ಹಾಸನ: ಶ್ರವಣಬೆಳಗೊಳ ಎಂದರೆ ನೆನಪಾಗುವುದು ಬಾಹುಬಲಿಯ ಮಹಾನ್ ಮೂರ್ತಿ ಹಾಗೂ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ. ಅವರು, 12 ವರ್ಷಗಳಿ ಗೊಮ್ಮೆ ಬಾಹುಬಲಿಗೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಆಧುನಿಕತೆಯ ಸ್ಪರ್ಶ ಕೊಟ್ಟವರು. ಅವರ ನೇತೃತ್ವದಲ್ಲೇ 4 ಮಹಾಮಸ್ತಕಾಭಿಷೇಕಗಳು ಅಚ್ಚುಕಟ್ಟಾಗಿ ನೆರವೇರಿವೆ. 1970ರಲ್ಲಿ ಶ್ರವಣಬೆಳಗೊಳ ಮಠದ ಪೀಠಾಧಿಪತಿಯಾದ ಸ್ವಾಮೀಜಿ, 1981ರಲ್ಲಿ ನಡೆದ ಗೊಮ್ಮಟೇಶ್ವರನ ಸಹಸ್ರಾಬ್ಧಿ ಮಹಾಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನೆರವೇರಿಸಿದ್ದರು. ಕಾಲ ಕಳೆದಂತೆ ಮಹಾಮಸ್ತಕಾಭಿಷೇಕದ ವೀಕ್ಷಣೆ, ಆಯೋಜನೆಯಲ್ಲಿ ತಮ್ಮದೇ ಆದ ವಿಶಿಷ್ಟ ಯೋಚನೆಗಳ ಮೂಲಕ ಮಹತ್ತರ ಬದಲಾವಣೆ ತಂದಿದ್ದರು.