರಿಯಲ್ಲಿ ವೈಮಾನಿಕ ಸಮೀಕ್ಷೆ ಮಾಡಿದ್ದ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ, ‘ಅರಣ್ಯ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ಇರುವ ಅನುಮತಿಗಳನ್ನು ರಾಜ್ಯ ಸರ್ಕಾರ ನೀಡಿದರೆ ಈ ಹೆದ್ದಾರಿಯನ್ನು 2024ರ ಜನವರಿ 26ರಂದು ವಾಹನ ಸಂಚಾರಕ್ಕೆ ಸಮರ್ಪಿಸಲಾಗುವುದು’ ಎಂದಿದ್ದರು. 

ಕರ್ನಾಟಕದಲ್ಲಿ 71 ಕಿ.ಮೀ, ಆಂಧ್ರಪ್ರದೇಶದಲ್ಲಿ 85 ಕಿ.ಮೀ ಮತ್ತು ತಮಿಳುನಾಡಿನಲ್ಲಿ 106 ಕಿ.ಮೀ. ರಸ್ತೆ ಇರಲಿದೆ. ಒಟ್ಟಾರೆ ₹17 ಸಾವಿರ ಕೋಟಿ ಮೊತ್ತದ ಯೋಜನೆಯಲ್ಲಿ ಕರ್ನಾಟಕ ಭಾಗದ ರಸ್ತೆಗೆ ₹5,069 ಕೋಟಿ ವೆಚ್ಚವಾಗುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT