ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂಡಿಯಾ’ ಒಕ್ಕೂಟದ ಹಿತ ಕಾಪಾಡಲು ತಮಿಳುನಾಡಿಗೆ ನೀರು: ಬಸವರಾಜ ಬೊಮ್ಮಾಯಿ ಆರೋಪ

Published 17 ಆಗಸ್ಟ್ 2023, 23:30 IST
Last Updated 17 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಕಾಂಗ್ರೆಸ್‌ ಸರ್ಕಾರ ‘ಇಂಡಿಯಾ‘ ಒಕ್ಕೂಟದ ಅಂಗಪಕ್ಷವಾದ ತಮಿಳುನಾಡಿನ ಡಿಎಂಕೆ ಸರ್ಕಾರದ ಹಿತವನ್ನು ಕಾಪಾಡಲು ಕಾವೇರಿ ನೀರು ಬಿಡಲು ಮುಂದಾಗುವ ಮೂಲಕ ರಾಜ್ಯದ ರೈತರಿಗೆ ದ್ರೋಹ ಬಗೆಯುತ್ತಿದೆ’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರ ತಮಿಳುನಾಡಿಗೆ 10 ಟಿಎಂಸಿ ಅಡಿ ನೀರು ಬಿಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ಹೇಳಿದರು.

‘ಕಾವೇರಿ ನೀರು ಉಳಿಸಿಕೊಳ್ಳಲು ರೈತರು ಸುಪ್ರೀಂಕೋರ್ಟ್‌ಗೆ ಹೋಗಬೇಕು ಎನ್ನುವುದಾದರೆ ನೀವೇಕೆ ಅಧಿಕಾರದಲ್ಲಿರಬೇಕು’ ಎಂದೂ ಬೊಮ್ಮಾಯಿ ಪ್ರಶ್ನಿಸಿದರು.

‘ಅಣೆಕಟ್ಟಿನ ಬೀಗದ ಕೈ ನಮ್ಮ ಕಡೆ ಇಲ್ಲ’ ಎಂಬ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬೊಮ್ಮಾಯಿ, ‘ಅಣೆಕಟ್ಟು ನಮ್ಮ ರಾಜ್ಯದಲ್ಲಿದೆ. ಅದರ ಮೇಲೆ ನಮ್ಮ ಹಕ್ಕು ಇದೆ. ಆದರೆ, ಆ ಹಕ್ಕನ್ನು  ಬಿಟ್ಟುಕೊಡಲು ಇವರು ಹೊರಟಿದ್ದಾರೆ’ ಎಂದು ಟೀಕಿಸಿದರು.

‘ಈ ವಿಚಾರಗಳ ಬಗ್ಗೆ ಇವರಿಗೆ ಮಾಹಿತಿ ಇದೆಯೋ ಇಲ್ಲವೊ ಗೊತ್ತಿಲ್ಲ. ನಮ್ಮ ಹಕ್ಕನ್ನು ಅವರಿಗೆ ಬಿಟ್ಟುಕೊಟ್ಟು, ತಾವು ಮಾಡಿದ ತಪ್ಪಿಗೆ, ಸುಪ್ರೀಂಕೋರ್ಟ್‌ಗೆ ಹೋಗಿ ಎಂದು ರೈತರಿಗೆ ಹೇಳುತ್ತಿದ್ದಾರೆ. ರೈತರೇ ಸುಪ್ರೀಂಕೋರ್ಟ್‌ಗೆ ಹೋಗುವುದಾದರೆ ಜನ ನಿಮ್ಮನ್ನೇಕೆ ಆಯ್ಕೆ ಮಾಡಬೇಕಿತ್ತು? ರೈತರ ಹಿತ ರಕ್ಷಣೆ ಮಾಡಬೇಕೆಂದೇ ಜನ ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ನವರನ್ನೇ ಗೆಲ್ಲಿಸಿದ್ದಾರೆ. ರೈತರ ರಕ್ಷಣೆ ಮಾಡದಿದ್ದರೆ, ನೀವು ಅಧಿಕಾರದಲ್ಲಿ ಏಕೆ ಇರಬೇಕು’ ಎಂದು ಪ್ರಶ್ನಿಸಿದರು.

‘ನಾನು ವಿರೋಧ ಪಕ್ಷದ ಸದಸ್ಯನಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಕೆಲಸ ಮಾಡುತ್ತಿದ್ದೇನೆ. ರೈತರ ಹಿತಾಸಕ್ತಿಯನ್ನು ಕಾಪಾಡುವ ರಾಜಕಾರಣ ಮಾಡುತ್ತಿದ್ದೇನೆ. ಅವರು(ಕಾಂಗ್ರೆಸ್‌) ರೈತರ ರಕ್ಷಣೆ ಮಾಡದೇ ನಿಜವಾದ ರಾಜಕಾರಣ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT