ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಡವರ ಹಣ ಸಿಎಂ ಸಿದ್ದರಾಮಯ್ಯ ಕಿಸೆಗೆ: ಅಶೋಕ ಆರೋಪ

Published 6 ಜೂನ್ 2024, 11:18 IST
Last Updated 6 ಜೂನ್ 2024, 11:18 IST
ಅಕ್ಷರ ಗಾತ್ರ

ಬೆಂಗಳೂರು: ಬಡವರಿಗೆ ಸೇರಬೇಕಾಗಿದ್ದ ಹಣ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೇಬಿಗೆ ಹೋಗಿದೆ. ಪರಿಶಿಷ್ಟ ಜಾತಿ, ಪಂಗಡದ ಹಣವನ್ನೂ ನುಂಗುತ್ತಾರೆ ಎನ್ನುವುದು ರಾಜ್ಯ ರಾಜಕೀಯದ ದುರಂತ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆರೋಪಿಸಿದರು.

ರಾಜ್ಯಪಾಲರ ಭೇಟಿಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, 14 ಬಾರಿ ಬಜೆಟ್‌ ಮಂಡಿಸಿರುವುದಾಗಿ ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ಈಗ ಅವರ ಕಣ್ಣಿನಡಿಯಲ್ಲೇ ಹಗರಣ ನಡೆದಿದೆ. ಒಂದು ವರ್ಷ ಕಾಂಗ್ರೆಸ್‌ ಸರ್ಕಾರ ಲೂಟಿ ಗ್ಯಾರಂಟಿಯನ್ನು ನೀಡಿದೆ ಎಂದು ದೂರಿದರು.

ಸಚಿವ ನಾಗೇಂದ್ರ ಅವರು ಈ ಪ್ರಕರಣದಲ್ಲಿ ಸಣ್ಣ ಅರೋಪಿ. ಇದಕ್ಕೂ ದೊಡ್ಡ ಆರೋಪಿಗಳು ಹಿಂದೆ ಇದ್ದಾರೆ. ಈ ಎಲ್ಲ ಸತ್ಯ ಹೊರಬರಲು ಪ್ರಕರಣವನ್ನು ಸಿಬಿಐಗೆ ನೀಡಬೇಕು. ಅಕ್ರಮದ ಹಣವನ್ನು ಸಚಿರೊಬ್ಬರೇ ನುಂಗಿಲ್ಲ. ಇದರಲ್ಲಿ ಇಡೀ ಸಚಿವ ಸಂಪುಟವೇ ಶಾಮೀಲಾಗಿದೆ. ಹಣ ಹೈದರಾಬಾದ್‌ಗೆ ಹೋಗಿ ನಂತರ ದೆಹಲಿ ತಲುಪಿದೆ. ಈ ಹಗರಣ ತಮ್ಮ ಬುಡಕ್ಕೆ ಬಂದು ಬೀಡುತ್ತದೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಅವರು ಸಿಬಿಐ ತನಿಖೆ ಮಾಡಿಸಲು ಒಪ್ಪುತ್ತಿಲ್ಲ. ರಾಹುಲ್‌ಗಾಂಧಿ ಮತ್ತು ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಇದಕ್ಕೆ ಉತ್ತರ ನೀಡಬೇಕು ಎಂದೂ ಆಗ್ರಹಿಸಿದರು.

ಲೂಟಿಕೋರರ ಪಾರ್ಟಿ ಕಾಂಗ್ರೆಸ್‌ ನುಡಿದಂತೆ ನಡೆಯುತ್ತೇವೆ ಎಂದು ಹಣ ಕೊಳ್ಳೆ ಹೊಡೆದಿದ್ದಾರೆ. ಯಾವುದೇ ಪ್ರಕರಣದಲ್ಲಿ ಒಂದೇ ಬಾರಿಗೆ ಎರಡು ಸಂಸ್ಥೆಯಿಂದ ತನಿಖೆ ನಡೆಸಲು ಸಾಧ್ಯವಿಲ್ಲ. ಆದರೆ ಸಿಬಿಐ ಮಾಡಬೇಕಾದ ತನಿಖೆಯನ್ನು ಎಸ್‌ಐಟಿಗೆ ವಹಿಸಲಾಗಿದೆ. ಈ ಎಟಿಎಂ ಸರ್ಕಾರ ಟಕಾಟಕ್‌ ಎಂದು ಹಣ ವರ್ಗಾವಣೆ ಮಾಡಿಕೊಂಡಿದೆ. ಇನ್ನೂ ಯಾವ ನಿಗಮಗಳಲ್ಲಿ ಎಷ್ಟು ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ? ಎಷ್ಟು ಬೇನಾಮಿ ಖಾತೆಗಳಿಗೆ ಹಣ ಹೋಗಿದೆ ಎಂದು ಪತ್ತೆಯಾಗಬೇಕು. ಸಚಿವರ ಆಪ್ತ ಸಹಾಯಕ ಇದರಲ್ಲಿ ಶಾಮೀಲಾಗಿದ್ದಾನೆ ಎಂದರೆ ಸಚಿವರು ಕೂಡ ಶಾಮೀಲಾಗಿದ್ದಾರೆ ಎಂದರು.

ನಾಲ್ಕು ಹಂತದ ಹೋರಾಟ

ರಾಜ್ಯಪಾಲರಿಗೆ ಈ ಕುರಿತು ವಿವರ ನೀಡಿದ್ದೇವೆ. ಬಿಜೆಪಿ ನಾಲ್ಕು ಹಂತಗಳಲ್ಲಿ ಹೋರಾಟ ಮಾಡಲಿದೆ. ಸಚಿವರು ಹಾಗೂ ಮುಖ್ಯಮಂತ್ರಿಯವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಈ ಸರ್ಕಾರವನ್ನು ವಜಾ ಮಾಡಬೇಕು ಎಂದು ಕೂಡ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಇನ್ನೂ ಸಚಿವರ ಪರ ನಿಲ್ಲುತ್ತಾರೆ ಎಂದರೆ ಸಿಎಂ ಸಿದ್ದರಾಮಯ್ಯನವರಷ್ಟು ಭಂಡ ಯಾರೂ ಇಲ್ಲ. ಈ ಭ್ರಷ್ಟಾಚಾರಕ್ಕೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT