ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ಚೀನಾದಿಂದ ಬೆಳಗಾವಿಗೆ ಮರಳಿದ ವ್ಯಕ್ತಿ ತೋಟದ ಮನೆಗೆ

‘ಅಂತರ ಕಾಯ್ದುಕೊಂಡ’ ಸ್ಥಳೀಯರು
Last Updated 17 ಮಾರ್ಚ್ 2020, 9:21 IST
ಅಕ್ಷರ ಗಾತ್ರ

ಬೆಳಗಾವಿ: ಕೊರೊನಾ ವೈರಾಣು ಸೋಂಕು ಮೊದಲಿಗೆ ಕಾಣಿಸಿಕೊಂಡ ಚೀನಾದಿಂದ ವಾಪಸಾದ ವ್ಯಕ್ತಿಯೊಬ್ಬರನ್ನು ಪ್ರತ್ಯೇಕವಾಗಿ ತೋಟದ ಮನೆಯಲ್ಲಿ ಇರಿಸಲಾಗಿದೆ. 14 ದಿನಗಳ ಕಾಲ ಮನೆಯಿಂದ ಹೊರಗೆ ಬಾರದಂತೆ ಹಾಗೂ ಪ್ರತ್ಯೇಕವಾಗಿಯೇ ಇರುವಂತೆಯೂ (ಕ್ವಾರಂಟೈನ್) ಸೂಚಿಸಲಾಗಿದೆ.

ಚೀನಾದಲ್ಲಿ ಉದ್ಯೋಗಕ್ಕೆ ಹೋಗಿದ್ದ 32 ವರ್ಷದ ಅವರು ಮಾರ್ಚ್‌ 14ರಂದು ರಾಮದುರ್ಗ ತಾಲ್ಲೂಕಿನ ಕಟಕೋಳ ಗ್ರಾಮಕ್ಕೆ ಬಂದಿದ್ದರು. ವಿಷಯ ತಿಳಿದ ಸ್ಥಳೀಯರು ಅವರೊಂದಿಗೆ ‘ಅಂತರ’ ಕಾಯ್ದುಕೊಂಡಿದ್ದರು. ‘ಅವರಿಗೆ ಕೊರೊನಾ ವೈರಾಣು ಸೋಂಕು ಬಂದಿದ್ದರೆ ನಮ್ಮ ಗತಿ ಏನು’ ಎಂದು ಭಾವಿಸಿ ಭೀತಿಗೊಳಗಾಗಿದ್ದರು ಎನ್ನಲಾಗಿದೆ. ‘ನಾನು ಮುಂಬೈನಲ್ಲಿ ಆರೋಗ್ಯ ತಪಾಸಣೆ ಮಾಡಿಸಿದ್ದೇನೆ, ನೆಗೆಟಿವ್ ಬಂದಿದೆ’ ಎಂದು ತಿಳಿಸಿದರೂ ಜನರು ನಂಬುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೆ, ಕೆಲವರ ಒತ್ತಡದಿಂದಾಗಿ ಅವರು ಊರಿನಿಂದ ತೆರಳಿದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಮರುದಿನ ಸವದತ್ತಿ ತಾಲ್ಲೂಕಿನ ಮುನವಳ್ಳಿಗೆ ಅವರು ಬಂದಿದ್ದಾರೆ. ಚೀನಾದಿಂದ ಬಂದವರೆಂಬ ಕಾರಣಕ್ಕೆ, ಅಲ್ಲೂ ಜನರು ಅವರಿಂದ ‘ಅಂತರ’ ಕಾಯ್ದುಕೊಂಡಿದ್ದಾರೆ. ಸೋಂಕು ಹರಡುವ ಆತಂಕದಿಂದಾಗಿ, ಆರೋಗ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಆರೋಗ್ಯ ಇಲಾಖೆಯವರು, ಅವರನ್ನು ಸೋಮವಾರ 108 ಆಂಬ್ಯುಲೆನ್ಸ್‌ ಮೂಲಕ ಸವದತ್ತಿ ತಾಲ್ಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ತಾಲ್ಲೂಕು ಆರೋಗ್ಯಾಧಿಕಾರಿ ಸವದತ್ತಿ ತಹಶೀಲ್ದಾರ್‌ಗೆ ನೀಡಿರುವ ವರದಿಯ ಸಾರಾಂಶ ಇಂತಿದೆ.

‘ಮಾರ್ಚ್‌ 14ರಂದು ಕಟಕೋಳಕ್ಕೆ ಬಂದಿದ್ದ ಆ ವ್ಯಕ್ತಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಮನೆಗೆ ಹೋಗಿ ವಿಚಾರಿಸಿದ್ದಾರೆ. ಅವರು ಮುಂಬೈನಲ್ಲಿ ಆರೋಗ್ಯ ತಪಾಸಣೆ ಮಾಡಿದ್ದಾಗಿ ತಿಳಿಸಿದ್ದಾರೆ. 15ರಂದು ಮುನವಳ್ಳಿಗೆ ಬಂದಾಗಲೂ ಅಲ್ಲಿನ ಇಲಾಖೆ ಸಿಬ್ಬಂದಿ ಮನೆಗೆ ಭೇಟಿ ನೀಡಿ, ವಿಚಾರಣೆ ಮಾಡಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ಅವರನ್ನು ಮತ್ತೊಮ್ಮೆ ಸೋಮವಾರ ತಾಲ್ಲೂಕು ಆಸ್ಪತ್ರೆಗೆ ಕರೆತರಲಾಗಿತ್ತು. ಅವರೊಂದಿಗೆ ತಂದೆ ಹಾಗೂ ತಾಯಿ ಇಬ್ಬರನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಅವರಲ್ಲಿ ಕೊರೊನಾ ವೈರಾಣು ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ ಎಂದು ಅಲ್ಲಿನ ವೈದ್ಯಾಧಿಕಾರಿ ತಿಳಿಸಿದ್ದಾರೆ. ಅವರನ್ನು ಅವರ ತೋಟದ ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗಿದೆ’ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT