ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೌರ, ಬಟ್ಟೆಯಿಂದೀಗ ಹೊಟ್ಟೆ ತುಂಬುತ್ತಿಲ್ಲ; ಸಂಕಷ್ಟದಲ್ಲಿ ಸವಿತಾ, ಮಡಿವಾಳ ಸಮಾಜ

ಬದುಕು ಬೀದಿಗೆ ತಂದ ಕೋವಿಡ್‌
Last Updated 22 ಸೆಪ್ಟೆಂಬರ್ 2021, 23:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಅಂದು ದುಡಿದು ಅಂದೇ ಊಟ ಮಾಡಬೇಕು’ ಎನ್ನುವ ಆರ್ಥಿಕ ಸ್ಥಿತಿಯಲ್ಲಿರುವ ನಮ್ಮಂತಹವರಿಗೆ ತಿಂಗಳುಗಟ್ಟಲೇ ಲಾಕ್‌ಡೌನ್‌ ಮಾಡಿದ್ದರಿಂದ ಹೊಟ್ಟೆಗೆ ಹಿಟ್ಟಿಲ್ಲದಂತಾಗಿತ್ತು. ಸಾಲ–ಸೋಲ ಮಾಡಿ ಲಾಕ್‌ಡೌನ್‌ ಸಮಯದಲ್ಲಿ ಜೀವನ ನಡೆಸಿದ್ದಾಯಿತು. ಈಗಲೂ ಬಟ್ಟೆ ಒಗೆಯುವುದಕ್ಕೆ, ಇಸ್ತ್ರಿ ಮಾಡುವುದಕ್ಕೆ ಮೊದಲಿನಷ್ಟು ಬಟ್ಟೆಗಳು ಬರುತ್ತಿಲ್ಲ. ಕ್ಷೌರಕ್ಕೆ ಬರಲು ಸಾಕಷ್ಟು ಜನರು ಹಿಂದೇಟು ಹಾಕುತ್ತಾರೆ. ಊಟಕ್ಕೆ ವ್ಯವಸ್ಥೆಯಾದರೆ ಸಾಕು ಎನ್ನುವಂತಾಗಿದೆ’

ಹೀಗೆಂದು ಒಂದೇ ಉಸಿರಿನಲ್ಲಿ ಕೋವಿಡ್‌ನಿಂದಾಗಿರುವ ಸಂಕಷ್ಟಗಳ ಸರಮಾಲೆಯನ್ನು ಬಿಚ್ಚಿಡುತ್ತಾರೆ ಸವಿತಾ ಹಾಗೂ ಮಡಿವಾಳ ಸಮುದಾಯ ದುಡಿಮೆಗಾರರು.

‘ಊರಿಗೆ ಹೋಗೋಣ ಎಂದರೆ ಭೂಮಿ ಇಲ್ಲ. ಅಪ್ಪನ ಕಾಲದ ಗುಡಿಸಲು ಯಾವಾಗಲೋ ಬಿದ್ದು ಹೋಗಿದೆ. ಇಲ್ಲಿ ಮನೆ, ಅಂಗಡಿಯ ಬಾಡಿಗೆ ಕಟ್ಟಡಬೇಕು. ಜತೆಗೆ ಕುಟುಂಬದ ಜವಾಬ್ದಾರಿ. ಕೋವಿಡ್‌ ಭಯದಿಂದ ಸಾಕಷ್ಟು ಜನರು ತಿಂಗಳಿಗೆ ಮಾಡಿಸುತ್ತಿದ್ದ ಕ್ಷೌರವನ್ನು ಎರಡು ತಿಂಗಳಿಗೆ ಮಾಡಿಸುತ್ತಿದ್ದಾರೆ. ಶೇವಿಂಗ್‌ ಅನ್ನು ಮನೆಯಲ್ಲಿಯೇ ಮಾಡಿಕೊಳ್ಳಲಾರಂಭಿಸಿದ್ದಾರೆ. ಎಷ್ಟೋ ಮನೆಗಳಲ್ಲಿ ಮಕ್ಕಳ ಕ್ಷೌರವನ್ನು ಕುಟುಂಬದ ಹಿರಿಯರೇ ಮಾಡುತ್ತಿದ್ದಾರೆ. ಇಲ್ಲಿರಲಾಗದ, ಊರಿಗೆ ಮರಳಲಾರದ ಅತಂತ್ರ ಸ್ಥಿತಿಯಲ್ಲಿದ್ದೇವೆ’ ಎನ್ನುತ್ತಾರೆ ಧಾರವಾಡ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಗೋಪಾಲ ವಲ್ಲೆಪಲ್ಲೆ.

‘ಲಾಕ್‌ಡೌನ್‌ ಸಮಯದಲ್ಲಿ ಬಟ್ಟೆ ಒಗೆಯುವುದು, ಇಸ್ತ್ರಿ ಮಾಡುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಕೋವಿಡ್‌ನಿಂದ ಮನೆಯೊಳಕ್ಕೆ ಸೇರಿಸಿಕೊಳ್ಳಲು ಹಿಂದೇಟು ಹಾಕಿ ತಾವೇ ಬಟ್ಟೆ ತೊಳೆದುಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಧಾರವಾಡ ಜಿಲ್ಲಾ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜ ಬೆಳಗಲಿ.

ದರ ಬದಲಾವಣೆ ಇಲ್ಲ: ಎರಡು ವರ್ಷಗಳಿಂದ ಬಹುತೇಕ ಅಂಗಡಿಗಳಲ್ಲಿ ಕ್ಷೌರ, ಬಟ್ಟೆ ಒಗೆಯುವುದು, ಇಸ್ತ್ರಿ ಮಾಡುವ ದರದಲ್ಲಿ ಬದಲಾವಣೆ ಮಾಡಿಲ್ಲ. ಗ್ರಾಹಕರು ಬಂದರೆ ಸಾಕು ಎನ್ನುವಂತಹ ಸ್ಥಿತಿ ಇರುವುದರಿಂದ ಬೆಲೆ ಏರಿಸಲು ಹೋಗಿಲ್ಲ. ‘ನಾವು ಬೆಲೆ ಏರಿಸಿಲ್ಲ. ಆದರೆ, ಜೀವನಕ್ಕೆ ಬೇಕಾದ ಉಳಿದ ಎಲ್ಲ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಆದಾಯ ಕಡಿಮೆಯಾಗಿ, ಖರ್ಚು ಹೆಚ್ಚಿರುವುದರಿಂದ ಸಾಲದ ಸುಳಿಗೆ ಸಿಲುಕುತ್ತಿದ್ದೇವೆ’ ಎನ್ನುತ್ತಾರೆ ಕ್ಷೌರಿಕ ವೃತ್ತಿ ಮಾಡುತ್ತಿರುವ ಲಕ್ಷ್ಮಣ.

ಷರತ್ತುಗಳು ಅಡ್ಡಿ: ಬಿಪಿಎಲ್‌ ಪಡಿತರ ಚೀಟಿ ಹೊಂದಿರಬೇಕು. ಆಧಾರ್ ಸಂಖ್ಯೆ ಲಿಂಕ್‌ ಹೊಂದಿರುವ ಬ್ಯಾಂಕ್‌ ಖಾತೆ ಹೊಂದಿರುವುದು ಕಡ್ಡಾಯ. ಜನ್ಮ ದಿನ ದಾಖಲೆ ನೀಡಬೇಕು ಎನ್ನುವುದು ಸೇರಿ ಹಲವು ದಾಖಲೆಗಳನ್ನು ಕೇಳಲಾಗಿದೆ. ಬಿಪಿಎಲ್‌ ಪಡಿತರ ಚೀಟಿ ಹಾಗೂ ಆಧಾರ್‌ ಸಂಖ್ಯೆ ಹೊಂದಿಲ್ಲದವರು ಬಹಳಷ್ಟು ಜನರಿದ್ದಾರೆ. ಆಧಾರ್‌ ಸಂಖ್ಯೆಯಲ್ಲಿ ಮೊಬೈಲ್‌ ಸಂಖ್ಯೆ ಅಪ್‌ಡೇಟ್‌ ಮಾಡದಿರುವವರು, ಹೆಸರು ತಪ್ಪಾಗಿರುವವರೂ ಇದ್ದಾರೆ. ಅರ್ಜಿಯನ್ನು ಸೇವಾ ಸಿಂಧೂ ಪೋರ್ಟಲ್‌ನಲ್ಲಿ ಸಲ್ಲಿಸಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಅನಕ್ಷರಸ್ಥರಿರುವುದರಿಂದ ಅರ್ಜಿ ಸಲ್ಲಿಸಲು ಆಗುತ್ತಿಲ್ಲ ಎನ್ನುವುದು ಮುಖಂಡರ ದೂರು.

ಕುಟುಂಬಕ್ಕೆ ಒಬ್ಬರಿಗೆ ಎನ್ನುವುದು ಅಡ್ಡಿ: ಕೂಡು ಕುಟುಂಬವಾಗಿದ್ದರೂ, ಹಲವಾರು ಮಂದಿ ಬೇರೆ, ಬೇರೆ ಅಂಗಡಿಗಳಲ್ಲಿ, ಒಂದೇ ಅಂಗಡಿಯಲ್ಲಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಒಬ್ಬರಿಗೆ ಪರಿಹಾರ ನೀಡುತ್ತಿರುವುದರಿಂದ ವೃತ್ತಿಯಲ್ಲಿದ್ದರೂ ಇನ್ನೊಬ್ಬರಿಗೆ ಸಿಗುತ್ತಿಲ್ಲ.

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಕಟ್ಟಡ ಕಾರ್ಮಿಕರಿಗೆ ಪಿಂಚಣಿ, ದುರ್ಬಲತೆ ಪಿಂಚಣಿ, ವಸತಿ ಯೋಜನೆಗೆ ಆರ್ಥಿಕ ನೆರವು, ಹೆರಿಗೆ ಭತ್ಯೆ, ಅವರ ಮಕ್ಕಳಿಗೆ ಶಿಷ್ಯ ವೇತನ, ಅಡುಗೆ ಅನಿಲ ಸಂಪರ್ಕ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಬೇರೆ ಕಾರ್ಮಿಕರಿಗೆ ಈ ಸೌಲಭ್ಯಗಳಿಲ್ಲ. ಎಲ್ಲ ಕಾರ್ಮಿಕರಿಗೂ ಇಂತಹ ಸೌಲಭ್ಯ ದೊರೆಯಬೇಕು ಎನ್ನುವುದು ಅವರ ಆಗ್ರಹ.

ನಿಗಮಕ್ಕಿಲ್ಲ ಅಧ್ಯಕ್ಷ
ಹುಬ್ಬಳ್ಳಿ:
ಮಡಿವಾಳ ಮಾಚಿದೇವರ ಅಭಿವೃದ್ಧಿ ನಿಗಮ ರಚಿಸಲಾಗಿದೆ. ಆದರೆ, ಅದಕ್ಕೆ ಅಧ್ಯಕ್ಷರನ್ನು ನೇಮಿಸಿಲ್ಲ ಎಂದು ದೂರುತ್ತಾರೆ ಕರ್ನಾಟಕ ರಾಜ್ಯ ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಆರ್. ಪ್ರಕಾಶ್.

ಎನ್‌. ಶಂಕರಪ್ಪ ಅವರನ್ನು ನೇಮಕ ಮಾಡಲಾಗಿತ್ತು. ಅವರು ಬೇಡ ಎಂದ ಮೇಲೆ ಯಾರನ್ನೂ ನೇಮಿಸಿಲ್ಲ. ₹5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎನ್ನುತ್ತಾರೆ. ಆದರೆ, ಅದರಿಂದ ಸಮುದಾಯದ ಯಾರಿಗೂ ಪ್ರಯೋಜನವಾಗಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT