ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ಲೋಪ: ಪರಿಶೀಲನೆಗೆ 4 ಸಮಿತಿ

Published 22 ಏಪ್ರಿಲ್ 2024, 21:17 IST
Last Updated 22 ಏಪ್ರಿಲ್ 2024, 21:17 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದಿದ್ದ ಸಿಇಟಿಯಲ್ಲಿ ಪಠ್ಯಕ್ಕೆ ಹೊರತಾದ ಪ್ರಶ್ನೆಗಳು ಸೇರಿದ್ದನ್ನು ಪರಿಶೀಲಿಸಿ ವರದಿ ನೀಡಲು ಆಯಾ ವಿಷಯವಾರು ತಜ್ಞರನ್ನು ಒಳಗೊಂಡ ನಾಲ್ಕು ಸಮಿತಿಗಳನ್ನು ರಚಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇದೇ ಏ.18 ಮತ್ತು 19ರಂದು ನಡೆಸಿತ್ತು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ಪ್ರಶ್ನೆ ಪತ್ರಿಕೆಗಳಲ್ಲಿ ಪಠ್ಯಕ್ಕೆ ಹೊರತಾದ ಶೇ 25ರಷ್ಟು ಪ್ರಶ್ನೆಗಳು ಸೇರಿಕೊಂಡಿವೆ ಎಂದು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. 

ಪಠ್ಯಕ್ಕೆ ಹೊರತಾದ ಪ್ರಶ್ನೆಗಳ ಸಂಖ್ಯೆ ಖಚಿತಪಡಿಸಿಕೊಳ್ಳಲು ಹಾಗೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಸೂಕ್ತ ಶಿಫಾರಸು ಮಾಡಲು ಆಯಾ ವಿಷಯಗಳಿಗೆ ತಲಾ ಮೂವರು ಸದಸ್ಯರನ್ನು ಒಳಗೊಂಡ ಪ್ರತ್ಯೇಕ ಸಮಿತಿ ರಚಿಸಲಾಗಿದೆ.  

‘ಪಠ್ಯಕ್ಕೆ ಹೊರತಾದ ಪ್ರಶ್ನೆಗಳಿಂದಾಗಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಮರು ಪರೀಕ್ಷೆ ನಡೆಸಬೇಕು. ಇಲ್ಲವೇ ಕೃಪಾಂಕ ನೀಡಬೇಕು ಎಂದು ಹಲವು ಸಂಘಟನೆಗಳು, ವಿದ್ಯಾರ್ಥಿಗಳು, ಕಾಲೇಜು ಆಡಳಿತ ಮಂಡಳಿಗಳು ಮನವಿ ಸಲ್ಲಿಸಿವೆ. ಒಂದು ವಾರದಲ್ಲಿ ತಜ್ಞರ ಸಮಿತಿಗಳಿಂದ ವರದಿ ಪಡೆದು ವಿದ್ಯಾರ್ಥಿಗಳ ಹಿತಾಸಕ್ತಿಗೆ ಅನುಗುಣವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎಸ್‌. ಶ್ರೀಕರ್‌ ಹೇಳಿದ್ದಾರೆ.

ಪ್ರಶ್ನೆಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಕೆಇಎಯು ವಿದ್ಯಾರ್ಥಿಗಳಿಗೆ ಏ. 27ರವರೆಗೆ ಅವಕಾಶ ನೀಡಿದೆ. ಈ ಸಂಬಂಧ ವಿಸ್ತೃತ ವರದಿ ಸಲ್ಲಿಸುವಂತೆ ಕೆಇಎಗೂ ಸೂಚಿಸಲಾಗಿದೆ ಎಂದಿದ್ದಾರೆ.

ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳನ್ನು ಕೈಬಿಟ್ಟು ಪಠ್ಯದ ಪ್ರಶ್ನೆಗಳನ್ನಷ್ಟೇ ಮೌಲ್ಯ ಮಾಪನ ಮಾಡಿ ಸಿಇಟಿ ಫಲಿತಾಂಶ ಪ್ರಕಟಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.
ಅಶ್ವಿನಿ ಕೆ.ಎಸ್, ಅಧ್ಯಕ್ಷೆ, ಎಐಡಿಎಸ್‌ಒ

ಕೃಷಿ ಕೋಟಾ: ದಾಖಲೆ ಸಲ್ಲಿಕೆಗೆ ಅವಕಾಶ

ಸಿಇಟಿ ಬರೆದಿರುವ ಅಭ್ಯರ್ಥಿಗಳಿಗೆ ಕೃಷಿಕರ ಕೋಟಾದ ಸೀಟು ಪಡೆಯಲು ಆನ್‌ಲೈನ್ ಮೂಲಕ ದಾಖಲೆಗಳನ್ನು ಸಲ್ಲಿಸಲು ಮಾಡಲು ಏ.23ರಂದು ಮಧ್ಯಾಹ್ನ 2ರಿಂದ ಏ.24ರ ಮಧ್ಯರಾತ್ರಿ 12ರವರೆಗೆ ಅವಕಾಶ ನೀಡಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT