ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯ– ಆರೋಗ್ಯ ಸಿಬ್ಬಂದಿ ಕುಟುಂಬಗಳಿಗೆ ತಲುಪದ ವಿಮೆ!

ಕೋವಿಡ್‌ಗೆ ಬಲಿಯಾಗಿ ವರ್ಷ ಕಳೆದರೂ ವಿತರಣೆಯಾಗದ ಪರಿಹಾರ
Last Updated 18 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷ ಕೋವಿಡ್‌ ಮೊದಲನೇ ಅಲೆಯ ವೇಳೆ ಸೋಂಕಿಗೆ ಬಲಿಯಾದ ವೈದ್ಯರು, ಆಶಾ ಕಾರ್ಯಕರ್ತೆಯರು, ಮತ್ತಿತರ ಆರೋಗ್ಯ ಸಿಬ್ಬಂದಿಯ ಬಹುತೇಕ ಕುಟುಂಬಗಳಿಗೆ ಕೇಂದ್ರ ಸರ್ಕಾರ ಘೋಷಿಸಿದ್ದ ₹ 50 ಲಕ್ಷ ಮೊತ್ತದ ವಿಮೆ ಇನ್ನೂ ತಲುಪಿಲ್ಲ.

‘ಕೋವಿಡ್‌ ಮೊದಲನೇ ಅಲೆಯ ಸಮಯದಲ್ಲಿ 55 ವೈದ್ಯರು ಸೋಂಕಿನಿಂದ ಮೃತಪಟ್ಟಿದ್ದು, 10 ಮಂದಿಯ ಕುಟುಂಬಗಳಿಗೆ ಮಾತ್ರ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಪ್ಯಾಕೇಜ್‌ (ಪಿಎಂಕೆಜಿಪಿ) ಪರಿಹಾರ ತಲುಪಿದೆ. 11 ಮಂದಿ ಆಶಾ ಕಾರ್ಯಕರ್ತೆಯರು ಸೋಂಕಿಗೆ ಬಲಿಯಾಗಿದ್ದು, ಒಬ್ಬರ ಕುಟುಂಬಕ್ಕೆ ಮಾತ್ರ ವಿಮಾ ಪರಿಹಾರ ಸಂದಾಯವಾಗಿದೆ’ ಎಂದು ಭಾರತೀಯ ವೈದ್ಯರ ಸಂಘದ (ಐಎಂಎ) ರಾಜ್ಯ ಘಟಕ ತಿಳಿಸಿದೆ.

ಕೋವಿಡ್‌ನಿಂದ ಮೃತಪಟ್ಟ 55 ವೈದ್ಯರ ಪಟ್ಟಿಯನ್ನು ಹಂಚಿಕೊಂಡಿರುವ ಐಎಂಎ ಕರ್ನಾಟಕದ ಸದಸ್ಯರಾಗಿರುವ ಡಾ. ಶ್ರೀನಿವಾಸ್ ಎಸ್‌ ಅವರು ‘ಪ್ರಜಾವಾಣಿ’ ಜತೆ ಮಾತನಾಡಿ, ‘ಕ್ಲಿನಿಕ್‌ಗಳಲ್ಲಿ ರೋಗಿಗಳ ಆರೋಗ್ಯ ತಪಾಸಣೆ ಮಾಡಿ, ಚಿಕಿತ್ಸೆ ನೀಡಿದ ವೈದ್ಯರು ನಿಜವಾಗಿಯೂ ಕೋವಿಡ್‌ನ ಪರಿಣಾಮಗಳನ್ನು ಎದುರಿಸಿದವರು. ಆದರೆ, ಸೋಂಕಿಗೆ ಬಲಿಯಾದ ವೈದ್ಯರಲ್ಲಿ ಬೆರಳೆಣಿಕೆಯಷ್ಟು ವೈದ್ಯರ ಕುಟುಂಬಗಳಿಗೆ ಮಾತ್ರ ಪರಿಹಾರ ದೊರಕಿದೆ’ ಎಂದರು.

‘ಕೋವಿಡ್‌ನಿಂದ ಮೃತಪಟ್ಟ 11 ಆಶಾ ಕಾರ್ಯಕರ್ತೆಯರ ವಿವರಗಳನ್ನು ದಾಖಲೆಗಳೊಂದಿಗೆ ಸಲ್ಲಿಸಲಾಗಿತ್ತು. ಒಬ್ಬರ ಕುಟುಂಬಕ್ಕೆ ಮಾತ್ರ ಪರಿಹಾರ ನೀಡಲಾಗಿದೆ’ ಎಂದು ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ನಾಗಲಕ್ಷ್ಮಿ ಮಾಹಿತಿ ನೀಡಿದರು.

‘ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರಲ್ಲಿ ಸುಮಾರು 25 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಯಾದಗಿರಿಯ ಒಂದು ಕುಟುಂಬಕ್ಕೆ ಮಾತ್ರ ಪರಿಹಾರ ಸಂದಾಯವಾಗಿದೆ’ ಎಂದು ರಾಜ್ಯ ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ವಿಶ್ವಾರಾಧ್ಯ ಎಚ್‌ ಹೇಳಿದರು.

ಆರೋಗ್ಯ ಕಾರ್ಯಕರ್ತರ ವಿಮೆ ರದ್ದು‌

ನವದೆಹಲಿ:ಕೋವಿಡ್‌ ಬಾಧಿತರ ಆರೈಕೆಯ ಸಂದರ್ಭದಲ್ಲಿ ಮೃತಪಟ್ಟ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಪ್ರಕಟಿಸಲಾಗಿದ್ದ ₹50 ಲಕ್ಷದ ವಿಮಾ ಸೌಲಭ್ಯವನ್ನು ಕೇಂದ್ರ ಸರ್ಕಾರವು ಹಿಂದಕ್ಕೆ ಪಡೆದಿದೆ.

ಮಾರ್ಚ್‌ 24ರಂದೇ ಈ ಯೋಜನೆ ಕೊನೆಯಾಗಿದೆ. ಈ ದಿನಾಂಕಕ್ಕೆ ಮೊದಲೇ ಮೃತಪಟ್ಟ ಆರೋಗ್ಯ ಕಾರ್ಯಕರ್ತರ ಕುಟುಂಬಗಳು ಈ ಸೌಲಭ್ಯ ಪಡೆಯುವ ಪ್ರಕ್ರಿಯೆ ಪೂರ್ಣಗೊಳಿಸಲು ಒಂದು ತಿಂಗಳು ಅವಕಾಶ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಅವರು ರಾಜ್ಯಗಳಿಗೆ ಪತ್ರ ಬರೆದು ತಿಳಿಸಿದ್ದಾರೆ.

ದೇಶದಲ್ಲಿ ಲಾಕ್‌ಡೌನ್‌ ಹೇರಿದ ಕೆಲವೇ ದಿನಗಳಲ್ಲಿ ಅಂದರೆ, 2020ರ ಮಾರ್ಚ್‌ 30ರಂದು ಈ ಯೋಜನೆ ಘೋಷಣೆಯಾಗಿತ್ತು. ಈವರೆಗೆ 287 ಕುಟುಂಬಗಳಿಗೆ ವಿಮಾ ಹಣ ಸಂದಾಯವಾಗಿದೆ ಅಥವಾ ಅನುಮೋದನೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT