ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಪ ನೋಂದಣಾಧಿಕಾರಿ ವರ್ಗಾವಣೆಗೆ ಕೌನ್ಸೆಲಿಂಗ್

Published 4 ಜುಲೈ 2024, 15:13 IST
Last Updated 4 ಜುಲೈ 2024, 15:13 IST
ಅಕ್ಷರ ಗಾತ್ರ

ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಉಪ ನೋಂದಣಾಧಿಕಾರಿ, ಹಿರಿಯ ನೋಂದಣಾಧಿಕಾರಿಗಳ ವರ್ಗಾವಣೆಯನ್ನು ಪಾರದರ್ಶಕವಾಗಿ ಮಾಡಲು ಪ್ರಸಕ್ತ ಸಾಲಿನಿಂದಲೇ ಕೌನ್ಸೆಲಿಂಗ್‌ ವ್ಯವಸ್ಥೆ ಜಾರಿಗೆ ತರಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಪ್ರಥಮ ದರ್ಜೆ ಸಹಾಯಕರ ವರ್ಗಾವಣೆಯೂ ಕೌನ್ಸೆಲಿಂಗ್‌ ಮೂಲಕ ನಡೆಯಲಿದ್ದು, ಅದು ಮುಂದಿನ ವರ್ಷದಿಂದ ಜಾರಿಯಾಗಲಿದೆ ಎಂದು ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಎಚ್‌.ಕೆ. ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಜ್ಯದಲ್ಲಿ ಒಟ್ಟು 257 ಉಪ ನೋಂದಣಾಧಿಕಾರಿ ಕಚೇರಿಗಳಿವೆ. ಅವುಗಳಲ್ಲಿ 51 ಕಚೇರಿಗಳು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿವೆ (ಬಿಎಂಆರ್‌ಡಿಎ ವ್ಯಾಪ್ತಿ). ಈ ಕಚೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉಪ ನೋಂದಣಾಧಿಕಾರಿಗಳು, ಹಿರಿಯ ಉಪ ನೋಂದಣಾಧಿಕಾರಿಗಳು, ಕೇಂದ್ರ ಕಚೇರಿ ಸಹಾಯಕರು ಮತ್ತು ಪ್ರಥಮ ದರ್ಜೆ ಸಹಾಯಕರನ್ನು ಕೌನ್ಸೆಲಿಂಗ್ ಮೂಲಕ ವರ್ಗಾಯಿಸಲಾಗುವುದು. ಬಹುತೇಕರು ಬಹಳ ವರ್ಷಗಳಿಂದ ಬೆಂಗಳೂರು ನಗರದಲ್ಲೇ ಇದ್ದಾರೆ ಎಂದರು.

ಕಳೆದ ಎಂಟು ವರ್ಷಗಳಲ್ಲಿ ಬೆಂಗಳೂರು ಸುತ್ತಮುತ್ತಲಿನ ಕಚೇರಿಗಳಲ್ಲಿ 5 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಉಪನೋಂದಣಾಧಿಕಾರಿಗಳು, ಹಿರಿಯ ಉಪನೋಂದಣಾಧಿಕಾರಿಗಳು, ಕೇಂದ್ರ ಕಚೇರಿ ಸಹಾಯಕರು ಮತ್ತು ಪ್ರಥಮ ದರ್ಜೆ ಸಹಾಯಕರುಗಳು, ಬಿಎಂಆರ್‌ಡಿಎ ವ್ಯಾಪ್ತಿಯ ಹೊರಗೆ 10 ನಗರಸಭೆಗಳ ವ್ಯಾಪ್ತಿಯ ತಾಲ್ಲೂಕುಗಳಲ್ಲಿ ಕಳೆದ 5 ವರ್ಷಗಳಲ್ಲಿ 4 ಅಥವಾ ಹೆಚ್ಚು ವರ್ಷ ಸೇವೆ ಸಲ್ಲಿಸಿರುವ ಈ ಎಲ್ಲ ಅಧಿಕಾರಿಗಳು ಹಾಗೂ 5 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿರುವ ಪ್ರಥಮ ದರ್ಜೆ ಸಹಾಯಕರನ್ನು ಕೌ‌ನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗುವುದು. ಬೆಂಗಳೂರು ನಗರ ಮತ್ತು ಸುತ್ತಮುತ್ತ ಹಲವು ವರ್ಷಗಳಿಂದ ಕೆಲಸ ಮಾಡಿದವರನ್ನು ‘ಬಿ’ ದರ್ಜೆಯ ನಗರಗಳಿಗೆ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದರು.

ಅಲ್ಲದೇ, ಜೂನ್‌ 25ರಂದು ಹೊರಡಿಸಿದ ವರ್ಗಾವಣೆ ಮಾರ್ಗಸೂಚಿ ಅನ್ವಯ ಶೇಕಡವಾರು ವರ್ಗಾವಣೆ ಮಿತಿಯನ್ನು ಮತ್ತು ಅಂತಿಮ ದಿನಾಂಕ ಸಡಿಲಗೊಳಿಸಿ ಆಗಸ್ಟ್‌ 10ರೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ ಎಂದು ಪಾಟೀಲ ವಿವರಿಸಿದರು.

ವರ್ಗಾವಣೆ ಸಂಬಂಧ ಈಗಿರುವ ವ್ಯವಸ್ಥೆಯ ಬಗ್ಗೆ ಸಾಕಷ್ಟು ದೂರುಗಳಿವೆ. ಆದ್ದರಿಂದ, ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ಮತ್ತು ಬೆಂಗಳೂರಿನಲ್ಲೇ ಬಹಳ ವರ್ಷಗಳಿಂದ ಬೇರು ಬಿಟ್ಟವರನ್ನು ಬದಲಿಸಲು ತೀರ್ಮಾನಿಸಲಾಗಿದೆ ಎಂದು ಪಾಟೀಲ ತಿಳಿಸಿದರು.

ಘಟನೋತ್ತರ ಅನುಮೋದನೆ: ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಗಳ ಬಗ್ಗೆ ಹೊಸದಾಗಿ ಮಾರ್ಗಸೂಚಿಗಳನ್ನು ಹೊರಡಿಸಿ, ಜೂನ್‌ 26ರಂದು ಆದೇಶ ಹೊರಡಿಸಿರುವ ಕ್ರಮಕ್ಕೆ ಸಚಿವ ಸಂಪುಟ ಸಭೆ ಘಟನೋತ್ತರ ಅನುಮೋದನೆ ನೀಡಿದೆ.

ಅರ್ಹತಾ ಸೇವಾವಧಿ 3 ವರ್ಷಕ್ಕೆ ಇಳಿಕೆ: ಅರಣ್ಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಸಹಾಯಕ  ಅರಣ್ಯ ಸಂರಕ್ಷಣಾಧಿಕಾರಿ ವೃಂದದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ ವೃಂದಕ್ಕೆ ಮುಂಬಡ್ತಿ ನೀಡಲು ನಿಗದಿಪಡಿಸಿರುವ ಅರ್ಹತಾ ಸೇವೆಯನ್ನು 5 ವರ್ಷಗಳಿಂದ 3 ವರ್ಷಗಳಿಗೆ ಇಳಿಸಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಕೂಡಾ ಸಭೆ ಒಪ್ಪಿಗೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT