ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ?: ಸಿದ್ದರಾಮಯ್ಯ

ಎಕ್ಸ್‌ನಲ್ಲಿ ‘ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ’ ಅಭಿಯಾನ
Published 27 ಅಕ್ಟೋಬರ್ 2023, 11:00 IST
Last Updated 27 ಅಕ್ಟೋಬರ್ 2023, 11:00 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ’ ಎಂಬ ಹೆಸರಿನಲ್ಲಿ ಕೇಂದ್ರದ ವಿರುದ್ಧ ಅಭಿಯಾನ ಆರಂಭಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಎಕ್ಸ್‌’ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೊದಲ ದಿನವೇ ‘ಎಕ್ಸ್‌’ ಮಾಡಿರುವ ಸಿದ್ದರಾಮಯ್ಯ, ‘ನಿಮ್ಮ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಇದು ನನ್ನ ಪ್ರಶ್ನೆ ಮಾತ್ರವಲ್ಲ, ನಾಡಿನ ಆರೂವರೆ ಕೋಟಿ ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ’ ಎಂದು ಹೇಳಿದ್ದಾರೆ.

ರಾಜ್ಯದ 216 ತಾಲೂಕುಗಳು ಭೀಕರ ಬರದಿಂದ ಕಂಗೆಟ್ಟಿವೆ. ಈವರೆಗೆ ಕೇಂದ್ರದಿಂದ ನಯಾಪೈಸೆ ಪರಿಹಾರದ ಹಣ ಬಿಡುಗಡೆ ಆಗಿಲ್ಲ. ಪ್ರಧಾನಿ ನರೇಂದ್ರಮೋದಿ ಅವರೇ ಜಗತ್ತಿನ ಕಷ್ಟಕ್ಕೆಲ್ಲ ದುಃಖಕ್ಕೆಲ್ಲ ಮಿಡಿಯುವ ನಿಮ್ಮ ವಿಶಾಲ ಹೃದಯ ಕನ್ನಡಿಗರ ಬಗ್ಗೆ ಇಷ್ಟೊಂದು ಕಟುವಾಗಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

‘ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾಗಿರುವ ಅನುದಾನ, ತೆರಿಗೆಯಲ್ಲಿ ಪಾಲು, ಬರ ಮತ್ತು ಜಿಎಸ್‌ಟಿ ಪರಿಹಾರ ಪೂರ್ಣಪ್ರಮಾಣದಲ್ಲಿ ಬಂದಿಲ್ಲ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳು ಮತ್ತು ಐಬಿಪಿಎಸ್‌ ನೇಮಕಾತಿಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಎದುರಿಸಲು ಅವಕಾಶ ನೀಡದೆ ಲಕ್ಷಾಂತರ ಯುವ ಕನ್ನಡಿಗರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡಲು ಪ್ರಯತ್ನಿಸಿ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಲಾಗುತ್ತಿದೆ. ನಾಡಿನ ರೈತರ ಜೀವನಾಧಾರವಾಗಿರುವ ಕಾವೇರಿ, ಮಹದಾಯಿ, ಕೃಷ್ಣಾ, ಭದ್ರಾ ಮೇಲ್ದಂಡೆ ಮೊದಲಾದ ನದಿಗಳ ನೀರಾವರಿ ಯೋಜನೆಗಳಿಗೆ ಬೆಂಬಲ ನೀಡದೆ, ಅನ್ನದಾತನನ್ನು ಸಂಕಷ್ಟಕ್ಕೆ ನೂಕಲಾಗಿದೆ ಎಂದು ಆರೋಪಿಸಿದ್ದಾರೆ.

ಕನ್ನಡಿಗರೇ ಬೆವರು-ರಕ್ತ ಸುರಿಸಿ ಕಟ್ಟಿ ಬೆಳೆಸಿದ ಕರ್ನಾಟಕದ ಹೆಮ್ಮೆಯ ವಿಜಯಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ಕಾರ್ಪೊರೇಷನ್‌ ಬ್ಯಾಂಕ್‌ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಮೊದಲಾದ ಲಾಭದಲ್ಲಿದ್ದ ಬ್ಯಾಂಕುಗಳನ್ನು ನಷ್ಟದಲ್ಲಿದ್ದ ಬ್ಯಾಂಕುಗಳ ಜೊತೆ ವಿಲೀನ ಮಾಡಿ ಕನ್ನಡಿಗರಿಗೆ ದ್ರೋಹ ಎಸಗಲಾಗಿದೆ ಎಂದು ಕಿಡಿಕಾರಿದ್ದಾರೆ.

ಕೇಂದ್ರ ಬಿಜೆಪಿ ಸರ್ಕಾರದ ಈ ನಡವಳಿಕೆಗಳು ಒಕ್ಕೂಟ ವ್ಯವಸ್ಥೆಯ ಮೂಲ ಆಶಯಕ್ಕೆ ವಿರುದ್ಧವಾಗಿರುವುದರಿಂದ ಅದರ ವಿರುದ್ಧ ಧ್ವನಿಯೆತ್ತುವುದು ಅನಿವಾರ್ಯವೆಂದು ಭಾವಿಸಿ, ಇಂದಿನಿಂದ #ಸ್ವಾಭಿಮಾನಿ_ಕನ್ನಡಿಗರಪ್ರಶ್ನೆ ಎಂಬ ಹ್ಯಾಷ್‌ಟ್ಯಾಗ್ ಅಡಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT