ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

KPSC ಅನುವಾದ ಅವಾಂತರ: ಪ್ರೊಬೇಷನರಿ ಹುದ್ದೆಗೆ ಮರುಪರೀಕ್ಷೆ ನಡೆಸಲು ಸಿಎಂ ಸೂಚನೆ

Published : 2 ಸೆಪ್ಟೆಂಬರ್ 2024, 7:42 IST
Last Updated : 2 ಸೆಪ್ಟೆಂಬರ್ 2024, 7:42 IST
ಫಾಲೋ ಮಾಡಿ
Comments

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಗೆ ಎರಡು ತಿಂಗಳ ಒಳಗೆ ಮರು ಪರೀಕ್ಷೆ ನಡೆಸುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಈ ಹುದ್ದೆಗಳ ನೇಮಕಾತಿಗೆ ಆಗಸ್ಟ್ 27ರಂದು ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ನಡೆಸಿತ್ತು. ಆದರೆ, ಪ್ರಶ್ನೆ ಪತ್ರಿಕೆ 1 ಮತ್ತು 2ರಲ್ಲಿನ ಪ್ರಶ್ನೆಗಳನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡುವಾಗ ಹಲವು ತಪ್ಪುಗಳು ನುಸುಳಿದ್ದವು. ಕೆಲವು ಪ್ರಶ್ನೆಗಳು ಮತ್ತು ಉತ್ತರದ ಆಯ್ಕೆಗಳು ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ತದ್ವಿರುದ್ಧವಾಗಿದ್ದವು. ಇನ್ನೂ ಕೆಲವು ಪ್ರಶ್ನೆಗಳು, ಉತ್ತರದ ಆಯ್ಕೆಗಳು ಅರ್ಥವೇ ಆಗದಂತಿದ್ದವು.

ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಪ್ರಶ್ನೆಪತ್ರಿಕೆಗಳಲ್ಲಿನ ತಪ್ಪುಗಳನ್ನು ಉಲ್ಲೇಖಿಸಿ ವಾಟ್ಸ್ಆ್ಯಪ್‌ ಗ್ರೂಪ್‌ಗಳಲ್ಲಿ, ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಮಾಡಿ, ಕನ್ನಡ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ರಕ್ಷಣಾ ವೇದಿಕೆಯೂ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು, ಸಾಹಿತಿಗಳು ಧ್ವನಿಗೂಡಿಸಿದ್ದರು.

ಈ ಬೆಳವಣಿಗೆ ಬೆನ್ನಲ್ಲೇ, ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಮತ್ತು ಕಾರ್ಯದರ್ಶಿ ಕೆ. ರಾಕೇಶ್‌ ಕುಮಾರ್ ಅವರನ್ನು ಸೋಮವಾರ ಕರೆಯಿಸಿಕೊಂಡ ಮುಖ್ಯಮಂತ್ರಿ, ಪ್ರಶ್ನೆ ಪತ್ರಿಕೆಯಲ್ಲಿ ಆಗಿರುವ ಗೊಂದಲ, ಎಡವಟ್ಟುಗಳಿಗೆ ಸಂಬಂಧಿಸಿದಂತೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿ ದ್ದಾರೆ. ಈ ಅವಾಂತರಕ್ಕೆ ಕಾರಣರಾದವರ ಮೇಲೆ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಕೆಪಿಎಸ್‌ಸಿ ಸಭೆ ಇಂದು

ಕೆಪಿಎಸ್‌ಸಿ ಸಭೆ ಮಂಗಳವಾರ (ಸೆ.3) ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿದ್ದು, ಈ ಸಭೆಯಲ್ಲಿ ಪರೀಕ್ಷಾ ಗೊಂದಲಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.‌

ಪ್ರತಿ ಮಂಗಳವಾರ ಆಯೋಗದ ಸಭೆ ನಡೆಯುವುದು ರೂಢಿ. ಆದರೆ, ಪೂರ್ವಭಾವಿ ಪರೀಕ್ಷೆ ಮಂಗಳವಾರ (ಆಗಸ್ಟ್‌ 27) ನಡೆದಿದ್ದ ಕಾರಣ ಅಂದು ಸಭೆ ನಡೆದಿಲ್ಲ. ಪರೀಕ್ಷೆಯ ಬಳಿಕ ಆಯೋಗ ಈ ಬಗ್ಗೆ ಚರ್ಚೆ ಮಾಡಿಲ್ಲ.

‘ಇಂಗ್ಲಿಷ್‌ನಲ್ಲಿದ್ದ ಪ್ರಶ್ನೆಗಳನ್ನು ಗೂಗಲ್ ತಂತ್ರಜ್ಞಾನ ಅಥವಾ ಎಐ ಬಳಸಿ ಕನ್ನಡಕ್ಕೆ ಭಾಷಾಂತರ ಮಾಡಿಲ್ಲ’ ಎಂದು ಕಾರ್ಯದರ್ಶಿ ರಾಕೇಶ್‌ಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ಆದರೆ, ಗೂಗಲ್‌ ತಂತ್ರಜ್ಞಾನ ಬಳಸಿಯೇ ಭಾಷಾಂತರ ಮಾಡಿರುವುದನ್ನು ಅಭ್ಯರ್ಥಿಗಳು ಪುರಾವೆಗಳ ಸಹಿತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ, ಭಾಷಾಂತರ ನಡೆದ ಸ್ಥಳಕ್ಕೆ ಮೊಬೈಲ್‌ ಅಥವಾ ಇತರ ಉಪಕರಣವನ್ನು ತೆಗೆದುಕೊಂಡು ಹೋಗಿರುವ ಅನುಮಾನ ಮೂಡಿದೆ. ಈ ಬಗ್ಗೆಯೂ ಸಭೆಯಲ್ಲಿ ಆಯೋಗದ ಸದಸ್ಯರು ಪ್ರಸ್ತಾಪಿಸುವ ಸಾಧ್ಯತೆ ಇದೆ ಎಂದೂ ಮೂಲಗಳು ಹೇಳಿವೆ.

ಪರೀಕ್ಷಾ ನಿಯಂತ್ರಕರೇ ಹೊಣೆ?: 

‘ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಸಂಪೂರ್ಣ ಹೊಣೆ ಪರೀಕ್ಷಾ ನಿಯಂತ್ರಕರದ್ದು. ಇದೇ ಜ. 31ರಿಂದ ಐಎಎಸ್‌ ಅಧಿಕಾರಿ ಗ್ಯಾನೇಂದ್ರ ಕುಮಾರ್‌ ಪರೀಕ್ಷಾ ನಿಯಂತ್ರಕರಾಗಿದ್ದಾರೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸಿ, ಫಲಿತಾಂಶ ನೀಡುವವರೆಗೆ ಅವರೇ ಗೌಪ್ಯತೆ ಕಾಪಾಡಿಕೊಳ್ಳಬೇಕು. ಹೀಗಾಗಿ, ಪೂರ್ವಭಾವಿ ಪರೀಕ್ಷೆಯಲ್ಲಿ ಕನ್ನಡ ಅನುವಾದದಲ್ಲಿ ಆಗಿರುವ ಲೋಪಗಳ ಹೊಣೆಯನ್ನು ಪರೀಕ್ಷಾ ನಿಯಂತ್ರಕರೇ ವಹಿಸಿಕೊಳ್ಳಬೇಕಿದೆ ಎಂದು ಆಯೋಗದ ಸದಸ್ಯರೊಬ್ಬರು ಹೇಳಿದರು.

ಪರೀಕ್ಷೆಗೆ ₹4 ಕೋಟಿಗೂ ಹೆಚ್ಚು ವೆಚ್ಚ

ಕೆಪಿಎಸ್‌ಸಿ ನಡೆಸಿದ ಪರೀಕ್ಷೆಗೆ ₹4 ಕೋಟಿಯಿಂದ ₹5 ಕೋಟಿಯಷ್ಟು ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ.

ಗ್ರೂಪ್‌ ‘ಎ’ ವೃಂದದ 159 ಮತ್ತು ಗ್ರೂಪ್‌ ‘ಬಿ’ ವೃಂದದ 225 ಸೇರಿ 384 ಹುದ್ದೆಗಳಿಗೆ ಒಟ್ಟು 2,10,916 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆ.27ರಂದು ನಡೆದ ಪರೀಕ್ಷೆಗೆ 1,31,885 (ಶೇ 62.52) ಮಂದಿ ಹಾಜರಾಗಿದ್ದಾರೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿನ ಒಟ್ಟು 564 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಹಿಂದೆ ನಡೆದ ಪರೀಕ್ಷೆಗೆ ಹಾಜರಾದವರಿಗೆ ಮಾತ್ರ ಮರು ಪರೀಕ್ಷೆ ನಡೆಯುವ ಸಾಧ್ಯತೆಯಿದೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT