ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಚಿವ ಚಲುವರಾಯಸ್ವಾಮಿ ಮೇಲೆ ಲಂಚದ ಆರೋಪ: ತನಿಖೆಗೆ ಒತ್ತಾಯ

Published 7 ಆಗಸ್ಟ್ 2023, 10:03 IST
Last Updated 7 ಆಗಸ್ಟ್ 2023, 10:03 IST
ಅಕ್ಷರ ಗಾತ್ರ

ಮಂಡ್ಯ: ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಲಂಚದ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ಕೃಷಿ ಇಲಾಖೆಯ 7 ಮಂದಿ ಸಹಾಯಕ ನಿರ್ದೇಶಕರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಕ್ರಮ ವಹಿಸುವಂತೆ ರಾಜ್ಯಪಾಲರ ಅಧೀನ ಕಾರ್ಯದರ್ಶಿ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ಚಲುವರಾಯಸ್ವಾಮಿ ಅವರು ₹ 8– ₹10 ಲಕ್ಷದವರೆಗೆ ಲಂಚ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ಲಂಚಕ್ಕೆ ಕಡಿವಾಣ ಹಾಕದಿದ್ದರೆ ನಾವು ಹಾಗೂ ನಮ್ಮ ಕುಟುಂಬ ಸದಸ್ಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಪತ್ರದಲ್ಲಿ ದೂರುದ್ದಾರೆ. ಈ ಅರ್ಜಿಯನ್ನು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ವಹಿಸುವಂತೆ ಕೋರುತ್ತೇನೆ’ ಎಂದು ರಾಜ್ಯಪಾಲರ ಅಧೀನ ಕಾರ್ಯದರ್ಶಿ ಜಿ.ಪ್ರದೀಪ್‌ ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಓದಿ... ಈ 10 ಪ್ರಶ್ನೆಗಳಿಗೆ ಉತ್ತರಿಸಿ: ಪ್ರಧಾನಿ ಮೋದಿಗೆ ಕಾಂಗ್ರೆಸ್ ಸವಾಲು

ಈ ಕುರಿತು ಸೋಮವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ ‘ಕೆಲವರು ಹುಡುಕಿ ಹುಡುಕಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ, ಹಿಂದೆ ಬಸ್‌ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣದಲ್ಲೂ ಇದೇ ರೀತಿ ಕುತಂತ್ರ ಮಾಡಿದ್ದರು. ಇದೊಂದು ನಕಲಿ ಪತ್ರವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳೇ ಹೇಳಿದ್ದಾರೆ. ಆದರೂ ಪತ್ರದ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.

‘ಕೃಷಿ ಇಲಾಖೆ ಜಂಟಿ ನಿರ್ದೇಶಕ ಈಗಾಗಲೇ ಸಹಾಯಕ ನಿರ್ದೇಶಕರ ಜೊತೆ ಆನ್‌ಲೈನ್‌ ಸಭೆ ನಡೆಸಿದ್ದಾರೆ. ಯಾರೂ ಕೂಡ ಈ ರೀತಿ ಪತ್ರ ಬರೆದಿಲ್ಲ ಎಂದು ತಿಳಿಸಿರುವ ಮಾಹಿತಿ ಸಿಕ್ಕಿದೆ. ಪ್ರಾಥಮಿಕ ತನಿಖೆಯಿಂದ ಅದೊಂದು ನಕಲಿ ಪತ್ರ ಎಂದು ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೂ ಸೂಚಿಸಿದ್ದೇನೆ’ ಎಂದರು.

ಬಿಜೆಪಿ ಆರೋಪ: ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ‘ಸಿದ್ದರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಗರಿಷ್ಠ ಮಟ್ಟ ತಲುಪಿದೆ. ಹಣ ಕೊಟ್ಟವರಿಗೆ ಹುದ್ದೆಗಳನ್ನು ಹರಾಜು ಹರಾಜು ಹಾಕಲಾಗುತ್ತಿದೆ’ ಎಂದು ಆರೋಪಿಸಿದ್ಧಾರೆ.

ಓದಿ... ಭ್ರಷ್ಟಾಚಾರ ಆರೋಪ | ಸಿದ್ದರಾಮಯ್ಯನವರೇ, ಚೆಲುವರಾಯಸ್ವಾಮಿ ಏನು ಕ್ರಮ ಕೈಗೊಳ್ಳುವಿರಿ: ಬಿಜೆಪಿ ಪ್ರಶ್ನೆ

ಪತ್ರ ಬರೆದಿಲ್ಲ; ಜೆಡಿ ಸ್ಪಷ್ಟನೆ

ಸ್ಪಷ್ಟನೆ ನೀಡಿರುವ ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್‌.ಅಶೋಕ್‌ ‘ನಮ್ಮ ಇಲಾಖೆಯ ಸಹಾಯಕ ನಿರ್ದೇಶಕರು ಕೃಷಿ ಸಚಿವರ ವಿರುದ್ಧ ಪತ್ರ ಬರೆದಿಲ್ಲ, ನಮ್ಮ ಜಿಲ್ಲೆಯಿಂದ ಯಾವುದೇ ದೂರು ರಾಜ್ಯಪಾಲಕ ಕಚೇರಿಗೆ ಹೋಗಿಲ್ಲ’ ಎಂದು ತಿಳಿಸಿದರು.

‘ಎಲ್ಲಾ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದೇನೆ, ಕೃಷಿ ಸಚಿವರ ವಿರುದ್ಧ ಪತ್ರ ಬರೆದಿಲ್ಲ ಎಂದು ಎಲ್ಲರೂ ತಿಳಿಸಿದ್ಧಾರೆ. ಈ ಬಗ್ಗೆ ಸಚಿವರು ವಿವರಣೆ ಕೋರಿದ್ದರು. ನಮ್ಮ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದಿಲ್ಲ ಎಂದು ತಿಳಿಸಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT