ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಬದಲಾವಣೆ ಸುಳ್ಳು, ರಾಜ್ಯದ ಅಭಿವೃದ್ಧಿಗೆ 2 ಗಂಟೆ ಹೆಚ್ಚು ಕೆಲಸ: ಬೊಮ್ಮಾಯಿ

Last Updated 11 ಆಗಸ್ಟ್ 2022, 7:52 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆಯ ಮಾತುಗಳಿಗೆ ಆಧಾರ ಇಲ್ಲ. ಇದೊಂದು ರಾಜಕೀಯ ಪ್ರೇರಿತ ನಡೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನನ್ನ ನಿರ್ಣಯಗಳು ಇನ್ನಷ್ಟು ಗಟ್ಟಿಯಾಗುತ್ತವೆ. ಇನ್ನೂ ಹೆಚ್ಚಿನ ಕೆಲಸವನ್ನು ಜನರಿಗೆ, ರಾಜ್ಯಕ್ಕೆ ಮಾಡಬೇಕೆಂಬ ಪ್ರೇರಣೆಯನ್ನು ಈ ಎಲ್ಲಾ ವಿಚಾರಗಳು ಕೊಟ್ಟಿವೆ. ದಿನಕ್ಕೆ ಇನ್ನೂ 2 ಗಂಟೆಗಳ ಹೆಚ್ಚಿನ ಕೆಲಸ, ರಾಜ್ಯದ ಅಭಿವೃದ್ಧಿಗೆ ಅತಿ ಹೆಚ್ಚು ಸಮಯವನ್ನು ನೀಡಲಾಗುವುದು. ಬರುವ ದಿನಗಳಲ್ಲಿ ಪಕ್ಷದ ಬಲವರ್ಧನೆ ಹಾಗೂ ಜನರ ಬಳಿಗೆ ಹೋಗುವ ಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗುವುದು’ ಎಂದರು.

ಕಾಂಗ್ರೆಸ್‌ನವರುಏನೋ ಅಂದುಕೊಂಡಿದ್ದಾರೆ. ಅವರ ಮನಸ್ಸಿನಲ್ಲಿ ಅತಂತ್ರ ಇದೆ. ಅದನ್ನು ರಾಜ್ಯದ ತುಂಬಾ ಜನರ ಮನಸ್ಸಿನಲ್ಲಿ ಹರಡಬೇಕೆಂದಿದ್ದಾರೆ. ಜನ ಯಾರೂ ಅದನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಅದಕ್ಕಿಂತ ಹೆಚ್ಚಾಗಿ ನಾನು ಸ್ಥಿತಪ್ರಜ್ಞನಾಗಿದ್ದೇನೆ. ಸತ್ಯ ನನಗೆ ಗೊತ್ತಿದೆ ಎಂದು ತಿಳಿಸಿದರು.

ಮಳೆಯಿಂದ ಹಾನಿ: ಕೇಂದ್ರಕ್ಕೆ ಮನವಿ
ರಾಜ್ಯದಲ್ಲಿ ಅತಿವೃಷ್ಟಿಯಿಂದ ಆಗಿರುವ ಬೆಳೆ ಮತ್ತು ಮೂಲಸೌಕರ್ಯ ಹಾನಿಯ ಕುರಿತು ನಡೆಯುತ್ತಿರುವ ಸಮೀಕ್ಷೆಯ ವರದಿ ಶೀಘ್ರ ಸಲ್ಲಿಕೆಯಾಗಲಿದೆ. ಹೆಚ್ಚಿನ ಪರಿಹಾರ ಕೋರಿ ಕೇಂದ್ರಕ್ಕೆ ಮನವಿಯನ್ನು 2-3 ದಿನಗಳಲ್ಲಿ ಸಲ್ಲಿಸಲಾಗುವುದು ಎಂದು ಸಿಎಂ ಬೊಮ್ಮಾಯಿತಿಳಿಸಿದರು.

ಇತ್ತೀಚೆಗೆ ರಾಜ್ಯದಲ್ಲಿ ಭಾರಿ ಮಳೆಯಾಗಿದೆ. ಇದರಿಂದ ಮೂಲ ಸೌಕರ್ಯಗಳು ಹಾಳಾಗಿವೆ. ತುರ್ತು ಕೆಲಸಕ್ಕಾಗಿ ರಾಜ್ಯ ಸರ್ಕಾರ ₹500ಕೋಟಿ ಬಿಡುಗಡೆ ಮಾಡಲಾಗಿದೆ.ಬೆಳೆ ಹಾನಿಯಾಗಿದೆ. ಅದರ ಸಮೀಕ್ಷೆ ನಡೆಯುತ್ತಿದೆ ಎಂದು ತಿಳಿಸಿದರು.

ಈದ್ಗಾ ಮೈದಾನ: ಕಾನೂನಿನ ಪ್ರಕಾರ ಸಭೆ ಸಮಾರಂಭ ಆಯೋಜನೆ
ಚಾಮರಾಜಪೇಟೆಯ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದೆ. ಸರ್ಕಾರದ ನೀತಿ ನಿಯಮಗಳ ಪ್ರಕಾರ ಸಭೆ ಸಮಾರಂಭಗಳು, ಉತ್ಸವಗಳನ್ನು ಕಾನೂನಿನ ಪ್ರಕಾರ ಕೈಗೊಳ್ಳಲಾಗುವುದು ಎಂದರು. ಯಾರೂ ಏನೇ ಹೇಳಿದರೂ ನಮಗೆ ಕಾನೂನು ಮುಖ್ಯ. ಕಾನೂನು ಬಿಟ್ಟು ಏನೂ ಮಾಡುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT