ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ಮೇಲೆ ಶಾಸಕರ ಅತೃಪ್ತಿ: ಸಿಎಲ್‌ಪಿ ಸಭೆಯಲ್ಲಿ ಪ್ರಸ್ತಾಪಿಸಲು ಸಿದ್ಧತೆ

Published 24 ಜುಲೈ 2023, 23:30 IST
Last Updated 24 ಜುಲೈ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ವರ್ಗಾವಣೆ ವಿಚಾರದಲ್ಲಿ ಮಾಡಿದ ಶಿಫಾರಸುಗಳಿಗೆ ಸಚಿವರು ಸ್ಪಂದಿಸುತ್ತಿಲ್ಲವೆಂದು ಅಸಮಾಧಾನಗೊಂಡಿರುವ ಕೆಲವು ಕಾಂಗ್ರೆಸ್‌ ಶಾಸಕರು, ಇದೇ 27ರಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ (ಸಿಎಲ್‌ಪಿ) ಈ ವಿಷಯ ಪ್ರಸ್ತಾಪಿಸಲು ಮುಂದಾಗಿದ್ದಾರೆ.

ಹೋಟೆಲ್‌ ರ‍್ಯಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ಅಂದು ಸಂಜೆ 6.30ಕ್ಕೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಾ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. 

‘ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳ ಕಳೆದಿದ್ದು, ಸಚಿವರ ಕಾರ್ಯವೈಖರಿಯ ಬಗ್ಗೆ ಸಭೆಯಲ್ಲಿ ಪರಿಶೀಲನೆ ನಡೆಯಲಿದೆ. ಆದರೆ, ಸಚಿವರು ತಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲವೆಂದು ಕೆಲವು ಶಾಸಕರು ಈಗಾಗಲೇ ಪಕ್ಷದ ನಾಯಕರಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ. ಮುಖ್ಯವಾಗಿ ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಧಿಕಾರಿ, ನೌಕರರ ವರ್ಗಾವಣೆಗೆ ಮಾಡಿದ ಶಿಫಾರಸುಗಳಿಗೆ ಬೆಲೆ ನೀಡುತ್ತಿಲ್ಲ. ಈ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಲು ಕೆಲವರು ನಿರ್ಧರಿಸಿದ್ದಾರೆ ಎಂದು ಶಾಸಕರೊಬ್ಬರು ಹೇಳಿದರು.

ಚುನಾವಣೆಯಲ್ಲಿ ಘೋಷಿಸಿದ್ದ ‘ಗ್ಯಾರಂಟಿ’ಗಳ ಪೈಕಿ, ಶಕ್ತಿ, ಅನ್ನ ಭಾಗ್ಯ (5 ಕೆ.ಜಿ. ಹೆಚ್ಚುವರಿ ಅಕ್ಕಿ ಬದಲು ₹170 ನಗದು), ಗೃಹ ಜ್ಯೋತಿ, ಗೃಹ ಲಕ್ಷ್ಮಿ ಯೋಜನೆಗಳು ಈಗಾಗಲೇ ಜಾರಿಗೆ ಬಂದಿವೆ. ‘ಯುವ ನಿಧಿ‘ಗೆ ಇನ್ನಷ್ಟೆ ಚಾಲನೆ ಸಿಗಬೇಕಿದೆ. ಈ ಗ್ಯಾರಂಟಿಗಳ ಜಾರಿಯ ಕಾರಣಕ್ಕೆ ಈ ಬಾರಿ ಶಾಸಕರ ವಿಶೇಷ ಅನುದಾನಕ್ಕೆ ಕತ್ತರಿ ಬೀಳುವ ಸಾಧ್ಯತೆಯಿದೆ. ಇದು ಕೂಡಾ ಕೆಲವು ಶಾಸಕರ ಕೋಪಕ್ಕೆ ಕಾರಣವಾಗಿದೆ. ವಿಶೇಷ ಅನುದಾನ ನೀಡದೇ ಇದ್ದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾದರೂ ಹೇಗೆ ಎಂದು ಪ್ರಶ್ನಿಸಲು ಕೆಲವರು ತೀರ್ಮಾನಿಸಿದ್ದಾರೆ ಎಂದೂ ಗೊತ್ತಾಗಿದೆ.

ವಿಧಾನ ಮಂಡಲ ಅಧಿವೇಶನ ಈಗಷ್ಟೆ ಮುಗಿದಿದೆ. ಬಜೆಟ್‌ ಘೋಷಣೆಗಳು ಅನುಷ್ಠಾನಗೊಳ್ಳಬೇಕಿವೆ. ಆ ಬೆನ್ನಲ್ಲೆ, ಜಂಟಿ ಹೋರಾಟಕ್ಕೆ ಬಿಜೆಪಿ– ಜೆಡಿಎಸ್‌ ಮುಂದಾಗಿವೆ. ವಿರೋಧ ಪಕ್ಷಗಳ ಸಂಘಟಿತ ಹೋರಾಟವನ್ನು ಒಗ್ಗಟ್ಟಿನಿಂದ ಎದುರಿಸಲು ರೂಪಿಸಬೇಕಾದ ಕಾರ್ಯತಂತ್ರ, 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT