ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಪಾಲರ ಆದೇಶ ತಿರಸ್ಕರಿಸಲು ಸಿಎಂ ಮನವಿ: ರಿಟ್‌ ಅರ್ಜಿಯಲ್ಲಿ ಏನಿದೆ?

Published : 19 ಆಗಸ್ಟ್ 2024, 15:56 IST
Last Updated : 19 ಆಗಸ್ಟ್ 2024, 15:56 IST
ಫಾಲೋ ಮಾಡಿ
Comments

ಬೆಂಗಳೂರು: 'ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಂಚಿಕೆ ಹಗರಣದಲ್ಲಿ ರಾಜ್ಯಪಾಲರು ನನಗೆ ನೀಡಿದ್ದ ಷೋಕಾಸ್‌ ನೋಟಿಸ್‌ಗೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟ 2024ರ ಆಗಸ್ಟ್ 1ರಂದು ಸೂಕ್ತ ಸಲಹೆ ನೀಡಿದೆ. ಆದಾಗ್ಯೂ, ಈ ಸಲಹೆಯನ್ನು ಧಿಕ್ಕರಿಸಿ ರಾಜ್ಯಪಾಲರು ನನ್ನ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದು, ಈ ನಿರ್ಧಾರ ಅಸಾಂವಿಧಾನಿಕವಾಗಿದೆ. ಕಾನೂನಿನ ಎಲ್ಲಾ ಅಂಶಗಳನ್ನೂ ಗಾಳಿಗೆ ತೂರಿರುವ ಇಂತಹ ಆದೇಶವನ್ನು ವಜಾ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಿಟ್‌ ಅರ್ಜಿಯಲ್ಲಿ ಕೋರಿದ್ದಾರೆ.

ಈ ಸಂಬಂಧ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್‌ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಸೋಮವಾರ ವಿಚಾರಣೆ ನಡೆಸಿದರು.

ಅರ್ಜಿಯಲ್ಲಿ ಏನಿದೆ?:

‘ಸಂಪುಟ ಸಭೆ ತೀರ್ಮಾನದ ಜೊತೆಗೆ ಸಲ್ಲಿಸಲಾಗಿದ್ದ ಅಪಾರ ದಾಖಲೆಗಳನ್ನು ಪರಿಶೀಲಿಸದೆ ರಾಜ್ಯಪಾಲರು ತನಿಖೆಗೆ ಮಂಜೂರಾತಿ ನೀಡಿದ್ದಾರೆ. ಸ್ವತಂತ್ರವಾಗಿ ತೀರ್ಮಾನಿಸದೇ ಪೂರ್ವ ನಿರ್ಧರಿತವಾಗಿ ಹೊರಡಿಸಿರುವ ಈ ಆದೇಶ ಸುಪ್ರೀಂ ಕೋರ್ಟ್ ರೂಪಿಸಿರುವ ತತ್ವಗಳಿಗೆ ವಿರುದ್ಧವಾಗಿದೆ. ಇದನ್ನು ಅವರು ಕಾನೂನಿನ ವ್ಯಾಪ್ತಿಯಲ್ಲಿ ನಿರ್ಧರಿಸಿಲ್ಲ. ಶರವೇಗದಲ್ಲಿ ನೀಡಿರುವ ಈ ಆದೇಶವನ್ನು ಗಮನಿಸಿದರೆ ಇದೊಂದು ಯಾಂತ್ರಿಕ ಕ್ರಮ ಎಂದು ಕಂಡು ಬರುತ್ತದೆ’ ಎಂದು ವಿವರಿಸಲಾಗಿದೆ’ ಎಂದು ದೂರಿದ್ದಾರೆ.

‘ಪೂರ್ವಾನುಮತಿ ಕೋರಿ ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ ಮತ್ತು ಎಸ್‌.ಪಿ.ಪ್ರದೀಪ್ ಕುಮಾರ್ ರಾಜ್ಯಪಾಲರಿಗೆ ಮೂರು ಪ್ರತ್ಯೇಕ ದೂರು ಸಲ್ಲಿಸಿದ್ದಾರೆ. ಆದರೆ, ಅಬ್ರಹಾಂ ಅರ್ಜಿಗೆ ಸಂಬಂಧಿಸಿದಂತೆ ಮಾತ್ರವೇ ರಾಜ್ಯಪಾಲರು ಷೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಸ್ನೇಹಮಯಿ ಕೃಷ್ಣ ಮತ್ತು ಎಸ್.ಪಿ.ಪ್ರದೀಪ್ ಕುಮಾರ್ ಸಲ್ಲಿಸಿರುವ ಅರ್ಜಿಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಮೂಲಕ ಉಳಿದೆರಡು ಅರ್ಜಿಗಳಲ್ಲಿನ ಆರೋಪಕ್ಕೆ ಪ್ರತಿಕ್ರಿಯಿಸಲು ಅವಕಾಶ ಮಾಡಿಕೊಟ್ಟಿಲ್ಲ’ ಎಂದು ತಿಳಿಸಿದ್ದಾರೆ.

‘ನಿರ್ದಿಷ್ಟ ಅರ್ಜಿಗೆ ಸಂಬಂಧಿಸಿ ಷೋಕಾಸ್ ನೋಟಿಸ್ ನೀಡಿರುವ ಅವರ ಪ್ರಕ್ರಿಯೆ ಅಕ್ರಮವಾಗಿದೆ. ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್ ಕುಮಾರ್ ದೂರಿನ ಅರ್ಜಿಗಳ ಬಗ್ಗೆ ಮಾಹಿತಿ ನೀಡದೇ ಮುಗುಮ್ಮಾಗಿರುವ ರಾಜ್ಯಪಾಲರು ಸ್ವೇಚ್ಛಾ ಮತ್ತು ತರತಮ ನೀತಿಯನ್ನು ಪ್ರದರ್ಶಿಸಿದ್ದಾರೆ. ಇದು ರಾಜ್ಯಪಾಲರ ಪಕ್ಷಾತೀತ ನಿರ್ಧಾರದ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದೆ’ ಎಂದು ದೂಷಿಸಿದ್ದಾರೆ.

‘ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಕಲಂ 17ಎ ಮತ್ತು ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ–2023ರ ಕಲಂ 218ರ ಅಡಿ ಟಿ.ಜೆ.ಅಬ್ರಹಾಂ ಜುಲೈ 26ರಂದು ಪೂರ್ವಾನುಮತಿ ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಸಚಿವ ಸಂಪುಟ ಸ್ಪಷ್ಟ ಉತ್ತರ ನೀಡಿದೆ. ಇದರಲ್ಲಿ ಉಲ್ಲೇಖಿಸಲಾದ ತೀರ್ಪುಗಳ ಪ್ರಕಾರ ಅಬ್ರಹಾಂ ಅರ್ಜಿ ಅನೂರ್ಜಿತವಾಗಲಿದೆ. ಕಲಂ 17ಎ ಅಡಿ ಪೂರ್ವಾನುಮತಿ ಕೋರಿ ಅರ್ಜಿಯನ್ನು ಪೊಲೀಸ್ ಅಧಿಕಾರಿ ಸಲ್ಲಿಸಬೇಕೆ ವಿನಹ ಬೇರೆಯವರು ಅಲ್ಲ. ಈ ಅಂಶವನ್ನು ಪರಿಗಣಿಸದೇ ಪ್ರಾಸಿಕ್ಯೂಷನ್‌ ಮಂಜೂರಾತಿ ನೀಡಿರುವ ರಾಜ್ಯಪಾಲರ ಆದೇಶವನ್ನು ವಜಾಗೊಳಿಸಲು ಅರ್ಹವಾಗಿದೆ’ ಎಂದಿದ್ದಾರೆ.

‘ವಾಸ್ತವಾಂಶಗಳು ಮತ್ತು ಕಾನೂನಿನ ದೃಷ್ಟಿಯಲ್ಲಿ ಪೂರ್ವಾನುಮತಿ ಕೋರಿಕೆ ಆಧಾರರಹಿತವಾಗಿದೆ. ಫಿರ್ಯಾದುದಾರ ಅಬ್ರಹಾಂ 2024ರ ಜುಲೈ 18ರಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ತದನಂತರ; ಪ್ರಿಯಾಂಕಾ ಶ್ರೀವಾಸ್ತವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಅನುಸರಿಸಬೇಕಾದ ಕಡ್ಡಾಯ ನಿಯಮಗಳನ್ನು ಇಲ್ಲಿ ಪಾಲನೆ ಮಾಡಿಲ್ಲ. ಹೀಗಾಗಿ, ಪೂರ್ವಾನುಮತಿ ಕೋರಿರುವ ಮನವಿಯು ಆತುರದ ನಿರ್ಧಾರ ಎಂದು ಪರಿಗಣಿಸುವಲ್ಲಿ ರಾಜ್ಯಪಾಲರು ವಿಫಲರಾಗಿದ್ದಾರೆ. ಪ್ರತಿವಾದಿಗಳು ರಾಜಕೀಯ ಉದ್ದೇಶದಿಂದ ದೂರು ಸಲ್ಲಿಸಿದ್ದು, ಅವರ ನಡೆಯಲ್ಲಿ ಪ್ರಾಮಾಣಿಕತೆ ಇಲ್ಲ. ಆದ್ದರಿಂದ, ಸಂವಿಧಾನದ 163ನೇ ವಿಧಿಯ ಅನುಸಾರ ರಾಜ್ಯಪಾಲರು ತರ್ಕರಹಿತವಾಗಿ ಮತ್ತು ಸಕಾರಣವಿಲ್ಲದ ನೀಡಿರುವ ಪ್ರಾಸಿಕ್ಯೂಷನ್‌ ಮಂಜೂರಾತಿ ಆದೇಶವನ್ನು ತಿರಸ್ಕರಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT