ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸೊನ್ನೆ ಅಂತ ಹೇಳುವವರು ನಮ್ಮ ಹಿಂದೇಕೆ ಬಿದ್ದಿದ್ದಾರೆ: ಖರ್ಗೆ

Published 20 ಫೆಬ್ರುವರಿ 2024, 12:57 IST
Last Updated 20 ಫೆಬ್ರುವರಿ 2024, 12:57 IST
ಅಕ್ಷರ ಗಾತ್ರ

ಬೀದರ್‌: ‘ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್‌ ಪಕ್ಷವನ್ನು ಸೊನ್ನೆ ಅಂತ ಹೇಳ್ತಾರೆ. ಆದರೆ, ಕಾಂಗ್ರೆಸ್‌ ಹಿಂದೆ ಏಕೆ ಬಿದ್ದಿದ್ದಾರೆ? ನಮ್ಮ ಬಳಿ ಏನಾದರೂ ಶಕ್ತಿ ಇರಬೇಕಲ್ಲವೇ? ಇಲ್ಲದಿದ್ದರೆ ನಮ್ಮ ಹಿಂದೆ ಏಕೆ ಬೀಳುತ್ತಿದ್ದರು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ಸಂವಿಧಾನದ ಕಲಂ 371(ಜೆ) ತಿದ್ದುಪಡಿಯ ದಶಮಾನೋತ್ಸವ ಹಾಗೂ ಖರ್ಗೆ ಅವರ ರಾಜಕೀಯ ಜೀವನ 52 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ಕಾಂಗ್ರೆಸ್‌ ಪಕ್ಷ ಹಾಗೂ ಇತರೆ 13 ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಉತ್ತಮ ಕೆಲಸ ಮಾಡಿದರೆ ಜನ ನಮ್ಮ ಹಿಂದೆ ಇದ್ದೇ ಇರುತ್ತಾರೆ. ಇ.ಡಿ, ಆದಾಯ ತೆರಿಗೆ ಇಲಾಖೆ, ಸಿಬಿಐ, ಚುನಾವಣಾ ಆಯೋಗ ಸೇರಿದಂತೆ ಸರ್ಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರ ನಡೆಸುತ್ತಿದ್ದಾರೆ. ಬಿಜೆಪಿ, ಆರ್‌ಎಸ್‌ಎಸ್‌ ಈ ದೇಶದಲ್ಲಿ ಮನುವಾದ ತರಲು ಪ್ರಯತ್ನಿಸುತ್ತಿದೆ. ಬಸವಣ್ಣ, ನಾರಾಯಣಗುರು ಅವರ ತತ್ವಗಳು ಅನುಷ್ಠಾನಕ್ಕೆ ಬರಬೇಕು. ಡಾ.ಬಿ.ಆರ್‌. ಅಂಬೇಡ್ಕರ್‌ ಕೊಟ್ಟಿರುವ ಸಂವಿಧಾನದ ಪ್ರಕಾರ ದೇಶ ನಡೆಯಬೇಕು. ಆದರೆ, ಬಿಜೆಪಿ, ಆರ್‌ಎಸ್ಎಸ್‌ನವರಿಗೆ ಅದು ಇಷ್ಟವಿಲ್ಲ ಎಂದು ಆರೋಪಿಸಿದರು.

ದಲಿತರು, ಹಿಂದುಳಿದವರು, ಶೋಷಿತರು ಉನ್ನತ ಸ್ಥಾನಕ್ಕೆ ಬರುತ್ತಿದ್ದಾರಲ್ಲ ಎಂಬ ಚಿಂತೆ ಬಿಜೆಪಿ, ಆರ್‌ಎಸ್‌ಎಸ್‌ನವರನ್ನು ಕಾಡುತ್ತಿದೆ. ಕಳ್ಳ ತನ್ನ ಮನೆಗೆ ಬಂದಾಗ ಹೆಂಡತಿಗೆ ಹೇಳಿ ಎಲ್ಲವನ್ನೂ ಬಸವಣ್ಣನವರು ಕೊಟ್ಟು ಕಳಿಸಿದ್ದರು. ಬೇರೆಯವರಿಗೆ ಒಳಿತು ಮಾಡಬೇಕೆಂದು ಹೇಳಿದ್ದರು. ಆದರೆ, ಇಲ್ಲಿ ಲೂಟಿಕೋರರು ಕುಳಿತಿದ್ದಾರೆ. ₹13 ಲಕ್ಷ ಕೋಟಿ ಹಣ ಶ್ರೀಮಂತರಿಗೆ ಬಿಜೆಪಿ ಸರ್ಕಾರ ಕೊಟ್ಟಿದೆ. ರೈತರ ಸಾಲ ಮನ್ನಾ ಮಾಡುತ್ತಿಲ್ಲ ಎಂದರು.

ಸುಳ್ಳು ಹೇಳಿ ಮೋದಿ ಅಧಿಕಾರಕ್ಕೆ ಬಂದಿದ್ದಾರೆ. ಪ್ರತಿಸಲ ಹೊಸ ಸುಳ್ಳು ಹೇಳುತ್ತಾರೆ. ಅವರೊಬ್ಬರೇ ದೇಶಭಕ್ತರು ಎಂಬಂತೆ ಬಿಂಬಿಸಿಕೊಳ್ಳುತ್ತಾರೆ. ಮೋದಿ ಜನರನ್ನು, ಧರ್ಮವನ್ನು ಒಡೆದು ಆಳುತ್ತಿದ್ದಾರೆ. ಈ ಸಲ ಅವರನ್ನು ಅಧಿಕಾರದಿಂದ ತೊಲಗಿಸಬೇಕಿದೆ. ಮುಂದಿನ ಪೀಳಿಗೆಯನ್ನು ನಾವು ಉಳಿಸಬೇಕಿದೆ ಎಂದು ಹೇಳಿದರು.

ದೇಶದಲ್ಲಿ ಸುಮಾರು 30 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡುತ್ತಿಲ್ಲ. ಒಂದು ವೇಳೆ ಅವುಗಳನ್ನು ಭರ್ತಿ ಮಾಡಿದರೆ ಶೇ 50ರಷ್ಟು ಹುದ್ದೆಗಳಲ್ಲಿ ದಲಿತರು, ಹಿಂದುಳಿದವರು ಸೇರಿಕೊಳ್ಳುತ್ತಾರೆ ಎಂಬ ದುರಾಲೋಚನೆ ಇದೆ ಎಂದು ಟೀಕಿಸಿದರು.

ನಾನು ಕೇಂದ್ರದಲ್ಲಿ ರೈಲ್ವೆ ಮಂತ್ರಿಯಿದ್ದಾಗ ಅನೇಕ ಕಡೆ ಹೊಸದಾಗಿ ರೈಲುಗಳನ್ನು ಬಿಟ್ಟಿದ್ದೆ. ಹೊಸ ಮಾರ್ಗಗಳ ಕೆಲಸ ಆರಂಭಿಸಿದ್ದೆ. ಆದರೆ, ಎಂದೂ ಪ್ರಚಾರ ತೆಗೆದುಕೊಂಡಿರಲಿಲ್ಲ. ಈಗ ಮೋದಿಯವರು ರೈಲು ನಿಲ್ದಾಣಕ್ಕೆ ಹೋಗಿ ರೈಲಿಗೆ ಹಸಿರು ನಿಶಾನೆ ತೋರುತ್ತಾರೆ. ನಾವು ಮಾಡಿದ ಕೆಲಸಕ್ಕೆ ಅವರು ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಯಾದಗಿರಿಗೆ ರೈಲು ಬೋಗಿ ತಯಾರಿಕೆ ಘಟಕ ಮಂಜೂರು ಮಾಡಿಸಿದ್ದೆ. ಅದನ್ನು ಮೋದಿಯವರು ನಿಲ್ಲಿಸಿದರು. ಅದು ಆಗಿದ್ದರೆ 20 ಸಾವಿರ ಯುವಕರಿಗೆ ನೌಕರಿ ಸಿಗುತ್ತಿತ್ತು. ಇಎಸ್‌ಐ ಆಸ್ಪತ್ರೆ ಮೇಲ್ದರ್ಜೆಗೇರಿಸುವುದನ್ನು ತಪ್ಪಿಸಿದರು. ನಾನು ಮಾಡಿದ ಕೆಲಸವನ್ನು ಅವರು ನಿಲ್ಲಿಸಿದರು ಎಂದು ಆರೋಪಿಸಿದರು.

2024ರ ಚುನಾವಣೆ ಬಹಳ ಮುಖ್ಯವಾಗಿದೆ. ನನಗೆ ಅಭಿನಂದನೆ ಸಲ್ಲಿಸುವುದಕ್ಕಿಂತ ಆ ಚುನಾವಣೆಯಲ್ಲಿ ಗೆದ್ದಾಗ ಹೆಚ್ಚು ಆನಂದವಾಗುತ್ತದೆ. ನಾವು ಕೆಲಸ ಮಾಡುತ್ತ ಹೋಗುವುದು, ನೀವು ಮರೆಯುವುದು. ನಿಮ್ಮಿಂದ ಏನಾದರೂ ಪ್ರೋತ್ಸಾಹ ಸಿಗಬೇಕಲ್ಲ. ಯಾವ ತತ್ವದಲ್ಲಿ ನಂಬಿಕೆ ಇದೆಯೋ ಅದಕ್ಕೆ ಬೆಂಬಲ ಕೊಡಬೇಕು ಎಂದರು.

ಮುಂಬರುವ ಚುನಾವಣೆಯಲ್ಲಿ ಜನ ಕಾಂಗ್ರೆಸ್‌ ಪಕ್ಷಕ್ಕೆ ಸಹಕಾರ ಕೊಡಬೇಕು. ಕೊಡದಿದ್ದರೆ ಪ್ರಜಾಪ್ರಭುತ್ವ, ಸಂವಿಧಾನ ಈ ದೇಶದಲ್ಲಿ ಉಳಿಯುವುದಿಲ್ಲ. ಸಂವಿಧಾನ, ಪ್ರಜಾಪ್ರಭುತ್ವ ನಾಶಪಡಿಸಲು ಮೋದಿ ಸರ್ಕಾರ ಒಂದೊಂದೆ ಹೆಜ್ಜೆ ಇಡುತ್ತಿದೆ. ಮಾಧ್ಯಮದವರು ಶ್ರೀಮಂತರ ಕೈಯಲ್ಲಿ ಇದ್ದಾರೆ. ಅವರು ಹೇಳಿದಂತೆ ಮಾಡುತ್ತಿದ್ದಾರೆ. ಆದರೆ, ಜನರ ಹಣ ಲೂಟಿ ಹೊಡೆಯುತ್ತಿರುವವನ್ನು ನಾವು ಬಿಡುವುದಿಲ್ಲ. ಜನರ ಹಿತಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ. ವೈಯಕ್ತಿಕವಾಗಿ ಮೋದಿ, ಅದಾನಿ ವಿರುದ್ಧ ನಾವಿಲ್ಲ ಎಂದರು.

ಇ.ಡಿ, ಐಟಿ, ಮೋದಿಗೆ ಹೆದರಿ ಬಿಜೆಪಿ ಸೇರ್ಪಡೆ: ಖರ್ಗೆ

‘ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ, ಮಂತ್ರಿ ಆದವರೆಲ್ಲ ಬಿಜೆಪಿಗೆ ಹೋಗುತ್ತಿದ್ದಾರೆ. ಅವರಿಗೆ ಇ.ಡಿ, ಐಟಿ, ಮೋದಿಯವರು ಹೆದರಿಸುತ್ತಿದ್ದಾರೆ. ಅನೇಕ ರಾಜ್ಯಗಳಲ್ಲಿ ಸರ್ಕಾರವನ್ನು ಕೆಡವಿದ್ದಾರೆ. ಒಂದು ಪಕ್ಷದಿಂದ ಆಯ್ಕೆಯಾದವರಿಗೆ ಒಂದು ತತ್ವದ ಮೇಲೆ ನಂಬಿಕೆ ಇಲ್ಲದ ಕಾರಣ ಹೀಗಾಗುತ್ತಿದೆ. 30–40 ವರ್ಷ ಕಾಂಗ್ರೆಸ್‌ನಲ್ಲಿದ್ದ ಕೆಲವರು ಅಧಿಕಾರದ ಆಸೆಗೆ, ಮತ್ತೆ ಕೆಲವರು ಹಣಕ್ಕಾಗಿ ಬಿಜೆಪಿಗೆ ಹೋಗುತ್ತಿದ್ದಾರೆ. ಯಾರಲ್ಲಿ ಧೈರ್ಯ ಇರುವುದಿಲ್ಲವೋ ಅವರು ಎಂದೂ ಉದ್ಧಾರ ಆಗುವುದಿಲ್ಲ. ಆ ಸಮಾಜವೂ ಉದ್ಧಾರ ಆಗುವುದಿಲ್ಲ’ ಎಂದು ಪಕ್ಷ ತೊರೆಯುತ್ತಿರುವ ಮುಖಂಡರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ

ಮಾಜಿಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಈಗ 91 ವರ್ಷ ವಯಸ್ಸು ಅವರಿಗೂ ಬಿಜೆಪಿಯವರು ಬಿಟ್ಟಿಲ್ಲ. ಅವರು ಸೆಕ್ಯುಲರ್‌ ಅಂತ ಹೇಳ್ತಿದ್ರು. ಅವರು ಸೇರಿದಂತೆ ಇತರೆ ಮುಖಂಡರಿಗೆ ಇಡಿ, ಸಿಬಿಐ, ಐಟಿ ಮೂಲಕ ಹಾಳು ಮಾಡುತ್ತಿದ್ದಾರೆ. ಒಂದು ಸಲ, ಎರಡು ಸಲ ಹೆದರಿಕೊಂಡು ಪಕ್ಷ ಬಿಟ್ಟು ಹೋಗಬಹುದು. ಮೂರನೇ ಸಲ ಹಾಗೆ ಮಾಡಲು ಆಗುವುದಿಲ್ಲ. ಎಲ್ಲದಕ್ಕೂ ಜನ ತೀರ್ಮಾನ ಮಾಡುತ್ತಾರೆ ಎಂದರು.

ಸಚಿವರಾದ ಈಶ್ವರ ಬಿ. ಖಂಡ್ರೆ, ರಹೀಂ ಖಾನ್‌, ಶಾಸಕ ಬಿ.ಆರ್‌. ಪಾಟೀಲ, ವಿಧಾನ ಪರಿಷತ್‌ ಸದಸ್ಯರಾದ ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ, ಅರವಿಂದಕುಮಾರ ಅರಳಿ, ಧರ್ಮಗುರುಗಳಾದ ಭಾಲ್ಕಿ ಗುರುಬಸವ ಪಟ್ಟದ್ದೇವರು, ಬೆಲ್ದಾಳ ಸಿದ್ದರಾಮ ಶರಣರು, ವರಜ್ಯೋತಿ ಭಂತೆ, ನೆಲ್ಸನ್‌ ಸುಮಿತ್ರ, ಜ್ಞಾನಿ ದರಬಾರ ಸಿಂಗ್‌, ಮೌನಿಸ್‌ ಕಿರ್ಮಾನಿ, ಮುಖಂಡರಾದ ರಾಜಶೇಖರ ಪಾಟೀಲ ಹುಮನಾಬಾದ್‌, ಮಾವಳ್ಳಿ ಶಂಕರ್‌, ಅಶೋಕ್‌ ಖೇಣಿ, ವಿಜಯ್‌ ಸಿಂಗ್‌, ನರಸಿಂಗರಾವ್‌ ಸೂರ್ಯವಂಶಿ, ಬಸವರಾಜ ಬುಳ್ಳಾ, ಸಾಗರ್‌ ಖಂಡ್ರೆ, ಬಸವರಾಜ ಜಾಬಶೆಟ್ಟಿ, ಅನಿಲ್‌ಕುಮಾರ್‌ ಬೇಲ್ದಾರ, ಅಮೃತರಾವ ಚಿಮಕೋಡೆ, ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಮರ್‌ಕುಮಾರ್‌ ಖಂಡ್ರೆ, ನಗರಸಭೆ ಅಧ್ಯಕ್ಷ ಮೊಹಮ್ಮದ್‌ ಗೌಸ್‌, ಮಾಲಾ ನಾರಾಯಣರಾವ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT