ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನನ್ನನ್ನು ಬಗ್ಗಿಸಲು ಒಬ್ಬಿಬ್ಬರ ಯತ್ನ: ಡಿ.ಕೆ. ಶಿವಕುಮಾರ್

Published 1 ಜುಲೈ 2024, 16:01 IST
Last Updated 1 ಜುಲೈ 2024, 16:01 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನನ್ನು ಖಾಲಿ ಮಾಡಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಇದೆಲ್ಲ‌ ಸಾಧ್ಯವೇ ಇಲ್ಲ. ಯಾರೋ ಒಬ್ಬಿಬ್ಬರು ನನ್ನನ್ನು ಬಗ್ಗಿಸಬಹುದೆಂದು ಭಾವಿಸಿದ್ದರೆ, ಅದೂ ಸಾಧ್ಯವಾಗದ ಕೆಲಸ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಎಚ್ಚರಿಕೆಯ ಧ್ವನಿಯಲ್ಲಿ ಹೇಳಿದ್ದಾರೆ.

ಕೆಪಿಸಿಸಿ ಪದಾಧಿಕಾರಿಗಳ ಸಭೆ ಸೋಮವಾರ ನಡೆಯಿತು. ಈ ಸಭೆಯಲ್ಲಿ ಉಪ ಮುಖ್ಯಮಂತ್ರಿಗಳಾಗಿ ಇನ್ನಷ್ಟು ಶಾಸಕರ ನೇಮಕ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತಂತೆ ವಿಚಾರ ಪ್ರಸ್ತಾಪವಾದಾಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಿವಕುಮಾರ್‌, ‘ನಾನು ಪಕ್ಷಕ್ಕಾಗಿ ದುಡಿಯುವವನು. ನನ್ನನ್ನು ಖಾಲಿ ಮಾಡಿಸಲು ಸಾಧ್ಯವಿಲ್ಲ. ಪಕ್ಷದ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ’ ಎಂದು ಸವಾಲಿನ ಧ್ವನಿಯಲ್ಲಿ ಹೇಳಿದ್ದಾಗಿ, ಮೂಲಗಳು ತಿಳಿಸಿವೆ.

ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್ ಜೊತೆ ಈಗಾಗಲೇ ಚರ್ಚೆ ಮಾಡಲಾಗಿದೆ. ಪಕ್ಷದಲ್ಲಿ ಶಿಸ್ತು ಮುಖ್ಯ. ಇನ್ನು ಮುಂದೆ ಪಕ್ಷದ ಆಂತರಿಕ ವಿಚಾರಗಳನ್ನು ಬಹಿರಂಗವಾಗಿ ಯಾರೇ ಮಾತನಾಡಿದರೂ ನೋಟಿಸ್ ಕೊಟ್ಟು, ಕ್ರಮ ಕೈಗೊಳ್ಳಲಾಗುವುದು ಎಂದು ಶಿವಕುಮಾರ್ ಎಚ್ಚರಿಕೆ ನೀಡಿದ್ದಾಗಿ ಮೂಲಗಳು ಹೇಳಿವೆ.

ಅನವಶ್ಯಕವಾಗಿ ಬಹಿರಂಗ ಹೇಳಿಕೆಗಳನ್ನು ನೀಡುತ್ತಾ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವ ಸಚಿವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಅಂಥವರಿಗೆ ನೊಟೀಸ್ ನೀಡಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೊಬ್ಬರು ಸಭೆಯಲ್ಲಿ ಆಗ್ರಹಿಸಿದ್ದಾರೆ. ಆಗ ಶಿವಕುಮಾರ್, ‘ಕೆಲವರಿಗೆ ಮಾಧ್ಯಮಗಳನ್ನು ಕಂಡರೆ ಮಾತನಾಡುವ ಚಟ. ಎಐಸಿಸಿ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಬಿಡಿ’ ಎಂದಿದ್ದಾಗಿ ಮೂಲಗಳು ವಿವರಿಸಿವೆ.

ಪಕ್ಷ ಸಂಘಟಿಸಲು ತಾನು ಪಟ್ಟ ಶ್ರಮದ ಬಗ್ಗೆ ಮನವರಿಕೆ ಮಾಡಿಕೊಟ್ಟ ಶಿವಕುಮಾರ್, ‘ನಾನು ಕೆಪಿಸಿಸಿ ಅಧ್ಯಕ್ಷನಾಗುವ ಮೊದಲು ಪಕ್ಷ ಹೇಗಿತ್ತು? ಈಗ ಹೇಗಿದೆ ನೋಡಿ. ಪಕ್ಷ ಸಂಕಷ್ಟದಲ್ಲಿದ್ದಾಗ ಸೋನಿಯಾ ಗಾಂಧಿ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದರು.‌ ಪಕ್ಷ ಈಗ ಸದೃಢವಾಗಿದೆ. ಇನ್ನಷ್ಟು ಬಲಿಷ್ಠಗೊಳಿಸುವ ಹೊಣೆಗಾರಿಕೆ ನನ್ನ ಮೇಲಿದೆ’ ಎಂದು ಪ್ರತಿಪಾದಿಸಿದ್ದಾಗಿ ಮೂಲಗಳು ಹೇಳಿವೆ.

ಕ್ಷೇತ್ರ ಮರೆತರೇ?: ‘ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಒಂದೇ ವರ್ಷದಲ್ಲಿ 160 ಕ್ಷೇತ್ರಗಳಲ್ಲಿ ಹಿನ್ನಡೆಯಾಗಿದೆ ಎಂದರೆ ಏನರ್ಥ? 19 ಸಚಿವರ ಕ್ಷೇತ್ರಗಳಲ್ಲಿ ಹಿನ್ನಡೆಯಾಗಿದೆ. ಅಲ್ಲಿ ಜನಪ್ರಿಯತೆ ಕಳೆದುಕೊಂಡರೇ. ಕ್ಷೇತ್ರ ಮರೆತರೇ’ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ಅವರು ಸಭೆಯಲ್ಲಿ ಪ್ರಶ್ನಿಸಿದರು ಎಂದೂ ಗೊತ್ತಾಗಿದೆ.

‘ಕಾರ್ಯಕರ್ತರು, ಶಾಸಕರಿಗೆ ಸಚಿವರು ಬೆಲೆ‌ ಕೊಡುತ್ತಿಲ್ಲ’

ಕೆಲವು ಸಚಿವರ ನಡವಳಿಕೆಯ ಕುರಿತು ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ವಿನಯ್ ಕುಲಕರ್ಣಿ, ‘ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಸಚಿವರು ಮೂರು ಕಾಸಿನ‌ ಬೆಲೆ‌ ಕೊಡುತ್ತಿಲ್ಲ. ಯಾರಿಗೂ ಮುಖ‌ ಕೊಟ್ಟು ಮಾತನಾಡುತ್ತಿಲ್ಲ. ನಾವು ಸಂಘಟನಾತ್ಮಕವಾಗಿ ವಿಫಲರಾಗುತ್ತಿರುವುದಕ್ಕೆ ಇದೇ ಕಾರಣ’ ಎಂದು ದೂರಿದ್ದಾರೆ. 

‘ಶಾಸಕರ ಪರಿಸ್ಥಿತಿ ಕೂಡ ಚಿಂತಾಜನಕವಾಗಿದೆ. ಸಚಿವರು ತಮ್ಮ ಭೇಟಿಗೆ ಶಾಸಕರಿಗೆ ಅವಕಾಶವನ್ನೇ ನೀಡುತ್ತಿಲ್ಲ, ಕೆಲಸಗಳನ್ನೂ ಮಾಡಿಕೊಡುತ್ತಿಲ್ಲ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಈ ವಿಷಯವನ್ನು ಶಾಸಕಾಂಗ ಪಕ್ಷದ ಸಭೆಗಳಲ್ಲೂ ಗಮನಕ್ಕೆ ತರಲಾಗಿತ್ತು. ಮುಖ್ಯಮಂತ್ರಿ ಗಮನಕ್ಕೂ ತರಲಾಗಿದೆ. ಆದರೂ ಸಚಿವರು ತಮ್ಮ ನಡೆ ಬದಲಿಸಿಕೊಂಡಿಲ್ಲ. ಇದರಿಂದ ಪಕ್ಷ ಸಂಘಟನೆ ಮೇಲೆ ಹೊಡೆತ ಬಿದ್ದಿದೆ. ಇದು ಹೀಗೆ ಮುಂದುವರೆದರೆ ಶಾಸಕರು ನಿರಾಸಕ್ತಿ ತಾಳುತ್ತಾರೆ’ ಎಂದೂ ವಿನಯ್ ಕುಲಕರ್ಣಿ ಹೇಳಿದ್ದಾರೆ.

ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ವಿನಯ್‌ ಕುಲಕರ್ಣಿ, ‘ಶಾಸಕರು, ಪದಾಧಿಕಾರಿಗಳು ಯಾರೇ ಆದರೂ ಪಕ್ಷದ ವಿರುದ್ಧ ಕೆಲಸ ಮಾಡಿದರೆ ನೋಟಿಸ್ ನೀಡಬೇಕು. ಅಂಥವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಇಂದಿನ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ನಾವೆಲ್ಲರೂ ಸೇರಿದರೆ ಸಚಿವರು‌. ಅವರೇನು ಮೇಲಿಂದ ಬಂದಿಲ್ಲ’ ಎಂದಿದ್ದಾರೆ.

ಸ್ವಾಮೀಜಿ ಹೇಳಿಕೆ ಪ‍್ರಸ್ತಾವಕ್ಕೆ ಸಿಎಂ ಸಿಟ್ಟು

ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಿ ಎಂದಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದರು.

ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ದಲ್ಲಿ ಭಾಗಿಯಾಗಿ ಹೊರಟಿದ್ದ ಸಿದ್ದರಾಮಯ್ಯ ಅವರನ್ನು ಸುದ್ದಿಗಾರರು ಈ ಬಗ್ಗೆ ಪ್ರಶ್ನಿಸಿದರು. ಆಗ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಸುದ್ದಿಗಾರರು ಮತ್ತೆ ಪ್ರಶ್ನಿಸಿದಾಗ ತುಸು ಸಿಟ್ಟಾದ ಅವರು, ‘ನಡೆಯಿರಿ, ನಡೆಯಿರಿ’ ಎನ್ನುತ್ತಾ ಎಂದು ವಾಹನದತ್ತ ನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT