ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಶು’ಪಾಲನಾ ರಜೆ: ವಿಧಾನಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ

Last Updated 16 ಡಿಸೆಂಬರ್ 2021, 21:38 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ಸರ್ಕಾರಿ ಮಹಿಳಾ ಅಧಿಕಾರಿ, ನೌಕರರಿಗೆ ಶಿಶುಪಾಲನಾ ರಜೆ ಮತ್ತು ಶಿಶು ಪದ ಕುರಿತು ವಿಧಾನಪರಿಷತ್‌ನಲ್ಲಿ ಗುರುವಾರ ಸ್ವಾರಸ್ಯಕರ ಚರ್ಚೆ ನಡೆಯಿತು.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಆಯನೂರು ಮಂಜುನಾಥ್, ‘ಕಾನೂನು ನಿಯಮಾವಳಿ ಪ್ರಕಾರ ಶಿಶು ಪಾಲನಾ ರಜೆಯನ್ನು ಮಹಿಳೆಗೆ ನೀಡಿದ ರೀತಿಯಲ್ಲಿಯೇ ಪುರುಷರಿಗೂ ನೀಡಬೇಕು. ಸರ್ಕಾರಿ ನೌಕರರಲ್ಲಿ ಶೇ 40ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದಾರೆ. ಒಂದೇ ಸಂದರ್ಭದಲ್ಲಿ ಹೆರಿಗೆಯಾಗಿ ಹೆಚ್ಚಿನ ಮಹಿಳೆಯರು ರಜೆ ಮೇಲೆ ಹೋದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಇದಕ್ಕೆ ಸರ್ಕಾರ ಸೂಚಿಸುವ ಪರಿಹಾರವೇನು’ ಎಂದು ಗಂಭೀರ ವಿಚಾರವನ್ನು ಹಾಸ್ಯ ಮಿಶ್ರಿತವಾಗಿ ಪ್ರಸ್ತಾಪಿಸಿದರು.

ಅದಕ್ಕೆ ಅದೇ ಧಾಟಿಯಲ್ಲಿ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಶಿಶು ಮತ್ತು ಯೌವ್ವನದ ಮಧ್ಯದ ವ್ಯತ್ಯಾಸವನ್ನು ನಿಸರ್ಗವೇ ಗುರುತಿಸುತ್ತದೆ. ಅಲ್ಲದೆ. ಒಂದೇ ಬಾರಿಗೆ ಹೆರಿಗೆಯಾಗುವ ಸಂದರ್ಭ ಉಂಟಾಗದು’ ಎಂದರು.

ಮಾತಿನ ಮಧ್ಯೆ ಮುಖ್ಯಮಂತ್ರಿ, ‘ಮಗು ಆಗುವುದು ದೇವರ ಕೃಪೆ’ ಎಂದರು. ಅದಕ್ಕೆ ಆಯನೂರು ಮಂಜುನಾಥ್, ‘ಇದು ದೇವರಲ್ಲ. ಪುರುಷರ ಕೃಪೆ’ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಇದರಲ್ಲಿ ಅರ್ಧ ಪ್ರಯತ್ನ ಪುರುಷರದ್ದಾದರೆ ದೇವರ ಕೃಪೆ ದೊಡ್ಡದಿದೆ’ ಎಂದಾಗ ಇಡೀ ಸದನ ನಗೆಗಡಲಲ್ಲಿ ತೇಲಿತು.

‘ಶಿಶುಪಾಲನಾ ರಜೆ ಕೇಂದ್ರ ಸರ್ಕಾರದ ಆದೇಶ. ಈ ಬಗ್ಗೆ ಶೀಘ್ರವೇ ಮಂಜಣ್ಣ (ಆಯನೂರು ಮಂಜುನಾಥ್‌) ಜತೆ ವಿಶೇಷ ಸಭೆ ನಡೆಸಿ, ಮಾಹಿತಿ ಪಡೆದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ’ ಎಂದೂ ಮುಖ್ಯಮಂತ್ರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT