ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜುನನ ಕಾಲಿಗೆ ಗುಂಡೇಟು ತಗುಲಿತ್ತು: ಕಾರ್ಯಾಚರಣೆಯಲ್ಲಿದ್ದ ವ್ಯಕ್ತಿಯ ಹೇಳಿಕೆ

Published 6 ಡಿಸೆಂಬರ್ 2023, 6:12 IST
Last Updated 6 ಡಿಸೆಂಬರ್ 2023, 6:12 IST
ಅಕ್ಷರ ಗಾತ್ರ

ಹಾಸನ: ‘ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡು ಅರ್ಜುನನ ಕಾಲಿಗೆ ತಗುಲಿತ್ತು’ ಎಂದು, ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರ ಹೇಳಿಕೆಯುಳ್ಳ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

‘ಅರಿವಳಿಕೆ ತಗುಲಿದ್ದ ‘ಪ್ರಶಾಂತ್‌’ ಆನೆ ಚೇತರಿಸಿಕೊಳ್ಳುವಷ್ಟರಲ್ಲಿ ಅರ್ಜುನ –ಕಾಡಾನೆ ಮಧ್ಯೆ ಕಾಳಗ ತೀವ್ರವಾಗಿತ್ತು. ಅದನ್ನು ತಡೆಯಲು ಹಾರಿಸಿದ ಗುಂಡು ಅರ್ಜುನನಿಗೆ ತಗುಲಿತ್ತು’ ಎಂದು ತಿಳಿಸಿದ್ದಾರೆ. ‘ಮಾವುತ ವಿನು ಕೂಡಾ ಬಿದ್ದು, ಆಸ್ಪತ್ರೆಗೆ ಸೇರಿದ್ದರು. ಮಾವುತ ಇಲ್ಲದೇ ಕಾಳಗ ನಡೆಸಿದ್ದರಿಂದ ಅರ್ಜುನನೂ ನೆಲಕ್ಕೆ ಬಿದ್ದಿತ್ತು. ಆಗ ಕಾಡಾನೆ ತಿವಿದು ಕೊಂದಿತು‘ ಎಂದಿದ್ದಾರೆ.

ಮಾವುತ ವಿನು, ‘ನಾನು ಅರ್ಜುನನ ಜೊತೆಗೇ ಇದ್ದಿದ್ದರೆ, ಸಾಯುತ್ತಿರಲಿಲ್ಲ’ ಎಂದು ದುಃಖ ತೋಡಿಕೊಳ್ಳುತ್ತಿದ್ದರು.

ಗುಂಡೇಟಿನ ಗುರುತು ಪತ್ತೆಯಾಗಿಲ್ಲ:

‘ಬಾಹ್ಯ ಮರಣೋತ್ತರ ಪರೀಕ್ಷೆಯಲ್ಲಿ ಗುಂಡೇಟಿನ ಗುರುತು ಪತ್ತೆಯಾಗಿಲ್ಲ. ಪಕ್ಕೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಅರ್ಜುನ ಮೃತಪಟ್ಟಿದ್ದಾನೆ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಹೇಳಿದರು.

‘ಕಾರ್ಯಾಚರಣೆ ವೇಳೆ ಲೋಪವಾಗಿಲ್ಲ. ಅರಿವಳಿಕೆ‌ ಮದ್ದು ಮಿಸ್ ಫೈರ್ ಕುರಿತು ಬಗ್ಗೆ, ಇಂಜೆಕ್ಷನ್ ಬಳಕೆ ಬಗ್ಗೆ ತನಿಖೆ ನಡೆಯಲಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ’ ಎಂದು ಹೇಳಿದರು.

ಮಾವುತ ವಿನು ರೋದನ

‘ನನ್ನ ಆನೆಯನ್ನು ಬದುಕಿಸಿ ಕೊಡಿ. ನನ್ನೊಂದಿಗೆ ಕಳಿಸಿ. ಎಂಥ ರಾಜನ್ನ ಮಿಸ್‌ ಮಾಡಿಕೊಂಡೆ’ ಎಂದು ಅರ್ಜುನನ ಕಳೇಬರ ತಬ್ಬಿಕೊಂಡು ಮಾವುತ ವಿನು ರೋದಿಸುತ್ತಿದ್ದ ದೃಶ್ಯಗಳು ಮನ ಕಲಕುವಂತಿದ್ದವು.

ಅರ್ಜುನನ ಸೊಂಡಿಲು ತಬ್ಬಿ ಕೊಂಡು, ‘ಆನೆ ಬದುಕಿಸಿಕೊಡಿ. ಇಲ್ಲವೇ ನನ್ನ, ಕುಟುಂಬವನ್ನು ಅರ್ಜುನನ ಜೊತೆ ಮಣ್ಣು ಮಾಡಿ. ಅರ್ಜುನ ಸತ್ತಿಲ್ಲ ಎಂದು ನನ್ನ ಹೆಂಡತಿ, ಮಕ್ಕಳಿಗೆ ಹೇಳಿದ್ದೇನೆ’ ಎಂದು ರೋದಿಸಿದರು. ಈ ವೇಳೆ ಅರಣ್ಯಾಧಿಕಾರಿ ಶಿಲ್ಪಾ ಅವರ ಕಣ್ಣಾಲಿಗಳೂ ತೇವಗೊಂಡಿದ್ದವು.

ಅರ್ಜುನನ ಅಂತ್ಯಸಂಸ್ಕಾರ:

ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಯಿಂದ ಮೃತಪಟ್ಟ ಅರ್ಜುನನಿಗೆ, ಆಕ್ರೋಶ, ದುಃಖ, ಕಣ್ಣೀರಿನ ನಡುವೆ ಮಂಗಳವಾರ ಸಕಲೇಶಪುರ ತಾಲ್ಲೂಕಿನ ದಬ್ಬಳಿಕಟ್ಟೆ ಅರಣ್ಯದ ನೆಡುತೋಪಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT