ಬೆಂಗಳೂರು: ರಾಜ್ಯದಲ್ಲಿ ಮತ್ತೆ 9,725 ಮಂದಿ ಕೋವಿಡ್ ಪೀಡಿತರಾಗಿರುವುದು ಹಾಗೂ ಸೋಂಕಿತರಲ್ಲಿ 6,583 ಮಂದಿಗೆ ಕಾಯಿಲೆ ವಾಸಿಯಾಗಿರುವುದು ಬುಧವಾರ ದೃಢಪಟ್ಟಿದೆ.
ಕಳೆದ ಎರಡು ದಿನಗಳಿಂದ ಇಳಿಮುಖವಾಗಿದ್ದ ಪ್ರಕರಣಗಳ ಸಂಖ್ಯೆಪುನಃ 9 ಸಾವಿರದ ಗಡಿ ದಾಟಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 4.84 ಲಕ್ಷ ತಲುಪಿದೆ.ಈ ತಿಂಗಳು 16 ದಿನಗಳಲ್ಲಿ 1.42 ಲಕ್ಷ ಮಂದಿ ಸೋಂಕಿತರಾಗಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಸೋಂಕು ದೃಢ ಪ್ರಮಾಣ ಶೇ 12.16ಕ್ಕೆ ಏರಿಕೆಯಾಗಿದೆ.
ಒಂದೇ ದಿನ 70,981 ಮಂದಿಗೆಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, ಈವರೆಗೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡವರ ಸಂಖ್ಯೆ 40 ಲಕ್ಷದ ಗಡಿ (39.86 ಲಕ್ಷ) ಸಮೀಪಿಸಿದೆ.