ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರೇ ಲಂಚ ಕೇಳಿದರೆ ದೂರು ನೀಡಿ: ಡಿ.ಕೆ. ಶಿವಕುಮಾರ್‌

ಶಾಸಕರು, ಅಧಿಕಾರಿಗಳ ಹೆಸರಲ್ಲಿ ಹಣ ಕೇಳಿದರೆ ಕ್ರಮ: ಡಿ.ಕೆ. ಶಿವಕುಮಾರ್‌
Published 5 ಜನವರಿ 2024, 23:14 IST
Last Updated 5 ಜನವರಿ 2024, 23:14 IST
ಅಕ್ಷರ ಗಾತ್ರ

ಬೆಂಗಳೂರು: ‘ಯಾರೇ ಲಂಚ ಕೇಳಿದರೂ ನಿರ್ದಾಕ್ಷಿಣ್ಯವಾಗಿ ದೂರು ನೀಡಿ. ನನ್ನ ಹೆಸರು, ಕೃಷ್ಣಬೈರೇಗೌಡ, ವಿಶ್ವನಾಥ್, ಪೊಲೀಸ್ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಸೇರಿದಂತೆ ಯಾರ ಹೆಸರಲ್ಲಿ ಹಣ ಕೇಳಿದರೂ ನಮ್ಮ ಗಮನಕ್ಕೆ ತನ್ನಿ.. ನಾವು ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ...’

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ತಮ್ಮ ಬಳಿ ದೂರು ನೀಡಲು ಬಂದ ಯಲಹಂಕ, ಬ್ಯಾಟರಾಯನಪುರ ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಗಳ ನಾಗರಿಕರಿಗೆ ಹೇಳಿದ ಮಾತುಗಳಿವು.

ಯಲಹಂಕದಲ್ಲಿ ಶುಕ್ರವಾರ ನಡೆದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ‘ಅಧಿಕಾರಿಗಳು ಗೌರವ ನೀಡದಿದ್ದಾಗ ಜನ ರಾಜಕಾರಣಿಗಳ ಬಳಿ ಬರುತ್ತಾರೆ. ಅಧಿಕಾರಿಗಳು ಲಂಚ ಕೇಳಿ ಹಿಂಸೆ ಕೊಡುವಂತಹ ದೂರುಗಳು ಹೆಚ್ಚುತ್ತಿವೆ. ಇವುಗಳನ್ನು ತಪ್ಪಿಸಬೇಕು’ ಎಂದರು.

‘ದೃಷ್ಟಿದೋಷವಿದ್ದರೂ ಬಿ.ಎ ಪದವಿ ಪೂರ್ಣಗೊಳಿಸಿದ್ದೇನೆ. ಮನೆ ಮತ್ತು ಕೆಲಸ ಬೇಕು’ ಎಂದು ದಾಸರಹಳ್ಳಿಯ ಹಿವ್ಯಾಂಜಲಿ ಮನವಿ ಸಲ್ಲಿಸಿದಾಗ, ಬಿಡಿಎ ಆಯುಕ್ತ ಜಯರಾಮ್ ಅವರಿಗೆ ’ಅಂಗವಿಕಲರ ಕೋಟಾದ ಅಡಿಯಲ್ಲಿ ಫ್ಲಾಟ್ ವ್ಯವಸ್ಥೆ ಮಾಡಿ’ ಎಂದು, ಪಾಲಿಕೆಯಲ್ಲಿ ಕೆಲಸ ಕೊಡಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಗೆ ಡಿಸಿಎಂ ಸೂಚಿಸಿದರು.

‘ಬಿಪಿಎಲ್ ಕಾರ್ಡಿಲ್ಲ, ಕಿಡ್ನಿ ಹಾಳಾಗಿ ಜೀವನ ಸಾಕಾಗಿದೆ, ದಯಾಮರಣ ಕೊಡಿ’ ದಾಸರಹಳ್ಳಿ ರಾಧಮ್ಮ ಅಳಲು ತೋಡಿಕೊಂಡರು. 

‘ಸಾರ್ ನಮ್ಮ ಮನೆ ನೀರಿನ ಮೀಟರ್ ಓಡುತ್ತದೆ, ಆದರೆ ನೀರೆ ಬರುತ್ತಿಲ್ಲ’ ಎಂದು ಗಂಗೇಗೌಡ ದೂರಿದರು. ‘ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿದಂತೆ ಪುರುಷರಿಗೂ ನೀಡಿ’ ಎಂದು ಯಲಹಂಕ ಹಿರಿಯ ನಾಗರಿಕರ ವೇದಿಕೆಯವರು ಮನವಿ ಮಾಡಿದರು. ‘ಆಗಲ್ಲ’ ಎಂದು ಡಿಸಿಎಂ ಉತ್ತರಿಸಿದರು.

ವಿದ್ಯಾರಣ್ಯಪುರದ ಬೀದಿ ಬದಿ ಪಡ್ಡು ವ್ಯಾಪಾರಿ ವಲ್ಲಿಮಾ ಅವರು ‘ರಸ್ತೆ ಬದಿ ವ್ಯಾಪಾರ ಮಾಡಲು ಅವಕಾಶ ನೀಡಿ’ ಎಂದು ಮನವಿ ಮಾಡಿದರು. ‘450 ಅಡಿ ಜಾಗಕ್ಕೆ ₹1.90 ಲಕ್ಷ ತೆರಿಗೆ ಬಂದಿದೆ’ ಎಂದು ಹೆಬ್ಬಾಳ ಅಮಾನಿಕೆರೆ ನಿವಾಸಿ ರಾಮಚಂದ್ರ ದೂರಿದರು.

‘ಸಮಸ್ಯೆ ಬಗೆಹರಿಯಲಿಲ್ಲ ಎಂದರೆ ಡಿಸಿ ಮನೆಗೇ ಹೋಗು, ಅವರನ್ನು ಬಿಡಬೇಡ’ ಎಂದು ಜಮೀನು ವಿವಾದ ಬಗೆಹರಿಸಿ ಎಂದು ಮನವಿ ಸಲ್ಲಿಸಿದ ಅರಕೆರೆಯ ಓಬಣ್ಣ ಅವರಿಗೆ ಡಿಸಿಎಂ ಸೂಚಿಸಿದರು.

‘ಹಸಿರು ಪಡಿತರ ಚೀಟಿಯಲ್ಲಿ ಅಳಿಯನ ಹೆಸರು ಸೇರ್ಪಡೆಯಾಗಿದ್ದು, ಅವರು ತೆರಿಗೆ ವ್ಯಾಪ್ತಿಗೆ ಬರುವುದರಿಂದ ಪಡಿತರ ಚೀಟಿಯನ್ನು ರದ್ದುಪಡಿಸಲಾಗಿದೆ. ಮನೆಯಲ್ಲಿ ನಾನು ಮತ್ತು ನನ್ನ ಪತಿ ಇಬ್ಬರೇ ವಾಸಿಸುತ್ತಿದ್ದು, ಅವರಿಗೆ ಸರಿಯಾಗಿ ಕಿವಿ ಕೇಳಿಸುತ್ತಿಲ್ಲ. ನಮಗೆ ಸಹಾಯ ಮಾಡಿ ಪಡಿತರ ಚೀಟಿ ಕೊಡಿಸಿ’ ಎಂದು ದಾಸರಹಳ್ಳಿಯ ಬಾಗಲಗುಂಟೆ ನಿವಾಸಿ ರೇಣುಕಾ ಮನವಿ ಮಾಡಿದರು.

‘ದೊಡ್ಡಬೆಟ್ಟಹಳ್ಳಿ ಸರ್ವೆ ನಂ.1ರಲ್ಲಿ ಒಂದು ಎಕರೆ ವಿಸ್ತೀರ್ಣದಲ್ಲಿ ಆಶ್ರಯ ಯೋಜನೆಯಡಿ 49 ನಿವೇಶನಗಳನ್ನು ವಿಂಗಡಿಸಿದ್ದು, 31 ಫಲಾನುಭವಿಗಳಿಗೆ ಹಕ್ಕುಪತ್ರ ನೋಂದಣಿಯಾಗಿದೆ. ಈ ಬಡಾವಣೆಗೆ ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಕೆ.ಎಸ್‌.ಚಂದ್ರಶೇಖರ್‌ ಆಜಾದ್‌ ಮನವಿಪತ್ರ ಸಲ್ಲಿಸಿದರು.

ಯಲಹಂಕದಲ್ಲಿ ಶುಕ್ರವಾರ ನಡೆದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಶಾಸಕರಾದ ಮುನಿರಾಜು, ಎಸ್‌.ಆರ್‌. ವಿಶ್ವನಾಥ್‌ ಭಾಗವಹಿಸಿದ್ದರು

‘ದೂರು ಬಗೆಹರಿಸಲು ಪ್ರತ್ಯೇಕ ತಂಡ’

‘3 ಸಾವಿರ ಅರ್ಜಿಗಳು ನೋಂದಣಿ ಆಗಿದ್ದು ಅವುಗಳ ತ್ವರಿತ ವಿಲೇವಾರಿಗೆ ವಾರ್ಡ್ ಮಟ್ಟದ ಅಧಿಕಾರಿಗಳಿಗೆ ಸಮಯ ನಿಗದಿ ಮಾಡುತ್ತೇವೆ. ಎಲ್ಲಾ ದೂರುಗಳನ್ನು ಬಗೆಹರಿಸಲು ಪ್ರತ್ಯೇಕ ತಂಡ ಮಾಡುತ್ತೇವೆ. ಜನರ ಅರ್ಜಿ ಸರಿ ಇಲ್ಲದಿದ್ದರೆ ಅವರನ್ನು ಸಂಪರ್ಕಿಸಿ ಮತ್ತೆ ಸರಿಯಾದ ಅರ್ಜಿ ಪಡೆಯುತ್ತೇವೆ’ ಎಂದು ಡಿಸಿಎಂ ಶಿವಕುಮಾರ್‌ ಅವರು ಸುದ್ದಿಗಾರರಿಗೆ ತಿಳಿಸಿದರು. ‘ಕಂದಾಯ ಇಲಾಖೆ ಪಾಲಿಕೆಗೆ ಸಂಬಂಧಿಸಿದ ದೂರುಗಳು ಹೆಚ್ಚಾಗಿದ್ದು ಖಾತೆ ವಿಚಾರವಾಗಿಯೂ ದೂರುಗಳು ಬಂದಿವೆ. ಮನೆಗಳು ಬೇಕು ಎಂಬ ಬೇಡಿಕೆ ಕೂಡ ಹೆಚ್ಚಾಗಿದ್ದು ಉಚಿತವಾಗಿ ಮನೆ ನೀಡಲು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಅವಕಾಶ ಇಲ್ಲ. ಇವರಿಗೆ ಕಡಿಮೆ ದರದಲ್ಲಿ ಮನೆ ನೀಡಲಾಗುತ್ತಿದ್ದು ವಸತಿ ಇಲಾಖೆ ಜತೆ ಚರ್ಚೆ ಮಾಡಿ ಎಷ್ಟು ವಿನಾಯಿತಿ ನೀಡಬಹುದೋ ಅಷ್ಟು ನೀಡುತ್ತೇವೆ’ ಎಂದು ಹೇಳಿದರು.

ಬಿಜೆಪಿ ಶಾಸಕರ ಹೊಗಳಿಕೆ

‘ಡಿ.ಕೆ. ಶಿವಕುಮಾರ್‌ ಅವರು ನಡೆಸುತ್ತಿರುವ ‘ಬಾಗಿಲಿಗೆ ಬಂತು ಸರ್ಕಾರ’ ವಿಶಿಷ್ಟವಾದ ಕಾರ್ಯಕ್ರಮ. ಇದಕ್ಕೆ ನಮ್ಮ ಬೆಂಬಲವಿದೆ. ಕೆಂಪೇಗೌಡರ ಪುತ್ರರಾಗಿರುವ ಅವರಿಗೆ ಬೆಂಗಳೂರು ಅಭಿವೃದ್ಧಿಯಲ್ಲಿ ದೂರದೃಷ್ಟಿ ಇದೆ’ ಎಂದು ಯಲಹಂಕ ವಿಧಾನಸಭೆ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್ ಹೊಗಳಿದರು. ‘ಡಿಸಿಎಂ ಅವರು ಛಲ ಆತ್ಮಸ್ಥೈರ್ಯ ಎದುರಿಸುವ ಗುಣ ಉಳ್ಳವರು. ಅವರ ಒಂದಷ್ಟು ಗುಣಗಳನ್ನು ನಾನು ಅಳವಡಿಸಿಕೊಂಡಿದ್ದೇನೆ’ ಎಂದರು. ‘ಬೆಂಗಳೂರನ್ನು ಅಭಿವೃದ್ಧಿ ಮಾಡುವ ಇಚ್ಚಾಶಕ್ತಿ ಧೈರ್ಯ ಮತ್ತು ತಾಕತ್ತು ಎರಡೂ ಡಿ.ಕೆ.ಶಿವಕುಮಾರ್ ಅವರಿಗೆ ಇದೆ. ನಗರದ ಅಭಿವೃದ್ಧಿಗೆ ಮುಂದಿನ ಬಜೆಟ್‌ನಲ್ಲಿ ಉತ್ತಮ ಅನುದಾನ ಕೊಡಬೇಕು’ ಎಂದು ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಶಾಸಕ ಮುನಿರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT