ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮುಂಡೇಶ್ವರಿ ದೇವಸ್ಥಾನ ಆಸ್ತಿ ಹಸ್ತಾಂತರ ಸಲ್ಲ: ಹೈಕೋರ್ಟ್‌

Published : 5 ಸೆಪ್ಟೆಂಬರ್ 2024, 22:30 IST
Last Updated : 5 ಸೆಪ್ಟೆಂಬರ್ 2024, 22:30 IST
ಫಾಲೋ ಮಾಡಿ
Comments

ಬೆಂಗಳೂರು: ‘ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸೇರಿದ ಸ್ಥಿರ ಮತ್ತು ಚರಾಸ್ತಿಗಳನ್ನು ಹಸ್ತಾಂತರ ಮಾಡಬಾರದು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

‘ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ–2024 ಅನ್ನು ರದ್ದುಗೊಳಿಸಬೇಕು’ ಎಂದು ಕೋರಿ ದಿವಂಗತ ಶ್ರೀಕಂಠದತ್ತ ಒಡೆಯರ್ ಪತ್ನಿ ಪ್ರಮೋದಾ ದೇವಿ ಒಡೆಯರ್ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಚಾಮುಂಡಿ ದೇವಸ್ಥಾನದ ಮಾಲೀಕತ್ವಕ್ಕೆ ಸಂಬಂಧಿಸಿದ ಮೇಲ್ಮನವಿ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠದಲ್ಲಿ ವಿಚಾರಣೆಗೆ ಬಾಕಿ ಇದೆ. ಕರ್ನಾಟಕ ಶಾಸನಸಭೆ ಪ್ರಕ್ರಿಯೆ ಮತ್ತು ನಡಾವಳಿ ನಿಯಮ 161ರ ಪ್ರಕಾರ ಯಾವುದಾದರೂ ಪ್ರಕರಣ ನ್ಯಾಯಾಲಯದ ಪರಿಶೀಲನೆಗೆ ಒಳಪಟ್ಟಿದ್ದರೆ ಆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸುವಂತಿಲ್ಲ. ಆದರೆ, ರಾಜ್ಯ ಸರ್ಕಾರ 2024ರ ಫೆಬ್ರುವರಿ 19ರಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದು, 21ರಂದು ಅನುಮೋದನೆ ಪಡೆದಿದೆ’ ಎಂದು ಆಕ್ಷೇಪಿಸಿದರು.

ಇದಕ್ಕೆ ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎನ್‌.ದೇವದಾಸ್‌, ‘ಸರ್ಕಾರ ಕಾನೂನು ರೂಪಿಸುವಂತಿಲ್ಲ ಎಂದು ಹೇಳಲಾಗದು. ಸಂವಿಧಾನದ 212ನೇ ವಿಧಿಯ ಪ್ರಕಾರ ನ್ಯಾಯಾಲಯಗಳು ಶಾಸನ ಸಭೆಯ ಪ್ರಕ್ರಿಯೆ ಬಗ್ಗೆ ಪ್ರಶ್ನಿಸಲು ನಿರ್ಬಂಧವಿದೆ. ಚಾಮುಂಡಿ ಬೆಟ್ಟದ ಮೇಲೆ ಅರ್ಜಿದಾರರಿಗೆ ಹಕ್ಕಿಲ್ಲ’ ಎಂದು ಸಮಜಾಯಿಷಿ ನೀಡಿದರು.

ಇದನ್ನು ಬಲವಾಗಿ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ‘ದೇವಸ್ಥಾನದ ಸಂಪ್ರದಾಯ ಮತ್ತು ಆಚರಣೆಯನ್ನು ಕೈಗೆತ್ತಿಕೊಳ್ಳುವ ಯಾವುದೇ ಅಧಿಕಾರ ಸರ್ಕಾರಕ್ಕಿಲ್ಲ. ದೇವಸ್ಥಾನದ ಆಸ್ತಿಯನ್ನು ಹಸ್ತಾಂತರ ಅಥವಾ ಮಾರ್ಪಾಡು ಮಾಡಲಾಗುತ್ತಿದೆ. ಹೀಗಾಗಿ, ಯಥಾಸ್ಥಿತಿ ಕಾಪಾಡುವುದು ಅತ್ಯಂತ ಜರೂರಿದೆ. ದೇವಸ್ಥಾನದ ಸಂಪ್ರದಾಯ, ದೇವಾಲಯದ ಚರ, ಸ್ಥಿರಾಸ್ತಿಗೆ ಸಂಬಂಧಿಸಿದ ಯಥಾಸ್ಥಿತಿಯನ್ನು ಬದಲಿಸಲಾಗಿದೆ. ಇಡೀ ಜಾಗವನ್ನು ಸರ್ಕಾರ ವಶಕ್ಕೆ ಪಡೆದಿದೆ. ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ’ ಎಂದರು.

‘ದೇವಸ್ಥಾನದಲ್ಲಿ ಏನೇನು ಬದಲಾಯಿಸಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರ ಸಲ್ಲಿಸಲು ಸರ್ಕಾರಕ್ಕೆ ಆದೇಶಿಸಬೇಕು. ಸಂಪ್ರದಾಯವನ್ನು ಬದಲಾಯಿಸದಂತೆ ಆದೇಶಿಸಬೇಕು. ನೀತಿಯ ಭಾಗವಾಗಿ ಯಾವುದೇ ನಿರ್ಧಾರ ಕೈಗೊಳ್ಳದಂತೆ ಸರ್ಕಾರಕ್ಕೆ ಆದೇಶಿಸಬೇಕು. ದೇವಸ್ಥಾನಕ್ಕೆ ಸಂಬಂಧಿಸಿದ ಯಾವುದೇ ಸ್ಥಿರ ಮತ್ತು ಚರ ಆಸ್ತಿಯನ್ನು ಹಸ್ತಾಂತರ ಮಾಡದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಆದೇಶಿಸಿ, ವಿಚಾರಣೆಯನ್ನು ಇದೇ 25ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT