ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video: ಜೈಶ್ರೀರಾಮ್‌ ಕೂಗಿ ಭಕ್ತರನ್ನು ಹುರಿದುಂಬಿಸಿದ ಸಿಎಂ ಸಿದ್ದರಾಮಯ್ಯ

Published 22 ಜನವರಿ 2024, 11:34 IST
Last Updated 22 ಜನವರಿ 2024, 11:34 IST
ಅಕ್ಷರ ಗಾತ್ರ

ಬೆಂಗಳೂರು: ಬಿದರಹಳ್ಳಿ ಹೋಬಳಿಯ, ಹಿರಂಡಹಳ್ಳಿ ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಿಸಿದ್ದ ಸಕುಟುಂಬ ಸಮೇತನಾಗಿರುವ ರಾಮ ಸೀತಾ ಲಕ್ಷ್ಮಣ ದೇವಾಲಯ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈಶ್ರೀರಾಮ್‌ ಕೂಗಿ ಭಕ್ತರನ್ನು ಹುರಿದುಂಬಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಭಾಷಣ ಮಾಡುತ್ತಿದ್ದ ಅವರು, ‘ಜೈ ಶ್ರೀರಾಮ್ ಎನ್ನುವುದು ಯಾರದ್ದೋ ಖಾಸಗಿ ಸ್ವತ್ತಲ್ಲ. ಅದು ಪ್ರತಿಯೊಬ್ಬ ಭಕ್ತರ ಸೊತ್ತು’ ಎಂದು ಹೇಳಿದರು. ಬಳಿಕ ‘ಜೈಶ್ರೀರಾಮ್‌’ ಎಂದು ಕೂಗಿದ್ದಲ್ಲದೇ, ಸಾರ್ವಜನಿಕರಿಂದಲೂ ಹೇಳಿಸಿದರು.

ಅಧರ್ಮ, ಅಮಾನವೀಯ ಕೆಲಸ ಮಾಡಿ ನಾಟಕೀಯವಾಗಿ ಪೂಜೆ ಮಾಡಿದರೆ ಆ ಪೂಜೆಯನ್ನು ದೇವರು ಒಪ್ಪಿಕೊಳ್ಳಲ್ಲ. ಸಕಲ ಜೀವಗಳೂ ಸಮಾನತೆ, ಪ್ರೀತಿಯಿಂದ ಬಾಳಬೇಕು ಎನ್ನುವುದು ಶ್ರೀರಾಮನ ಆದರ್ಶ ಆಶಯ ಎಂದು ತಿಳಿಸಿದರು.

‘ನಾನು ನಾಸ್ತಿಕನಲ್ಲ. ನಮ್ಮೂರಲ್ಲೂ ರಾಮನ ಗುಡಿ ಕಟ್ಟಿಸಿದ್ದೇನೆ. ಪ್ರತಿಯೊಬ್ಬರೂ ಅವರವರ ನಂಬಿಕೆಯಂತೆ ರಾಮನನ್ನು ಪೂಜಿಸುತ್ತಾರೆ. ಜಾತಿ-ಧರ್ಮಗಳ ಆಧಾರದಲ್ಲಿ ಮನುಷ್ಯರನ್ನು ದ್ವೇಷಿಸುವುದನ್ನು ಯಾವ ಧರ್ಮವೂ ಹೇಳುವುದಿಲ್ಲ’ ಎಂದು ವಿವರಿಸಿದರು.

ಶ್ರೀರಾಮ ಸಮಾಜಮುಖಿ ಆಗಿದ್ದರು. ಮಡಿವಾಳನ ಮಾತಿಗೂ ಬೆಲೆ ಕೊಟ್ಟವರು. ಪಿತೃವಾಕ್ಯ ಪರಿಪಾಲನೆಗೆ ವನವಾಸಕ್ಕೆ ಹೋದವರು. ಶ್ರೀರಾಮ, ಲಕ್ಷ್ಮಣ, ಸೀತೆ, ಆಂಜನೇಯರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಬುಡಕಟ್ಟು ಸಮುದಾಯದ ವಾಲ್ಮೀಕಿ ಅವರು ರಾಮಾಯಣವನ್ನು ಬರೆದು ವಿಶ್ವಕ್ಕೆ ಕೊಟ್ಟರು. ದೇವರು ನಮ್ಮ ಆತ್ಮ ಮತ್ತು ಶರೀರದಲ್ಲೇ ಇದ್ದಾನೆ ಎಂದು ಬಸವಣ್ಣ ತಿಳಿಸಿದ್ದರು. ದೇಹವೇ ದೇಗುಲ ಎನ್ನುವ ಸಂದೇಶವನ್ನು ಮನುಷ್ಯ ಪ್ರಪಂಚಕ್ಕೆ ನೀಡಿದ್ದರು ಎಂದು ತಿಳಿಸಿದರು.

ಮಹದೇವಪುರ ಶಾಸಕಿ ಮಂಜುಳಾ ಲಿಂಬಾವಳಿ ಮಾತನಾಡಿ, ‘ತಮ್ಮ ಹೆಸರಲ್ಲೇ ರಾಮನನ್ನು ಹೊಂದಿರುವ ಸಿದ್ದರಾಮಯ್ಯ ಅವರು ರಾಮನ ಗುಡಿ ಉದ್ಘಾಟನೆ ಮಾಡಿರುವುದು ಖುಷಿಯ ವಿಷಯ’ ಎಂದು ಹೇಳಿದರು.

ಸಚಿವರಾದ ಬೈರತಿ ಸುರೇಶ್, ಈಶ್ವರ್ ಖಂಡ್ರೆ, ಆಯೋಗದ ಉಪಾಧ್ಯಕ್ಷ ಎಂ.ವಿ. ರಾಜೀವ್‌ ಗೌಡ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಅರವಿಂದ ಲಿಂಬಾವಳಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT