ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಎಂ, ಸಚಿವರು ಪ್ರವಾಹ–ಬರ ಸಂತ್ರಸ್ತರ ಕಡೆಗೆ ಗಮನ ಹರಿಸುತ್ತಿಲ್ಲ: ಬೊಮ್ಮಾಯಿ ಗರಂ

ಬೆಳಗಾವಿಯಲ್ಲಿ ಮಾಜಿ ಸಿಎಂ ಹೇಳಿಕೆ
Published : 30 ಜುಲೈ 2023, 9:27 IST
Last Updated : 30 ಜುಲೈ 2023, 9:27 IST
ಫಾಲೋ ಮಾಡಿ
Comments

ಬೆಳಗಾವಿ: ‘ರಾಜ್ಯದಲ್ಲಿ ಅತಿವೃಷ್ಟಿಯಿಂದ ಮನೆಗಳಿಗೆ ಹಾನಿಯಾಗಿದೆ. ದೊಡ್ಡ ಪ್ರಮಾಣದಲ್ಲಿ ಪ್ರಾಣಹಾನಿಯೂ ಆಗಿದೆ. ಸುಮಾರು 11 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದ್ದರೆ, ಉಳಿದೆಡೆ ಬರದ ಛಾಯೆ ಆವರಿಸಿದೆ. ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ತಕ್ಷಣವೇ ₹10 ಸಾವಿರ ತಾತ್ಕಾಲಿಕ ಪರಿಹಾರ ಕೊಡಬೇಕಿತ್ತು. ಆದರೆ, ಆ ಕೆಲಸವಾಗಿಲ್ಲ. ಬೆಳೆ ಹಾನಿಯ ಪ್ರಾಥಮಿಕ ಸಮೀಕ್ಷೆ ನಡೆದಿಲ್ಲ. ಯಾವ ಸಚಿವರೂ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿಲ್ಲ. ಬರಪೀಡಿತ ಪ್ರದೇಶಗಳಲ್ಲಿ ಬೇರೆ ಬೆಳೆಗಳನ್ನು ಬೆಳೆಯಲು ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರದ ವ್ಯವಸ್ಥೆ ಮಾಡಿಲ್ಲ. ಮುಖ್ಯಮಂತ್ರಿಗಳು ವಿಡಿಯೊ ಸಂವಾದ ನಡೆಸಿದ್ದನ್ನು ಬಿಟ್ಟರೆ, ಯಾವುದೇ ಪರಿಹಾರ ಕಾರ್ಯವಾಗಿಲ್ಲ’ ಎಂದು ದೂರಿದರು.

‘ರಾಜ್ಯ ಸರ್ಕಾರದವರು ಕೇವಲ ರಾಜಕಾರಣದಲ್ಲಿ ನಿರತವಾಗಿದ್ದಾರೆ. ತಮ್ಮ ಸ್ಥಾನ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಸಚಿವರು ಹಾಗೂ ಶಾಸಕರ ಮಧ್ಯೆ ಉಂಟಾಗಿರುವ ಸಮರ ಬಗೆಹರಿಸುವುದರಲ್ಲೇ ಸಿ.ಎಂ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯ ಜನರು ಸಂಕಷ್ಟದಲ್ಲಿದ್ದಾರೆ. ಆದರೆ, ಸರ್ಕಾರ ಅವರ ನೆರವಿಗೆ ಸರ್ಕಾರ ಧಾವಿಸಿಲ್ಲ’ ಎಂದು ಆಪಾದಿಸಿದರು.

‘ಪ್ರವಾಹಪೀಡಿತ ಪ್ರದೇಶಗಳಿಗೆ ಎಲ್ಲ ಸಚಿವರೂ ಭೇಟಿ ಕೊಟ್ಟು, ಸಂತ್ರಸ್ತರಿಗೆ ಸಾಂತ್ವನ ಹೇಳಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಪೂರ್ಣ ಮನೆ ಬಿದ್ದವರಿಗೆ ₹5 ಲಕ್ಷ, ಸ್ವಲ್ಪ ಹಾನಿಯಾದ ಮನೆಗಳಿಗೆ ₹3 ಲಕ್ಷ ಪರಿಹಾರ ಕೊಟ್ಟಿದ್ದೇವೆ. ಎನ್‌ಡಿಆರ್‌ಎಫ್ ಪರಿಹಾರದೊಂದಿಗೆ ರಾಜ್ಯ ಸರ್ಕಾರದಿಂದಲೂ ಪರಿಹಾರ ಕೊಟ್ಟಿದ್ದೆವು. ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಈ ತೀರ್ಮಾನ ತೆಗೆದುಕೊಂಡಿದ್ದೆವು. ಈಗಲೂ ಆ ರೀತಿಯ ಮಾನದಂಡವನ್ನೇ ಅನುಸರಿಸಿ, ಪರಿಹಾರ ನೀಡಬೇಕು. ಮನೆ ಕಳೆದುಕೊಂಡವರಿಗೆ ಕೂಡಲೇ ₹10 ಸಾವಿರ ತಾತ್ಕಾಲಿಕ ಪರಿಹಾರ ಕೊಡಬೇಕು’ ಎಂದು ಆಗ್ರಹಿಸಿದರು.

‘ಅತಿವೃಷ್ಟಿಯಿಂದ ಆಗಿದ್ದ ಬೆಳೆ ಹಾನಿಗೆ ಕೇಂದ್ರ ‌ಸರ್ಕಾರದೊಂದಿಗೆ ರಾಜ್ಯ ಸರ್ಕಾರದಿಂದಲೂ ಹೆಚ್ಚುವರಿಯಾಗಿ ಪರಿಹಾರ ನೀಡಿದ್ದೆವು. ಒಂದೇ ತಿಂಗಳಲ್ಲಿ ₹2,600 ಕೋಟಿ ಪರಿಹಾರ ಬಿಡುಗಡೆಗೊಳಿಸಿದ್ದೆವು. ಒಣ ಬೇಸಾಯದ ಪ್ರತಿ ಹೆಕ್ಟೇರ್‌ ಭೂಮಿಗೆ ಕೇಂದ್ರ ಸರ್ಕಾರ ₹6,500 ಪರಿಹಾರ ನೀಡಿದರೆ, ರಾಜ್ಯ ಸರ್ಕಾರದಿಂದ ₹1,300 ಸೇರಿಸಿ ನೀಡಿದ್ದೆವು. ನೀರಾವರಿ ಜಮೀನಿಗೆ ಕೇಂದ್ರದಿಂದ ₹1,500, ರಾಜ್ಯ ಸರ್ಕಾರದಿಂದ ₹25,000 ಕೊಟ್ಟಿದ್ದೆವು. ಅದೇ ಮಾನದಂಡ ಅನುಸರಿಸಿಯೇ, ಈಗಲೂ ರೈತರಿಗೆ ಪರಿಹಾರ ಕೊಡಬೇಕು. ಇಲ್ಲದಿದ್ದರೆ ಈ ಸರ್ಕಾರ ಇದ್ದರೆಷ್ಟು, ಬಿಟ್ಟರೆಷ್ಟು?’ ಎಂದರು.

ವರ್ಗಾವಣೆ ದಂಧೆಯಲ್ಲಿ ಭಾಗಿ

‘ರಾಜ್ಯ ಸರ್ಕಾರ ಸಂಪೂರ್ಣವಾಗಿ ವರ್ಗಾವಣೆ ದಂಧೆಯಲ್ಲಿ ತೊಡಗಿದೆ. ಇದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಪೈಪೋಟಿ ನಡೆಯುತ್ತಿದೆ. ಈ ದಂಧೆಯಲ್ಲಿ ಬಾರ್ಗೆನಿಂಗ್ ನಡೆಯುತ್ತಿದೆ’ ಎಂದು ಆರೋಪಿಸಿದ ಬೊಮ್ಮಾಯಿ, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಇದಕ್ಕೆ ಈಗಾಗಲೇ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಜಿಲ್ಲಾವಾರು ಸಭೆ ನಡೆಸುತ್ತಿದ್ದೇವೆ’ ಎಂದು ತಿಳಿಸಿದರು

ಬೆಳಗಾವಿಯಲ್ಲಿ ಅಂಗವಿಕಲನ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಬೊಮ್ಮಾಯಿ, ‘ಸಮಾಜಘಾತುಕ ಶಕ್ತಿಗಳು ಈಗ ನಿರ್ಭಯದಿಂದ ಓಡಾಡುತ್ತಿದ್ದಾರೆ. ಅವರಿಗೆ ಆಡಳಿತ ಪಕ್ಷದಿಂದ ಬೆಂಬಲ ಸಿಗುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಸಾಮಾನ್ಯ ಜನರು ಮತ್ತು ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆಯುತ್ತಿವೆ. ಒಂದೆಡೆ ಪೊಲೀಸರ ಕೊಲೆಯಾಗುತ್ತದೆ. ಮತ್ತೊಂದೆಡೆ ಪೊಲೀಸರಿಂದ ಜನರ ಮೇಲೆ ಹಲ್ಲೆಯಾಗುತ್ತಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ, ನಿಮ್ಮ ವಿರುದ್ಧ ಜನರು ದಂಗೆ ಏಳುತ್ತಾರೆ’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT