ಬೆಂಗಳೂರು: ರೋಗಿಗಳು ಸರದಿಯಲ್ಲಿ ನಿಂತು ಕಾಯುವುದನ್ನು ತಪ್ಪಿಸಲು ಇಲ್ಲಿನ ಸರ್.ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆಯು ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಪರಿಚಯಿಸಿದೆ.
ಈ ವ್ಯವಸ್ಥೆಯನ್ನು ಪ್ರಾರಂಭಿಸಿದ ದೇಶದ ಎರಡನೇ ಆಸ್ಪತ್ರೆ ಎಂಬ ಹಿರಿಮೆಗೂ ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆ ಭಾಜನವಾಗಿದೆ. ನವದೆಹಲಿಯಲ್ಲಿ ಕೇಂದ್ರ ಸರ್ಕಾರ ನಡೆಸುತ್ತಿರುವ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ.
ಆರೋಗ್ಯ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಪ್ರಾಯೋಗಿಕವಾಗಿ ಕಳೆದ ತಿಂಗಳು ಈ ವ್ಯವಸ್ಥೆಯನ್ನು ಪರಿಚಯಿಸಿದ್ದು,ಹೊರರೋಗಿ ವಿಭಾಗದಲ್ಲಿ (ಒಪಿಡಿ) ದಟ್ಟಣೆ ನಿಯಂತ್ರಿಸಲು ಸಹಕಾರಿಯಾಗಿದೆ. ಸ್ಮಾರ್ಟ್‌ಫೋನ್ ನೆರವಿನಿಂದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಲ್ಲಿ ವೈಯಕ್ತಿಕ ವಿವರವನ್ನು ನಮೂದಿಸುವ ಅವಕಾಶಗಳು ತೆರೆದುಕೊಳ್ಳಲಿವೆ. ಇಲ್ಲಿ ಮಾಹಿತಿ ಭರ್ತಿ ಮಾಡಿದ ಬಳಿಕ ಟೋಕನ್ ನಂಬರ್ ಸೃಷ್ಟಿಯಾಗಲಿದೆ. ಇದನ್ನು ಆಸ್ಪತ್ರೆಯ ಒಪಿಡಿ ವಿಭಾಗದ ಸಿಬ್ಬಂದಿಗೆ ತೋರಿಸಿ, ಟೋಕನ್ ಪಡೆದುಕೊಳ್ಳಬಹುದಾಗಿದೆ. ಸರದಿಯಲ್ಲಿ ರೋಗಿಗಳು ಅಥವಾ ಅವರ ಕಡೆಯವರು ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸುವುದು ಈ ವ್ಯವಸ್ಥೆಯ ಮುಖ್ಯ ಉದ್ದೇಶ.
ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್ (ಎಬಿಎಚ್‌ಎ) ಅಡಿಯಲ್ಲಿ ಕ್ಯೂಆರ್ ಕೋಡ್ ಆಧಾರಿತ ನೋಂದಣಿಯನ್ನು ಸಕ್ರಿಯಗೊಳಿಸಲಾಗಿದೆ. ಇಲ್ಲಿ ಸ್ಕ್ಯಾನ್ ಮಾಡಿಕೊಂಡಲ್ಲಿ ಆಯುಷ್ಮಾನ್ ಭಾರತ, ಕೋವಿನ್ ಸೇರಿ ವಿವಿಧ ಆ್ಯಪ್‌ಗಳೂ ಕಾಣಿಸಿಕೊಳ್ಳಲಿದ್ದು, ಅಗತ್ಯ ಮಾಹಿತಿ ನಮೂದಿಸಿ, ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಬಹುದು. ಡಿಜಿಟಲ್ ಮಾದರಿಯಲ್ಲಿ ಹಣ ಪಾವತಿಯ ಅವಕಾಶವೂ ಇರಲಿದೆ.
ಎಬಿಎಚ್‌ಎ ಸಂಖ್ಯೆ: ರೋಗಿಯು ಈಗಾಗಲೇ ಆಯುಷ್ಮಾನ್ ಕಾರ್ಡ್ ಹೊಂದಿದ್ದಲ್ಲಿ ಸ್ಕ್ಯಾನ್ ಮಾಡಿದ ಬಳಿಕ ಎಬಿಎಚ್‌ಎ ಸಂಖ್ಯೆಯನ್ನೂ ನಮೂದಿಸಬೇಕಾಗುತ್ತದೆ. ವೈದ್ಯಕೀಯ ಇತಿಹಾಸ ದಾಖಲಿಸಲು ಇದು ಸಹಕಾರಿಯಾಗಲಿದೆ. ಈ ಸಂಖ್ಯೆ ಇಲ್ಲವಾದಲ್ಲಿ ಆಯುಷ್ಮಾನ್ ಭಾರತ ಆ್ಯಪ್ ಮೂಲಕಎಬಿಎಚ್‌ಎ ಸಂಖ್ಯೆ ಸೃಷ್ಟಿಸಿಕೊಳ್ಳುವ ಅವಕಾಶ ಇರಲಿದೆ.
‘ನಮ್ಮ ಆಸ್ಪತ್ರೆಗೆ ಸಂಬಂಧಿಸಿದಂತೆ ಒಂದು ಕ್ಯೂಆರ್ ಕೋಡ್ ಸೃಷ್ಟಿಸಲಾಗಿದ್ದು, ಅದನ್ನು ಎಲ್ಲ ಕಡೆ ಇಡಲಾಗಿದೆ. ಸ್ಮಾರ್ಟ್‌ಫೋನ್ ನೆರವಿನಿಂದ ಸ್ಕ್ಯಾನ್ ಮಾಡಿದಲ್ಲಿ ವಿವಿಧ ಆ್ಯಪ್‌ಗಳು ತೆರೆದುಕೊಳ್ಳಲಿವೆ. ಬೇಕಾದ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಸ್ಕ್ಯಾನ್ ಮಾಡಿದ ಬಳಿಕ ಅಗತ್ಯ ಮಾಹಿತಿಯನ್ನು ನಮೂದಿಸಿದಲ್ಲಿ ಆಯುಷ್ಮಾನ್ ಕಾರ್ಡ್ ಸೃಷ್ಟಿಯಾಗುವ ಜತೆಗೆ ಹೊರರೋಗಿ ವಿಭಾಗದ ಟೋಕನ್ ಸಂಖ್ಯೆಯೂ ದೊರೆಯಲಿದೆ’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಧಾಕೃಷ್ಣ ತಿಳಿಸಿದರು.
ಕ್ಯೂಆರ್ ಕೋಡ್ ಸೇವೆ ವಿಸ್ತರಣೆ
‘ವೈದ್ಯಕೀಯ ಸೇವೆ ಸುಲಭವಾಗಿಸಲು ಡಿಜಿಟಲ್ ತಂತ್ರಜ್ಞಾನ ಸಹಕಾರಿಯಾಗಿದೆ. ಆದ್ದರಿಂದ ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆ ಪರಿಚಯಿಸಲಾಗಿದೆ. ಇದನ್ನು ಜಯನಗರ ಸಾರ್ವಜನಿಕ ಆಸ್ಪತ್ರೆ, ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿಯೂ ಶೀಘ್ರದಲ್ಲಿಯೇ ಪರಿಚಯಿಸಲಾಗುವುದು’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
‘ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಕುಟುಂಬಕ್ಕೆ ₹ 5 ಲಕ್ಷದವರೆಗೆ ಚಿಕಿತ್ಸೆ ದೊರೆಯಲಿದೆ. ಆದ್ದರಿಂದ ಈ ಕಾರ್ಡ್ ಪಡೆದುಕೊಳ್ಳಬೇಕು. ದೇಶದ ಯಾವುದೇ ಆಸ್ಪತ್ರೆಗೆ ಹೋದರೂ ವೈದ್ಯಕೀಯ ಇತಿಹಾಸ ಅರಿತು, ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
*
ಕ್ಯೂಆರ್ ಕೋಡ್ ವ್ಯವಸ್ಥೆಯಿಂದಾಗಿ ಒಪಿಡಿ ಸೇವೆಗೆ ಟೋಕನ್ ಪಡೆಯಲು ಜನರು ಸರದಿಯಲ್ಲಿ ನಿಲ್ಲುವುದು ತಪ್ಪಿದೆ. ಆಯುಷ್ಮಾನ್ ಭಾರತ ನೋಂದಣಿಯೂ ಸುಲಭವಾಗಿದೆ.
-ಡಾ. ರಾಧಾಕೃಷ್ಣ, ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.