ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಎರಡನೇ ಪಟ್ಟಿ ಪ್ರಕಟ, ಇಲ್ಲಿದೆ ಸಂಪೂರ್ಣ ವಿವರ

Last Updated 6 ಏಪ್ರಿಲ್ 2023, 8:19 IST
ಅಕ್ಷರ ಗಾತ್ರ

ಬೆಂಗಳೂರು: ಮೇ 10ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೆ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್‌ ಇಂದು ಪ್ರಕಟಿಸಿದೆ.

ಚುನಾವಣಾ ನೀತಿಸಂಹಿತೆ ಘೋಷಣೆಗೆ ಮುನ್ನವೇ ‘ಕೈ’ ಪಡೆ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. ಮೇಲುಕೋಟೆ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸಲು ಪಕ್ಷ ನಿರ್ಧರಿಸಿದೆ.

ಕಳೆದ ಬಾರಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸ್ಪರ್ಧಿಸಿದ್ದ ಬಾದಾಮಿ ಕ್ಷೇತ್ರದಿಂದ ಭೀಮಸೇನ್‌ ಬಿ. ಚಿಮ್ಮನಕಟ್ಟಿಗೆ ಟಿಕೆಟ್‌ ನೀಡಲಾಗಿದೆ.

ಶಿಗ್ಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಲಿದ್ದಾರೆ ಎನ್ನಲಾದ ವಿನಯ್ ಕುಲಕರ್ಣಿ ಅವರಿಗೆ ಧಾರವಾಡದಿಂದ ಟಿಕೆಟ್‌ ನೀಡಲಾಗಿದೆ. ಇತ್ತ, ಕಡೂರು ಕ್ಷೇತ್ರದಲ್ಲಿ ವೈ.ಎಸ್‌.ವಿ ದತ್ತ ಬದಲಿಗೆ ಆನಂದ್‌ಗೆ ಟಿಕೆಟ್‌ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಜೆಡಿಎಸ್‌ ಬಿಟ್ಟು ಬಂದಿದ್ದ ಎಸ್‌.ಆರ್‌ ಶ್ರೀನಿವಾಸ್‌ ಅವರಿಗೆ ಗುಬ್ಬಿಯಲ್ಲಿ ಟಿಕೆಟ್‌ ಸಿಕ್ಕಿದೆ.

ಇತ್ತೀಚೆಗೆ ಬಿಜೆಪಿ ತೊರೆದಿದ್ದ ಕೂಡ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೆ ಮೊಳಕಾಲ್ಮುರಿಂದ ಟಿಕೆಟ್‌ ನೀಡಲಾಗಿದೆ. ಮತ್ತೊಂದೆಡೆ ಸ್ಯಾಂಡಲ್‌ವುಡ್ ಹಿರಿಯ ನಟ ದೊಡ್ಡಣ್ಣ ಅವರ ಅಳಿಯ ಕೆ.ಪಿ. ವಿರೇಂದ್ರಗೆ (ಪಪ್ಪಿ) ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ಘೋಷಿಸಲಾಗಿದೆ.

ಬೆಂಗಳೂರಿನ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಪದ್ಮನಾಭನಗರದಿಂದ ವಿ.ರಘುನಾಥ ನಾಯ್ಡುಗೆ ಟಿಕೆಟ್ ಘೋಷಿಸಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮೈಮುಲ್ ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದೇಗೌಡ (ಮಾವಿನಹಳ್ಳಿ ಸಿದ್ದೇಗೌಡ) ಅವರಿಗೆ ಮಣೆ ಹಾಕಲಾಗಿದ್ದು, ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ ವಿರುದ್ಧ ಸೆಣಸಾಟ ನಡೆಸಲಿದ್ದಾರೆ.

ಬಾಗಲಕೋಟೆ ಜಿಲ್ಕೆಯ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದೆ. ಬಾಗಲಕೋಟೆ ಕ್ಷೇತ್ರದಿಂದ ಎಚ್.ವೈ. ಮೇಟಿ, ಬಾದಾಮಿ ಕ್ಷೇತ್ರದಿಂದ ಭೀಮಸೇನ ಚಿಮ್ಮನಕಟ್ಟಿ, ಬೀಳಗಿ ಕ್ಷೇತ್ರದಿಂದ ಜೆ.ಟಿ. ಪಾಟೀಲ ಹಾಗೂ ಮುಧೋಳ ಕ್ಷೇತ್ರದಿಂದ ಅರ್. ಬಿ. ತಿಮ್ಮಾಪುರ ಅವರಿಗೆ ಟಿಕೆಟ್ ನೀಡಲಾಗಿದೆ.

ಗುರುಮಠಕಲ್ ಕ್ಷೇತ್ರಕ್ಕೆ ಬಾಬುರಾವ ಚಿಂಚನಸೂರ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಅವರು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದರು.

ಈಗಾಗಲೇ ಹುನಗುಂದ, ಜಮಖಂಡಿ ಕ್ಷೇತ್ರಗಳಿಗೆ ಘೋಷಣೆ ಮಾಡಲಾಗಿದೆ. ತೇರದಾಳ ಕ್ಷೇತ್ರಕ್ಕೆ ಉಮಾಶ್ರೀ ಸೇರಿದಂತೆ ಹಲವರು ಆಕಾಂಕ್ಷಿಗಳು ಇರುವುದರಿಂದ ಒಮ್ಮತ ಮೂಡದ್ದರಿಂದ ಘೋಷಣೆ ಮಾಡಿಲ್ಲ.

ಭಾರೀ ಕುತೂಹಲಕ್ಕೆ ಕಾರಣವಾಗಿರುವ ಕೋಲಾರ ಕ್ಷೇತ್ರಕ್ಕೆ ಮತ್ತು ಚನ್ನಪಟ್ಟಣದಲ್ಲಿ ಜೆಡಿಎಸ್‌ನ ಎಚ್‌.ಡಿ ಕುಮಾರಸ್ವಾಮಿ ವಿರುದ್ಧ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಈ ಪಟ್ಟಿಯಲ್ಲಿ ಉತ್ತರ ಸಿಕ್ಕಿಲ್ಲ.

ಶಿರಸಿ ಕ್ಷೇತ್ರಕ್ಕೆ ಭೀಮಣ್ಣ ನಾಯ್ಕ, ಯಲ್ಲಾಪುರ ಕ್ಷೇತ್ರಕ್ಕೆ ವಿ.ಎಸ್.ಪಾಟೀಲ್ ಅವರನ್ನು ಅಭ್ಯರ್ಥಿಯಾಗಿಸಲಾಗಿದೆ. ಪೈಪೋಟಿ ಹೆಚ್ಚಿರುವ ಕುಮಟಾ ಕ್ಷೇತ್ರಕ್ಕೆ ಟಿಕೆಟ್ ಅಂತಿಮಗೊಳಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT