ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮನ್ವಯ ಸಮಿತಿಯ ಮಹತ್ವದ ಸಭೆ ನಾಳೆ

Last Updated 30 ಜೂನ್ 2018, 15:38 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಐದು ವರ್ಷಗಳ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ (ಸಿಎಂಪಿ) ಅಂತಿಮಗೊಳಿಸಲು ಸಿದ್ದರಾಮಯ್ಯ ನೇತೃತ್ವದ ಸಮನ್ವಯ ಸಮಿತಿಯ ಮಹತ್ವದ ಸಭೆ ಭಾನುವಾರ (ಜುಲೈ 1) ನಡೆಯಲಿದೆ.

ಉಭಯ ಪಕ್ಷಗಳ ಸದಸ್ಯರಿರುವ ಸಂಸದ ಎಂ. ವೀರಪ್ಪ ಮೊಯಿಲಿ ನೇತೃತ್ವದ ಸಿಎಂಪಿ ಸಮಿತಿ, ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಕರಡು ಸಿದ್ಧಪಡಿಸಿ ಈಗಾಗಲೇ ಸಮನ್ವಯ ಸಮಿತಿಗೆ ನೀಡಿದೆ. ಸಾಲ ಮನ್ನಾ ಯೋಜನೆಯನ್ನು ಸಿಎಂಪಿಯಲ್ಲಿ ಸೇರಿಸಲು ಕಾಂಗ್ರೆಸ್‌ ಈಗಾಗಲೇ ಒಪ್ಪಿಗೆ ಸೂಚಿಸಿದೆ. ಆದರೆ, ಹಿರಿಯ ನಾಗರಿಕರಿಗೆ ನೀಡುವ ಪಿಂಚಣಿ ಮೊತ್ತ ಹೆಚ್ಚಿಸುವುದು ಮತ್ತು ಈ ಹಿಂದಿನ ಸರ್ಕಾರ ಘೋಷಿಸಿದ್ದ ಕೆಲವು ಯೋಜನೆಗಳಿಗೆ ಸಬ್ಸಿಡಿ ಕಡಿತಗೊಳಿಸುವ ವಿಷಯಗಳಲ್ಲಿ ಎರಡೂ ಪಕ್ಷಗಳ ಮಧ್ಯೆ ಇನ್ನೂ ಸಹಮತ ವ್ಯಕ್ತ ಆಗಿಲ್ಲ.

ಈ ಹಿಂದಿನ ಸರ್ಕಾರ ಆರಂಭಿಸಿದ ಎಲ್ಲ ಯೋಜನೆಗಳನ್ನು ಮುಂದುವರಿಸುವಂತೆ ಕಾಂಗ್ರೆಸ್‌ ಒತ್ತಡ ಹೇರುತ್ತಿದೆ. ಆದರೆ, ಸಾಲ ಮನ್ನಾ ಯೋಜನೆಗೆ ಸಂಪನ್ಮೂಲ ಕ್ರೋಡೀಕರಿಸುವ ಉದ್ದೇಶದಿಂದ ಕೆಲವು ಯೋಜನೆಗಳಿಗೆ ಮೀಸಲಿಟ್ಟ ಅನುದಾನ ಕಡಿಮೆ ಮಾಡಲು ಜೆಡಿಎಸ್‌ ಮುಂದಾಗಿದೆ. ಸಿಎಂಪಿ ಆಧರಿಸಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬಜೆಟ್‌ ಘೋಷಣೆಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಇದೇ 5ರಂದು ಬಜೆಟ್‌ ಮಂಡನೆ ಆಗಲಿದೆ.

ಅಧಿಕಾರಿಗಳ ವರ್ಗಾವಣೆ ವಿಚಾರ ಕೂಡಾ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. ಆಯಕಟ್ಟಿನ ಜಾಗಗಳಿಗೆ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಕುಮಾರಸ್ವಾಮಿ ಏಕಪಕ್ಷೀಯ ತೀರ್ಮಾನ ಕೈಗೊಳ್ಳುತ್ತಿದ್ದಾರೆ ಎಂದು ಅಸಮಾಧಾನಗೊಂಡಿದ್ದ ಸಿದ್ದರಾಮಯ್ಯ, ಸರ್ಕಾರದ ಭವಿಷ್ಯದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನಿಗಮ– ಮಂಡಳಿಗಳಿಗೆ ನೇಮಕ ವಿಷಯ ಕೂಡಾ ಸಭೆಯಲ್ಲಿ ಪ್ರಸ್ತಾವವಾಗುವ ಸಾಧ್ಯತೆ ಇದೆ. ತಮ್ಮ ಆಯ್ಕೆಯ ಜಿಲ್ಲೆಗಳ ಉಸ್ತುವಾರಿ ನೀಡುವಂತೆ ಕೆಲವು ಹಿರಿಯ ಸಚಿವರು ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಇನ್ನೂ ಕೆಲವರು ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರವಿರುವ ಜಿಲ್ಲೆಯ ಜವಾಬ್ದಾರಿ ನೀಡುವಂತೆ ಕೋರಿಕೆ ಸಲ್ಲಿಸಿದ್ದಾರೆ.

ವೇಣುಗೋಪಾಲ್‌– ಸಿದ್ದರಾಮಯ್ಯ ಚರ್ಚೆ: ಸಭೆಯಲ್ಲಿ ಭಾಗವಹಿಸಲು ಶನಿವಾರ ಸಂಜೆ ನಗರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ‘ಮೈತ್ರಿ ಸರ್ಕಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಸಹಜ. ಅವೆಲ್ಲವುಗಳನ್ನು ಸರಿ ಮಾಡಿಕೊಳ್ಳುತ್ತೇವೆ’ ಎಂದರು.

‘ಬಜೆಟ್ ಮಂಡನೆಗೆ ಸಿದ್ದರಾಮಯ್ಯ ವಿರೋಧ ಇದೆ ಎಂಬುದು ಮಾಧ್ಯಮಗಳ ಸೃಷ್ಟಿ ಅಷ್ಟೆ’ ಎಂದ ಅವರು, ಆದಷ್ಟು ಶೀಘ್ರ ಸಂಪುಟ ವಿಸ್ತರಣೆ ಆಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT