ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಒಂದು ವೇಳೆ ಅವರನ್ನು ಬದಲಾವಣೆ ಮಾಡುವ ಪ್ರಸಂಗ ಉದ್ಭವಿಸಿದರೆ ನಾವು (ಲಿಂಗಾಯತರು) ಸಡ್ಡು ಹೊಡೆಯುತ್ತೇವೆ. ಮುಖ್ಯಮಂತ್ರಿ ಸ್ಥಾನಕ್ಕೆ ನಾನೂ ಸ್ಪರ್ಧೆ ಮಾಡುವೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.
‘ಸದ್ಯ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಹೈಕಮಾಂಡ್ ಆಶೀರ್ವಾದ ಇರುವವರೆಗೂ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ. ಅವರ ಅಧಿಕಾರವಧಿ ಮುಗಿದ ಬಳಿಕ ಪಕ್ಷ ತೀರ್ಮಾನಿಸುತ್ತದೆ. ಹೈಕಮಾಂಡ್ ಹಾಗೂ ಪಕ್ಷದ ಶಾಸಕರು ಯಾರ ಬಗ್ಗೆ ಒಲವು ತೋರುತ್ತಾರೊ ಅವರಿಗೆ ಅದೃಷ್ಟ ಒಲಿಯುತ್ತದೆ. ಅವಕಾಶ ಸಿಕ್ಕರೆ ಲಿಂಗಾಯತರು ಸಿದ್ಧರಿದ್ದೇವೆ’ ಎಂದು ಬುಧವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
‘ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಹುರುಳಿಲ್ಲ. ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂಬ ವಿಶ್ವಾಸವಿದೆ. ಈ ಹುದ್ದೆಯ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದರಲ್ಲಿ ಪ್ರಯೋಜನವಿಲ್ಲ. ಇದರಿಂದ ಸಚಿವರ ಘನತೆಗೆ ಧಕ್ಕೆ ಉಂಟಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಡಿಕೆಶಿ ಮುಖ್ಯಮಂತ್ರಿ ಆಗಲಿ’
ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವ ಸಂದರ್ಭ ಸೃಷ್ಟಿಯಾದರೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ. ಹಿರಿತನದ ಆಧಾರದ ಮೇಲೆ ಮುಖ್ಯಮಂತ್ರಿ ಸ್ಥಾನ ಕೇಳುವುದು ಸರಿಯಲ್ಲ ಎಂದು ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ ತಿಳಿಸಿದ್ದಾರೆ.
‘ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಪರಿಶ್ರಮ ಎಲ್ಲರಿಗೂ ಗೊತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಎಲ್ಲರಿಗೂ ಅರ್ಹತೆ ಇದೆ. ಕಾರ್ಯಕ್ಷಮತೆಯ ಆಧಾರದ ಮೇರೆಗೆ ಈ ಸ್ಥಾನಕ್ಕೆ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ’ ಎಂದು ಪ್ರತಿಕ್ರಿಯಿಸಿದರು.