ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರ ನಾಯಕರಿಗೆ ಬಿಜೆಪಿಯವರೆಷ್ಟು ಕಾಣಿಕೆ ನೀಡಿದ್ದರು: ಚಲುವರಾಯಸ್ವಾಮಿ ಪ್ರಶ್ನೆ

Published 26 ಜೂನ್ 2024, 11:14 IST
Last Updated 26 ಜೂನ್ 2024, 11:14 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ, ಬಿ.ಎಸ್‌.ಯಡಿಯೂರಪ್ಪ ಕೇಂದ್ರದ ನಾಯಕರಿಗೆ ಎಷ್ಟು ಕಪ್ಪಕಾಣಿಕೆ ಕೊಟ್ಟಿದ್ದಾರೆ. ನಾವು ಅವರಂತೆ ಮಾಡುವುದಿಲ್ಲ’ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ತಿರುಗೇಟು ನೀಡಿದರು.

‘ರಾಹುಲ ಗಾಂಧಿ ಅವರಿಗೆ ಕಪ್ಪಕಾಣಿಕೆ ನೀಡಲು ರಾಜ್ಯದಲ್ಲಿ ಕಾಂಗ್ರೆಸ್‌ನವರು ವಿವಿಧ ವಸ್ತುಗಳ ದರ ಏರಿಸಿದ್ದಾರೆ’ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಅರ್.ಅಶೋಕ ಆರೋಪಕ್ಕೆ, ಇಲ್ಲಿ ಬುಧವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.

‘ಅಭಿವೃದ್ಧಿ ಕೆಲಸಕ್ಕಾಗಿ ಸಹಜವಾಗಿ ದರ ಹೆಚ್ಚಿಸಲೇಬೇಕು. ಹಾಗಾಗಿ ಯಾವುದೇ ಸರ್ಕಾರಗಳು ಬೆಲೆ ಏರಿಸುತ್ತವೆ. ರೈತರಿಗೆ ನೀಡುವ ಸಬ್ಸಿಡಿ, ಅನುದಾನವೂ ಹೆಚ್ಚುತ್ತದೆ. ಸರ್ಕಾರ ಯಾವುದೇ ತೆರಿಗೆ ವಿಧಿಸದೆ, ಅಭಿವೃದ್ಧಿ ಕೆಲಸ ಕೈಗೊಳ್ಳಲಾಗದು. ಆದರೆ, ಅವೈಜ್ಞಾನಿಕವಾಗಿ ದರ ಹೆಚ್ಚಿಸಿದಾಗ ತಪ್ಪು ಎನ್ನಬಹುದು. ಪ್ರಶ್ನೆ ಕೂಡ ಮಾಡಬಹುದು’ ಎಂದರು.

‘ಈ ಹಿಂದೆ ಕೇಂದ್ರ ಸರ್ಕಾರವೂ ಪೆಟ್ರೋಲ್, ಡೀಸೆಲ್‌ ದರ ಮತ್ತು ಸೆಸ್ ಹೆಚ್ಚಿಸಿತ್ತು. ಕರ್ನಾಟಕಕ್ಕೆ ಬರಬೇಕಿದ್ದ ಅನುದಾನವನ್ನೂ ಕೊಟ್ಟಿಲ್ಲ. ಇನ್ನೂ ಮಹಾರಾಷ್ಟ್ರ, ತೆಲಂಗಾಣ ಮತ್ತಿತರ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ಪೆಟ್ರೋಲ್ ದರ ಕಮ್ಮಿಯೇ ಇದೆ’ ಎಂದು ಸಮರ್ಥಿಸಿಕೊಂಡರು.

‘ಮಳೆಗಾಲದಲ್ಲಿ ಹಾಲಿನ ಸಂಗ್ರಹ ಪ್ರಮಾಣ ಹೆಚ್ಚಲಿದೆ. ಹಾಗಾಗಿ ಅರ್ಧ ಲೀಟರ್‌ ಪ್ಯಾಕೆಟ್‌ನಲ್ಲಿ 50 ಮಿ.ಲೀ ಹೆಚ್ಚಿಸಿದ್ದೇವೆ. ₹2 ದರ ಮಾತ್ರವಲ್ಲ, ಹಾಲಿನ ಪ್ರಮಾಣವನ್ನೂ ಹೆಚ್ಚಿಸಿದ್ದೇವೆ. ಕೃಷಿಕರಿಗೆ ಪ್ರತಿ ಲೀಟರ್‌ ಹಾಲಿಗೆ ₹5 ಪ್ರೋತ್ಸಾಹಧನ ಕೊಡುತ್ತಿದ್ದೇವೆ. ಹಾಗಾಗಿ ಹೆಚ್ಚುವರಿ ಹಣ ನೀಡುವುದಿಲ್ಲ’ ಎಂದು ತಿಳಿಸಿದರು.

‘ಗ್ಯಾರಂಟಿ ಯೋಜನೆಗಳ ಜಾರಿಯಿಂದ ಸರ್ಕಾರದ ಖಜಾನೆ ಖಾಲಿಯಾಗಿದೆಯೇ’ ಎಂಬ ಪ್ರಶ್ನೆಗೆ, ‘ನಾವು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಆದರೆ, ಯಾವ ಅಭಿವೃದ್ಧಿ ಕೆಲಸ ಸ್ಥಗಿತಗೊಳಿಸಿಲ್ಲ. ಬಿಜೆಪಿಯವರು ಐದು ವರ್ಷ ವಿಫಲವಾಗಿದ್ದಕ್ಕೆ ಜನರು ನಮಗೆ ಅಧಿಕಾರ ಕೊಟ್ಟಿದ್ದಾರೆ’ ಎಂದರು.

‘ಕೇಂದ್ರದವರು ನಮಗೆ ಎನ್‌ಡಿಆರ್‌ಎಫ್ ಅನುದಾನ ನೀಡಲಿಲ್ಲ. ಹಾಗಾಗಿ ಸುಪ್ರೀಂ ಕೋರ್ಟ್‌ಗೆ ಹೋಗಿ ಅನುದಾನ ತಂದಿದ್ದೇವೆ. ವಿರೋಧ ಪಕ್ಷದವರಿಗೆ ಕೆಲಸ ಇಲ್ಲದ್ದರಿಂದ ಏನೇನೋ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ‘ನಾನು ಯಾರು ಪರ ಮತ್ತು ವಿರೋಧವೂ ಇಲ್ಲ. ಮೇಲಾಗಿ ಈಗ ಡಿಸಿಎಂ ಸ್ಥಾನ ಖಾಲಿ ಇಲ್ಲ. ನಮ್ಮದು ಜಾತ್ಯತೀತ ನಿಲುವು ಹೊಂದಿದ ಪಕ್ಷ. ವೈಯಕ್ತಿಕವಾಗಿ ಕೆಲವರು ಮಾತನಾಡಿದ್ದಾರೆ. ಆದರೆ, ಈ ವಿಚಾರದಲ್ಲಿ ಪಕ್ಷದ ವರಿಷ್ಠರೇ ತೀರ್ಮಾನ ಕೈಗೊಳ್ಳುತ್ತಾರೆ. ಈ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ’ ಎಂದರು.

ಚನ್ನಪಟ್ಟಣದಲ್ಲಿ ಡಿ.ಕೆ.ಶಿವಕುಮಾರ್ ವಾಸ್ತವ್ಯ ಹೂಡಿದ ಕುರಿತು ಪ್ರತಿಕ್ರಿಯಿಸಿದ ಅವರು, ‘ಡಿ.ಕೆ. ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರು. ಹಾಗಾಗಿ ಆ ಕ್ಷೇತ್ರದ ಬಗ್ಗೆ ಗಮನ ಹರಿಸಿದ್ದಾರೆ. ಚನ್ನಪಟ್ಟಣ ಕ್ಷೇತ್ರಕ್ಕೆ ಯಾವುದೇ ಕ್ಷಣದಲ್ಲಿ ಉಪಚುನಾವಣೆ ಘೋಷಣೆಯಾಗಬಹುದು. ಆ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಇನ್ನೂ ತೀರ್ಮಾನವಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಚರ್ಚಿಸುತ್ತಾರೆ’ ಎಂದು ಹೇಳಿದರು.

‘ಮಂಡ್ಯದಲ್ಲಿ ಸಚಿವರು, ಕಾಂಗ್ರೆಸ್‌ ನಾಯಕರು ನನ್ನನ್ನು ಸೋಲಿಸಲು ಯತ್ನಿಸಿದರು’ ಎಂಬ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ‘ವಿಧಾನಸಭೆ ಚುನಾವಣೆಯಲ್ಲಿ ಅವರೂ ನನ್ನನ್ನೂ ಸೋಲಿಸಲು ಪ್ರಯತ್ನಿಸಿದರು. ಆದರೆ, ಜನ ಗೆಲ್ಲಿಸಿದ್ದಾರೆ. ನಾವು ಕಾಂಗ್ರೆಸ್‌ ಅಭ್ಯರ್ಥಿ ಬಿಟ್ಟು, ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ಆಗುತ್ತಾ?’ ಎಂದು ಪ್ರಶ್ನಿಸಿದರು.

‘ಈಗ ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ನಮ್ಮ ತಂದೆ ಮಾಡಲಾಗದ ಕೆಲಸಗಳನ್ನೂ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ. ಅವರು ಕೆಲಸ ಮಾಡಿದರೆ ನಾನು ಹೆಚ್ಚು ಖುಷಿಪಡುತ್ತೇನೆ. ಅವರ ಬಗ್ಗೆ ಟೀಕೆ–ಟಿಪ್ಪಣಿ ಮಾಡುವುದಿಲ್ಲ’ ಎಂದು ಹೇಳಿದರು.

‘ಎಚ್‌.ಡಿ.ದೇವೇಗೌಡರ ಕುಟುಂಬದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವೈಯಕ್ತಿಕವಾಗಿ ಪ್ರತಿಕ್ರಿಯಿಸುವುದಿಲ್ಲ. ನ್ಯಾಯಾಲಯವೇ ಆ ಬಗ್ಗೆ ತೀರ್ಮಾನಿಸುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT