ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಭಾಷಾಂತರ ಶಾಖೆ’ ರಚನೆಗೆ ಮನಸ್ಸು ಮಾಡದ ಕೆಪಿಎಸ್‌ಸಿ

ಮೂರು ವರ್ಷಗಳ ಹಿಂದೆಯೇ ಪತ್ರ ಬರೆದಿದ್ದ ನಿರ್ದೇಶನಾಲಯ
Published : 30 ಆಗಸ್ಟ್ 2024, 23:30 IST
Last Updated : 30 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲೇ ಭಾಷಾಂತರ ಶಾಖೆ ಆರಂಭಿಸುವಂತೆ ಭಾಷಾಂತರ ನಿರ್ದೇಶನಾಲಯ ಮೂರು ವರ್ಷಗಳ ಹಿಂದೆ ಪತ್ರ ಬರೆದಿದ್ದರೂ ಆಯೋಗ ಇದುವರೆಗೂ ಕ್ರಮಕೈಗೊಂಡಿಲ್ಲ.

ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ಮಂಗಳವಾರ ನಡೆಸಿದ್ದ ಪೂರ್ವಭಾವಿ ಪರೀಕ್ಷೆಯ ಎರಡನೇ ಪತ್ರಿಕೆಯಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ತರ್ಜುಮೆ ಮಾಡಿದ್ದ ಪ್ರಶ್ನೆಗಳ ಪೈಕಿ ಕೆಲವು ಅಪಾರ್ಥದಿಂದ ಕೂಡಿದ್ದರೆ, ಮತ್ತೆ ಕೆಲವು ಪ್ರಶ್ನೆಗಳು ಅರ್ಥವಾಗದೆ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಪರದಾಡಿದ್ದರು. 

ಇಂಗ್ಲಿಷ್‌ ಪ್ರಶ್ನೆಗಳನ್ನು ಗೂಗಲ್‌ ತಂತ್ರಜ್ಞಾನದ ನೆರವಿನಿಂದ ಭಾಷಾಂತರಿಸಲಾಗಿದೆ ಎಂದು  ಅಭ್ಯರ್ಥಿಗಳು ದೂರಿದ್ದರು. ಅದಕ್ಕೆ ಸ್ಪಷ್ಟನೆ ನೀಡಿದ್ದ ಆಯೋಗ, ‘ತರ್ಜುಮೆಗೆ ಗೂಗಲ್‌ ಅಥವಾ ಕೃತಕ ಬುದ್ಧಿಮತ್ತೆ ಬಳಸಿಲ್ಲ, ಭಾಷಾಂತರ ನಿರ್ದೇಶನಾಲಯದ ಭಾಷಾಂತರಕಾರರೇ ಕನ್ನಡಾನುವಾದ ಮಾಡಿದ್ದರು’ ಎಂದು ಪ್ರತಿಕ್ರಿಯಿಸಿತ್ತು. ಆದರೆ, ಭಾಷಾಂತರಕ್ಕೆ ಬೇಕಾದ ನಿಯಮ, ಪ್ರಕ್ರಿಯೆಗಳನ್ನು ಕೆಪಿಎಸ್‌ಸಿ ಮೊದಲಿನಿಂದಲೂ ಅನುಸರಿಸುತ್ತಿಲ್ಲ ಎನ್ನುವುದನ್ನು ನಿರ್ದೇಶನಾಲಯ ಬರೆದ ಪತ್ರ ಬಹಿರಂಗಪಡಿಸಿದೆ.

ಭಾಷಾಂತರವನ್ನು ಲೋಪಗಳಿಲ್ಲದಂತೆ ನಿರ್ವಹಿಸಲು ಶಾಖೆಯ ಅಗತ್ಯವಿದ್ದು, ಶಾಖೆ ಆರಂಭಿಸಲು ಅನುಮತಿ ನೀಡಿದರೆ ಭಾಷಾಂತರ ತಜ್ಞರು, ವಿಷಯ ಪರಿಣತರು, ಸಂಶೋಧಕರು, ಅಧಿಕಾರಿಗಳ ತಂಡವನ್ನು ನಿರ್ದೇಶನಾಲಯವೇ ನಿಯೋಜನೆ ಮಾಡಲಿದೆ ಎಂದು ಜುಲೈ 2021ರಲ್ಲಿ ಪತ್ರದಲ್ಲಿ ಬರೆಯಲಾಗಿದೆ.

‘ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಿದ್ದು, ಕಾಯ್ದೆಗಳು, ಕಾನೂನು, ಆದೇಶ, ತೀರ್ಪುಗಳನ್ನು  ಇಂಗ್ಲಿಷ್‌ ಸೇರಿದಂತೆ ಬೇರೆ ಬೇರೆ ಭಾಷೆಗಳಿಂದ ತಪ್ಪಿಲ್ಲದಂತೆ, ಅರ್ಥ ವ್ಯತ್ಯಯವಾಗದಂತೆ ಕನ್ನಡಕ್ಕೆ ಅನುವಾದ ಮಾಡುವುದು ಅತ್ಯಂತ ಅಗತ್ಯ. ಹಾಗೆಯೇ, ರಾಜ್ಯ ಸರ್ಕಾರದ ವಿವಿಧ ಇಲಾಖೆ, ನಿಗಮ, ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನಡೆಸುವ ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಂಗ್ಲಿಷ್‌ ಹಾಗೂ ಕನ್ನಡದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಕೆಪಿಎಸ್‌ಸಿ ಗೆಜೆಟೆಡ್‌ ‍ಪ್ರೊಬೇಷನರಿ ಹುದ್ದೆಗಳೂ ಸೇರಿದಂತೆ ವಿವಿಧ ನೇಮಕಾತಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದರಿಂದ ಕಾಯಂ ಆದ ಭಾಷಾಂತರ ಶಾಖೆಯ ಅಗತ್ಯವಿದೆ’ ಎಂದು ಪತ್ರದಲ್ಲಿ ವಿವರಿಸಲಾಗಿತ್ತು. 

ಭಾಷಾಂತರಕಾರರು ಭಾಷಾಂತರಿಸಿದ ಕರಡು ಪ್ರತಿಯನ್ನು ಸಂಶೋಧನಾಧಿಕಾರಿಗಳು ಮೊದಲನೆಯ ಹಂತದಲ್ಲಿ ಪರಿಶೀಲಸಬೇಕು. ನಂತರ ಸಹಾಯಕ ನಿರ್ದೇಶಕರು, ಉಪ ನಿರ್ದೇಶಕರ ಹಂತದ ಅಧಿಕಾರಿಗಳು ಕರಡಚ್ಚು ಪರಿಶೀಲನೆ ನಡೆಸುತ್ತಾರೆ. ಅಂತಿಮವಾಗಿ ಮುದ್ರಣಕ್ಕೆ ಕಳುಹಿಸಲಾಗುತ್ತಿದೆ. ಈ ಎಲ್ಲ ಪ್ರಕ್ರಿಯೆಗಳನ್ನು ನಿರ್ವಹಿಸಲು ಆಯೋಗದಲ್ಲೇ ಪ್ರತ್ಯೇಕ ಶಾಖೆಯ ಅಗತ್ಯವಿದೆ ಎಂದು ಮನವರಿಕೆ ಮಾಡಲಾಗಿತ್ತು ಎಂದು ನಿರ್ದೇಶನಾಲಯದ ಮೂಲಗಳು ಹೇಳಿವೆ.

‘ಕೆಪಿಎಸ್‌ಸಿ ಇಂತಹ ಯಾವ ಕ್ರಮವನ್ನೂ ಕೈಗೊಳ್ಳದೆ ಇದೇ ಏಪ್ರಿಲ್‌ನಲ್ಲಿ ಭಾಷಾಂತರ ನಿರ್ದೇಶನಾಲಯಕ್ಕೆ ಪತ್ರ ಬರೆದು ಆಯೋಗದಲ್ಲಿ ಕೆಲವೊಂದು ಕಾಗದ ಪತ್ರಗಳನ್ನು ತರ್ಜುಮೆ ಮಾಡಲು ಇಬ್ಬರು ಭಾಷಾಂತರಕಾರರನ್ನು ನಿಯೋಜಿಸುವಂತೆ ಕೋರಿಕೆ ಸಲ್ಲಿಸಿತ್ತು. ಆದರೆ, ಅವರು ತರ್ಜುಮೆ ಮಾಡಿದ ಕರಡನ್ನು ವಿಷಯ ಪರಿಣತರಿಂದ ಪರಿಶೀಲಿಸದೆ ಮುದ್ರಣಕ್ಕೆ ಕಳುಹಿಸಿರುವುದು ಎಡವಟ್ಟುಗಳಿಗೆ ಕಾರಣ’ ಎನ್ನುತ್ತಾರೆ ಸಂಸದೀಯ ವ್ಯವಹಾರಗಳು ಮತ್ತು ಶಾಸನರಚನಾ ಇಲಾಖೆಯ ಅಧಿಕಾರಿಗಳು.

ಇರುವುದೇ 21 ಭಾಷಾಂತರಕಾರರು

ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕಾಗಿ ಸ್ಥಾಪಿತವಾದ ಭಾಷಾಂತರ ನಿರ್ದೇಶನಾಲಯ ಪ್ರಸ್ತುತ ಕರ್ನಾಟಕ ಕಾನೂನು ವರದಿ ಪರಿಷತ್‌, ಕರ್ನಾಟಕ ವಿಧಾನಸಭಾ ಸಚಿವಾಲಯ, ವಿಧಾನಪರಿಷತ್‌ ಸಚಿವಾಲಯ, ಹೈಕೋರ್ಟ್‌ ತೀರ್ಪುಗಳ ವರದಿ ಮಂಡಳಿಗಳಲ್ಲಿನ ಭಾಷಾಂತರ ಕೆಲಸ ಮಾಡುತ್ತಿದೆ.

1977ರಲ್ಲಿ ಆರಂಭವಾದ ನಿರ್ದೇಶನಾಲಯಕ್ಕೆ ಇದುವರೆಗೆ ಮುಂಜೂರಾದ ಭಾಷಾಂತರಕಾರರ ಹುದ್ದೆಗಳು ಕೇವಲ 40, ಅವುಗಳಲ್ಲಿ 19 ಹುದ್ದೆಗಳು ಖಾಲಿ ಇವೆ. ಇರುವ 21 ಮಂದಿಯೇ ನಾಲ್ಕೂ ಕಡೆ ಕೆಲಸ ಮಾಡುತ್ತಾರೆ. ಜೊತೆಗೆ, ಕೆಪಿಎಸ್‌ಸಿ ಸೇರಿದಂತೆ ವಿವಿಧೆಡೆ ಕೋರಿಕೆ ಮೇರೆಗೆ ನಿಯೋಜನೆ ಮೇಲೆ ಕಳುಹಿಸಲಾಗುತ್ತದೆ. 

ಕೆಪಿಎಸ್‌ಸಿಗೆ ನಿಯೋಜಿಸಿದ್ದು ಕಾಗದ ಪತ್ರ ತರ್ಜುಮೆ ಮಾಡಲು; ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ಅಲ್ಲ. ಆಯೋಗವು ವಿಷಯ ಪರಿಣತರ ಸಹಾಯ ಪಡೆಯಬೇಕಿತ್ತು
ಜಿ.ಶ್ರೀಧರ್ ಕಾರ್ಯದರ್ಶಿ, ಶಾಸನರಚನಾ ಇಲಾಖೆ
ಪ್ರಶ್ನೆ ಪತ್ರಿಕೆ ತಯಾರು ಮಾಡಿದ ಅಧಿಕಾರಿಗಳನ್ನು ಈ ಕೂಡಲೇ ಅಮಾನತ್ತಿನಲ್ಲಿ ಇಟ್ಟು, ಇಲಾಖೆಯಲ್ಲಿ ಕಿಂಚಿತ್ತಾದರೂ ಶಿಸ್ತಿದೆ ಎಂಬುದನ್ನು ತೋರಿಸಬೇಕು
ಬಸನಗೌಡ ಪಾಟೀಲ ಯತ್ನಾಳ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT