ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಇಲಾಖೆ ಸಲಹೆ ಆಧರಿಸಿ ಶಾಲೆ ಆರಂಭ: ಸುರೇಶ್‌ ಕುಮಾರ್‌

Last Updated 25 ಜೂನ್ 2021, 19:21 IST
ಅಕ್ಷರ ಗಾತ್ರ

ಬೆಂಗಳೂರು: ಆರೋಗ್ಯ ಇಲಾಖೆಯ ಸಲಹೆಯನ್ನು ಆಧರಿಸಿಯೇ ಶಾಲೆಗಳಲ್ಲಿ ಭೌತಿಕ ತರಗತಿ ಆರಂಭಿಸುವ ಕುರಿತು ನಿರ್ಧಾರಕ್ಕೆ ಬರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದರು.

ಕೋವಿಡ್‌ ಸಂಕಷ್ಟದ ಅವಧಿಯಲ್ಲಿ ಶಾಲೆಗಳ ಆರಂಭ, ಕಲಿಕೆಯಲ್ಲಿ ನಿರಂತರತೆ ಕಾಯ್ದುಕೊಳ್ಳುವುದು ಮತ್ತು ಡಾ. ದೇವಿ ಪ್ರಸಾದ್‌ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ವರದಿ ಕುರಿತು ಶಿಕ್ಷಣ ತಜ್ಞರು ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ ಸ್ವಯಂಸೇವಾಸಂಸ್ಥೆಗಳ ಪ್ರತಿನಿಧಿಗಳ ಜತೆ ಶುಕ್ರವಾರ ಸಭೆ ನಡೆಸಿದ ಬಳಿಕ ಅವರು
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಶಾಲೆಗಳಿಂದ ಕೋವಿಡ್‌ ಹರಡಿದ ನಿದರ್ಶನಗಳು ಇಲ್ಲದಿರುವುದರಿಂದ ಆಯಾ ಪ್ರದೇಶದ ಕನಿಷ್ಠ ಕೋವಿಡ್‌ ದೃಢಪ್ರಮಾಣ ದರ ಆಧರಿಸಿ ಆದಷ್ಟು ಬೇಗ ತರಗತಿಗಳನ್ನು ಆರಂಭಿಸಬಹುದು ಎಂಬ ತಜ್ಞರ ಸಮಿತಿಯ ಶಿಫಾರಸಿನ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ. ಮಕ್ಕಳನ್ನು ದೀರ್ಘ ‌ಕಾಲ ಶಾಲೆಗಳಿಂದ ದೂರ ಇಡುವುದು ಒಳ್ಳೆಯದಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಯಾವುದಾದರೂ ರೂಪದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ನಿರಂತರ ಸಂಪರ್ಕ ಕಲ್ಪಿಸಬೇಕು ಎಂಬ ಸಲಹೆಗಳು ಬಂದಿವೆ ಎಂದರು.

ಲಾಕ್‌ಡೌನ್‌ ಸಡಿಲಿಕೆ ಮಾದರಿಯಲ್ಲೇ ವಿಕೇಂದ್ರೀಕೃತ ರೂಪದಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಬಹುದು ಎಂದು ಕೆಲವರು ಸಲಹೆ ನೀಡಿದ್ದಾರೆ. ಜಿಲ್ಲೆ, ತಾಲ್ಲೂಕು, ನಗರ, ಪಟ್ಟಣ, ಹೋಬಳಿ ಅಥವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಘಟಕವಾಗಿ ಪರಿಗಣಿಸಿ ನಿರ್ಧಾರಕ್ಕೆ ಬರಬೇಕೆಂಬ ಸಲಹೆಗಳೂ ವ್ಯಕ್ತವಾಗಿವೆ ಎಂದು ತಿಳಿಸಿದರು.

28ರಂದು ಚರ್ಚೆ: ಸುರಕ್ಷಿತವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಕುರಿತು ಇದೇ 28ರಂದು ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು, ಜಿಲ್ಲಾ ಪೊಲೀಸ್‌ ಅಧೀಕ್ಷಕರು, ಜಿಲ್ಲಾ ವೈದ್ಯಾಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಲಾಗುವುದು. ಭೌತಿಕ ತರಗತಿಗಳ ಆರಂಭದ ಬಗ್ಗೆಯೂ ಆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಸುರೇಶ್‌ ಕುಮಾರ್‌ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್‌, ಶಿಕ್ಷಣ ಫೌಂಡೇಷನ್‍ನ ಪ್ರಸನ್ನ ಒಡೆಯರ್, ಪ್ರಥಮ್ ಫೌಂಡೇಷನ್‍ನ ಶೇಷಾದ್ರಿ, ಅಜೀಂ ಪ್ರೇಮ್‍ಜೀ ಫೌಂಡೇಷನ್‍ನ ಋಷಿಕೇಶ್, ವರುಣಾ ನಲ್ಲೂರು, ಅಕ್ಷರ ಫೌಂಡೇಷನ್‍ನ ವೈಜಯಂತಿ, ಶಿಕ್ಷಾ ಲೋಕಂನ ಪ್ರಸನ್ನ ಕುಮಾರ್, ಪ್ರಾಂಶುಪಾಲರಾದ ವಿಜಯಕುಮಾರಿ ಸಭೆಯಲ್ಲಿದ್ದರು.

ಕಲಿಕಾ ನಿರಂತರತೆಗೆ ಕಾರ್ಯಪಡೆ

ಕೋವಿಡ್‌ ಸಂಕಷ್ಟದ ಅವಧಿಯಲ್ಲಿ ಮಕ್ಕಳ ಕಲಿಕೆಯಲ್ಲಿ ನಿರಂತರತೆ ಕಾಯ್ದುಕೊಳ್ಳುವುದು, ಕಲಿಕಾ ಸಾಮಗ್ರಿ ಮತ್ತು ಮೌಲ್ಯಮಾಪನ ಪ್ರಕ್ರಿಯೆ ಕುರಿತು ಸಲಹೆ ನೀಡುವುದಕ್ಕಾಗಿ ಸಮಾಜದ ವಿವಿಧ ಸ್ತರಗಳ ಪ್ರತಿನಿಧಿಗಳು ಹಾಗೂ ಶಿಕ್ಷಣ ತಜ್ಞರನ್ನು ಒಳಗೊಂಡ ಕಾರ್ಯಪಡೆ ರಚಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದರು.

ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲೂ ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಮೌಲ್ಯಾಂಕನ ಪ್ರಕ್ರಿಯೆ ನಡೆಸಲು ಯೋಚಿಸಲಾಗಿದೆ. ಮೌಲ್ಯಾಂಕನ ಪದ್ಧತಿ ಕುರಿತು ಕಾರ್ಯಪಡೆಯೇ ವರದಿ ನೀಡಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT