ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Rajya Sabha Election 2024: ರಾಜ್ಯದಿಂದ ಮಾಕನ್‌ ಸ್ಪರ್ಧೆ

ರಾಜ್ಯಸಭೆ: ನಾಸಿರ್ ಹುಸೇನ್‌, ಚಂದ್ರಶೇಖರ್‌ಗೆ ಮತ್ತೆ ‘ಅದೃಷ್ಟ’
Published 15 ಫೆಬ್ರುವರಿ 2024, 0:30 IST
Last Updated 15 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯಸಭಾ ಚುನಾವಣೆಗೆ ಕರ್ನಾಟಕದಿಂದ ಅಜಯ್‌ ಮಾಕನ್‌, ಸಯ್ಯದ್‌ ನಾಸಿರ್‌ ಹುಸೇನ್‌ ಹಾಗೂ ಜಿ.ಸಿ.ಚಂದ್ರಶೇಖರ್ ಅವರನ್ನು ಪಕ್ಷದ ಅಭ್ಯರ್ಥಿಗಳನ್ನಾಗಿ ಕಾಂಗ್ರೆಸ್‌ ಬುಧವಾರ ಆಯ್ಕೆ ಮಾಡಿದೆ. ಜೊತೆಗೆ, ರಾಜಸ್ಥಾನದಿಂದ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ಹಿಮಾಚಲ ಪ್ರದೇಶದಿಂದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಹಾಗೂ ಬಿಹಾರದಿಂದ ಅಖಿಲೇಶ್‌ ಪ್ರಸಾದ್‌ ಸಿಂಗ್‌ ಅವರನ್ನು ಕಣಕ್ಕೆ ಇಳಿಸಿದೆ. 

ನವದೆಹಲಿಯ ನಿವಾಸಿಯಾಗಿರುವ ಮಾಕನ್‌ ಅವರು ಕಾಂಗ್ರೆಸ್ ಪಕ್ಷದ ಖಜಾಂಚಿ. ಅವರು ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಆಪ್ತರು. ಕಳೆದ ಸಲ ಹರಿಯಾಣದಿಂದ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿ
ದ್ದರು. ಪಕ್ಷದ ಶಾಸಕರು ಅಡ್ಡ ಮತದಾನ ಮಾಡಿದ್ದರಿಂದ ಸೋತಿದ್ದರು. ಕಾಂಗ್ರೆಸ್‌, ಈ ಸಲ ಅವರನ್ನು ರಾಜ್ಯದಿಂದ ಕಣಕ್ಕೆ ಇಳಿಸಿದೆ. ಸೋನಿಯಾ ಗಾಂಧಿ, ಅಭಿಷೇಕ್‌ ಮನು ಸಿಂಘ್ವಿ ಅಥವಾ ರಘುರಾಮ್‌ ರಾಜನ್‌ ರಾಜ್ಯದಿಂದ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. 

ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ನಿರಂತರ ದ್ರೋಹ ಎಸಗಿದೆ ಹಾಗೂ ಉತ್ತರದ ರಾಜ್ಯಗಳಿಗೆ
ಹೆಚ್ಚಿನ ಅನುದಾನ ಹಂಚಿಕೆ ಮಾಡಿದೆ ಎಂದು ಆರೋಪಿಸಿ ರಾಜ್ಯದ ಕಾಂಗ್ರೆಸ್‌ ಸರ್ಕಾರವು ‘ನನ್ನ ತೆರಿಗೆ ನನ್ನ ಹಕ್ಕು’ ಹೆಸರಿನಲ್ಲಿ ಚಳವಳಿ ನಡೆಸುತ್ತಿದೆ. ಅದೇ ಹೊತ್ತಿನಲ್ಲಿ, ಉತ್ತರದ ಪ್ರಭಾವಿ ನಾಯಕರೊಬ್ಬರನ್ನು ರಾಜ್ಯದಲ್ಲಿ ಪಕ್ಷದ ಹುರಿಯಾಳುವನ್ನಾಗಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. 

ರಾಜ್ಯದಿಂದ ಆಯ್ಕೆಯಾಗಿದ್ದ ನಾಸಿರ್‌ ಹುಸೇನ್‌, ಜಿ.ಸಿ.ಚಂದ್ರಶೇಖರ್‌ ಹಾಗೂ ಎಲ್‌.ಹನುಮಂತಯ್ಯ ಏಪ್ರಿಲ್‌ನಲ್ಲಿ ನಿವೃತ್ತರಾಗುತ್ತಿದ್ದಾರೆ. ದಲಿತ (ಎಡಗೈ) ಸಮುದಾಯದ ಎಲ್‌.ಹನುಮಂತಯ್ಯ ಬದಲು ಮಾಕನ್ ಅವರಿಗೆ ಅವಕಾಶ ನೀಡಲಾಗಿದೆ. ಹನುಮಂತಯ್ಯ ಅವರು ಈ ಹಿಂದೆ ವಿಧಾನ ‍ಪರಿಷತ್‌ ಸದಸ್ಯ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 

ನಾಸಿರ್ ಅವರು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಪ್ತರು. ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಅವರು, ಖರ್ಗೆ ಅವರ ಕಚೇರಿಯ ಉಸ್ತುವಾರಿಯೂ ಆಗಿದ್ದಾರೆ. ಜತೆಗೆ, ರಾಜ್ಯಸಭೆಯಲ್ಲಿ ಪಕ್ಷದ ಸಚೇತಕರೂ ಹೌದು. ಮುಸ್ಲಿಂ ಸಮುದಾಯದ ಕೋಟಾದಲ್ಲಿ ಮನ್ಸೂರ್ ಅಲಿ ಖಾನ್ ಅವರು ಟಿಕೆಟ್‌ಗೆ ಪ್ರಯತ್ನ ನಡೆಸಿದ್ದರು. ಆದರೆ, ಲಾಬಿಯಲ್ಲಿ ನಾಸಿರ್‌ ‘ಕೈ’ ಮೇಲಾಗಿದೆ.  

ಜಿ.ಸಿ.ಚಂದ್ರಶೇಖರ್ ಅವರಿಗೆ ಟಿಕೆಟ್‌ ನೀಡುವ ಕುರಿತು ರಾಜ್ಯ ಘಟಕವು ಹೆಚ್ಚಿನ ಒಲವು ತೋರಿರಲಿಲ್ಲ. ಆದರೆ, ಅವರು ಹೈಕಮಾಂಡ್‌ ಮಟ್ಟದಲ್ಲಿ ಲಾಬಿ ನಡೆಸಿದ್ದರು. ಅವರಿಗೆ ಮತ್ತೆ ಅವಕಾಶ ಸಿಕ್ಕಿದೆ. ಚಂದ್ರಶೇಖರ್ ಬದಲು
ಬಿ.ಎಲ್‌.ಶಂಕರ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ರಾಜ್ಯದ ಕೆಲವು ಸಚಿವರು ಹೈಕಮಾಂಡ್‌ಗೆ ಒತ್ತಡ ಹೇರಿದ್ದರು. 

ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ಆಯ್ಕೆ ಬಯಸಿ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ 25 ವರ್ಷಗಳ ಅವರ ಚುನಾವಣಾ ರಾಜಕೀಯದ ಇನ್ನಿಂಗ್ಸ್‌ ಕೊನೆಗೊಂಡಿದೆ. ರಾಯ್‌ ಬರೇಲಿ ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಡಿವೆ. ಸೋನಿಯಾ ಪ್ರವೇಶದಿಂದ ರಾಜಸ್ಥಾನದಲ್ಲಿ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯರ ಸಂಖ್ಯೆ ಆರು ಆಗಲಿದೆ. ಈ ಪೈಕಿ, ಐವರು ಅನ್ಯ ರಾಜ್ಯದವರು. 

ಹಿರಿಯ ನಾಯಕಿ ರೇಣುಕಾ ಚೌಧರಿ ಅವರನ್ನು ಹುರಿಯಾಳುವನ್ನಾಗಿ ಪಕ್ಷ ಆಯ್ಕೆ ಮಾಡಿದೆ. ಅವರು ಆರು ವರ್ಷಗಳ ಬಳಿಕ ಮತ್ತೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗುವ ಹೊಸ್ತಿಲಲ್ಲಿದ್ದಾರೆ. ಯುವ ನಾಯಕ ಅನಿಲ್‌ ಯಾದವ್ ಅವರನ್ನು ತೆಲಂಗಾಣದಿಂದ, ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸದಸ್ಯ ಅಶೋಕ್‌ ಹಂಡೋರೆ ಅವರನ್ನು ಮಹಾರಾಷ್ಟ್ರದಿಂದ ಹಾಗೂ ಅಶೋಕ್ ಸಿಂಗ್‌ ಅವರನ್ನು ಮಧ್ಯಪ್ರದೇಶದಿಂದ ಪಕ್ಷ ಕಣಕ್ಕೆ ಇಳಿಸಿದೆ. 

ಫೆ.27ರಂದು ಚುನಾವಣೆ ನಡೆಯಲಿರುವ 56 ರಾಜ್ಯಸಭಾ ಸ್ಥಾನಗಳ ಪೈಕಿ 10ರಲ್ಲಿ ಕಾಂಗ್ರೆಸ್‌ ಗೆಲ್ಲಲು ಸಾಧ್ಯವಿದೆ. ಯಾವುದೇ ಅಚ್ಚರಿಗಳು ಘಟಿಸದಿದ್ದರೆ ಪಕ್ಷವು ತನ್ನ ಸದಸ್ಯರ ಸಂಖ್ಯೆಯನ್ನು ಒಂಬತ್ತರಿಂದ 10ಕ್ಕೆ ಸುಧಾರಿಸಿಕೊಳ್ಳುವ ನಿರೀಕ್ಷೆ ಇದೆ. ನಾಮಪತ್ರ ಸಲ್ಲಿಕೆಗೆ ಗುರುವಾರ ಕೊನೆಯ ದಿನ. 

ಮಧ್ಯಪ್ರದೇಶದಿಂದ ರಾಜ್ಯಸಭಾ ಟಿಕೆಟ್‌ಗೆ ಹಿರಿಯ ನಾಯಕ ಕಮಲನಾಥ್‌ ಲಾಬಿ ನಡೆಸುತ್ತಿದ್ದಾರೆ ಎಂಬ ಸುದ್ದಿಗಳು ಹರಡಿದ್ದವು. ಟಿಕೆಟ್‌ ಕೊಡದಿದ್ದರೆ ಅವರು ಪಕ್ಷ ತೊರೆಯಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಅಶೋಕ್‌ ಸಿಂಗ್‌ ಅವರನ್ನು ಪಕ್ಷ ಆಯ್ಕೆ ಮಾಡಿದೆ.

ಬಿಜೆಪಿ; ನಾಲ್ಕು ಸದಸ್ಯರಿಗಷ್ಟೇ ಮತ್ತೆ ಅವಕಾಶ  

ಬಿಜೆಪಿಯ 28 ಸದಸ್ಯರು ಏಪ್ರಿಲ್‌ನಲ್ಲಿ ನಿವೃತ್ತರಾಗುತ್ತಿದ್ದು, ಅವರಲ್ಲಿ ನಾಲ್ಕು ಮಂದಿಗಷ್ಟೇ ಟಿಕೆಟ್‌ ನೀಡಲಾಗಿದೆ. ಧರ್ಮೇಂದ್ರ ಪ್ರಧಾನ್‌, ಭೂಪೇಂದರ್‌ ಯಾದವ್‌ ಸೇರಿದಂತೆ ಏಳು ಕೇಂದ್ರ ಸಚಿವರ ಹೆಸರು ಸಹ ಪಟ್ಟಿಯಲ್ಲಿಲ್ಲ. ಅವರಲ್ಲಿ ಹೆಚ್ಚಿನವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಂಭವವಿದೆ. 

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹಿಮಾಚಲ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ವಿಧಾನಸಭೆಯ ಬಲಾಬಲದ ಆಧಾರದಲ್ಲಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ ಸಲ ಗೆಲ್ಲಲಿದ್ದಾರೆ. ಹೀಗಾಗಿ, ನಡ್ಡಾ ಅವರನ್ನು ಗುಜರಾತ್‌ನಿಂದ ಪಕ್ಷ ಕಣಕ್ಕೆ ಇಳಿಸಿದೆ. ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್‌ ಹಾಗೂ ಎಲ್‌.ಮುರುಗನ್‌ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ರಾಷ್ಟ್ರೀಯ ವಕ್ತಾರ ಸುಧಾಂಶು ದ್ವಿವೇದಿ ಅವರಿಗೆ ಪುನಃ ಅವಕಾಶ ಲಭಿಸಿದೆ. ಉಳಿದಂತೆ, ರಾಜಕೀಯ ವಲಯದಲ್ಲಿ ಪರಿಚಿತರಲ್ಲದ, ತಳಮಟ್ಟದ ನಾಯಕರನ್ನು ಗುರುತಿಸಿ ಅಭ್ಯರ್ಥಿಗಳನ್ನಾಗಿ ಮಾಡಿದೆ. ಮೂರನೇ ಅವಧಿಗೆ ಸದಸ್ಯರಾಗಲು ಸಜ್ಜಾಗಿರುವ ನಡ್ಡಾ ಹೊರತುಪಡಿಸಿ ಎರಡು ಅಥವಾ ಎರಡು ಬಾರಿಗಿಂತ ಹೆಚ್ಚು ಅವಧಿಗೆ ಸೇವೆ ಸಲ್ಲಿಸಿರುವ ಬಿಜೆಪಿಯ ಹಿರಿಯ ನಾಯಕರಿಗೆ ಈ ಸಲ ಅವಕಾಶ ನಿರಾಕರಿಸಲಾಗಿದೆ. 

ಪಕ್ಷದ ಮಹಿಳಾ ಮೋ‌ರ್ಚಾದ ಪದಾಧಿಕಾರಿಗಳಾಗಿರುವ ಧರ್ಮಶೀಲಾ ಗುಪ್ತಾ (ಬಿಹಾರ), ಮೇಧಾ ಕುಲಕರ್ಣಿ (ಮಹಾರಾಷ್ಟ್ರ) ಹಾಗೂ ಮಾಯಾ ನರೋಲಿಯಾ ಅವರನ್ನು ಹುರಿಯಾಳುಗಳನ್ನಾಗಿ ಮಾಡಲಾಗಿದೆ.  ‌

ಕೇಂದ್ರ ಸಚಿವರಾದ ರಾಜೀವ್‌ ಚಂದ್ರಶೇಖರ್‌, ಮನ್ಸುಖ್‌ ಮಾಂಡವಿಯಾ, ಪುರುಷೋತ್ತಮ ರೂಪಾಲ, ನಾರಾಯಣ ರಾಣೆ ಹಾಗೂ ವಿ.ಮುರಳೀಧರನ್‌, ಹಿರಿಯ ಮುಖಂಡರಾದ ಪ್ರಕಾಶ ಜಾವಡೇಕರ್‌, ಸುಶೀಲ್‌ ಕುಮಾರ್‌ ಮೋದಿ ಹಾಗೂ ಪಕ್ಷದ ಮಾಧ್ಯಮ ವಿಭಾಗದ ಮುಖ್ಯಸ್ಥ ಅನಿಲ್‌ ಬಲೂನಿ ಅವರಿಗೆ ಪಕ್ಷ ಟಿಕೆಟ್‌ ನೀಡಿಲ್ಲ. ಇವರಲ್ಲಿ ಬಹುತೇಕರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT