ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿವಾಹದಿಂದ ಬಿಡಿಸಿಕೊಂಡ ಬಾಲಕಿ

ಕಾವ್ಯಶ್ರೀ ನೆರವಿಗೆ ಬಂದ 1098, ಸ್ಫೂರ್ತಿಯಾದ ಚರ್ಚಾಪಟುವಿನ ಧೈರ್ಯ
Last Updated 13 ನವೆಂಬರ್ 2019, 23:06 IST
ಅಕ್ಷರ ಗಾತ್ರ

ಮಂಡ್ಯ: ಮಕ್ಕಳ ಸಹಾಯವಾಣಿಗೆ (1098) ಕರೆ ಮಾಡಿ ಬಾಲ್ಯವಿವಾಹದ ಬಂಧನದಿಂದ ತಪ್ಪಿಸಿಕೊಂಡ ಸಿ.ಆರ್‌.ಕಾವ್ಯಶ್ರೀ ಛಲ ಹಾಗೂ ಧೈರ್ಯ ಬಾಲಕಿಯರಿಗೆ ಸ್ಫೂರ್ತಿ ತುಂಬುತ್ತಿದೆ.

ನಾಲ್ಕು ತಿಂಗಳ ಹಿಂದಷ್ಟೇ ನಡೆದ ಕತೆ ಇದು. ಕೆ.ಆರ್‌.ಪೇಟೆ ತಾಲ್ಲೂಕು ಚಟ್ಟೇನಹಳ್ಳಿ ಗ್ರಾಮದ ರಾಮೇಗೌಡ–ಸಾವಿತ್ರಮ್ಮ ದಂಪತಿಗೆ ನಾಲ್ವರು ಪುತ್ರಿಯರು. ಆ ಪೈಕಿ 15 ವರ್ಷದ ಕಾವ್ಯಶ್ರೀಗೆ ಮದುವೆ ನಿಗದಿ ಮಾಡಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಶೇ 80ರಷ್ಟು ಅಂಕ ಗಳಿಸಿದ್ದ ಆಕೆ ಕಾಲೇಜಿಗೆ ತೆರಳುವ ಕನಸು ಕಾಣುತ್ತಿದ್ದಳು.

ಮದುವೆ ಬೇಡವೆಂದರೂ ಮನೆಯವರು ಕೇಳಲಿಲ್ಲ. ರಹಸ್ಯವಾಗಿ ದೇವಾಲಯದಲ್ಲಿ ಮದುವೆ ಮಾಡುವ ಚಿಂತನೆ ನಡೆದಿತ್ತು. ಪಂಜರದಲ್ಲಿ ಸಿಲುಕಿದ ಗಿಳಿಯಂತಾಗಿದ್ದ ಕಾವ್ಯಶ್ರೀ, ಮನದಲ್ಲಿ ನಾಲ್ಕು ಅಂಕಿಗಳು ಮೂಡಿದವು, ಅವು 1098. ಧೈರ್ಯ ಮಾಡಿ ಸಹಾಯವಾಣಿಗೆ ಕರೆ ಮಾಡಿ ಮದುವೆ ವಿಚಾರ ತೆರೆದಿಟ್ಟಳು. ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮನೆಗೆ ಬಂದರು. ಕಾವ್ಯಶ್ರೀಯ ಶಿಕ್ಷಕರೂ ಬಂದು ‘ಪ್ರತಿಭಾವಂತೆಯಾಗಿರುವ ನಿಮ್ಮ ಮಗಳಿಗೆ ಈಗಲೇ ಮದುವೆ ಬೇಡ’ ಎಂದು ತಿಳಿ ಹೇಳಿದರು. ಬಾಲ್ಯವಿವಾಹ ರದ್ದಾಯಿತು.

ಈಗ ಶೀಳನೆರೆ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ. ‘ಶಾಲೆಯ ಲ್ಲೊಮ್ಮೆ ಪ್ರಾರ್ಥನೆ ವೇಳೆ ಶಿಕ್ಷಕರು ಮಕ್ಕಳ ಸಹಾಯವಾಣಿ ಬಗ್ಗೆ ತಿಳಿಸಿದ್ದರು. ಪುಸ್ತಕದಲ್ಲಿ ಬರೆದುಕೊಂಡಿದ್ದೆ. ಇಷ್ಟವಿಲ್ಲದ ಮದುವೆ ಮಾಡಿಕೊಳ್ಳಲು ಒತ್ತಾಯಿಸಿದಾಗ ಸಹಾಯವಾಣಿ ನೆರವಿಗೆ ಬಂತು’ ಎಂದು ಕಾವ್ಯಶ್ರೀ ತಿಳಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT