ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟದಲ್ಲಿ ವಿಜೃಂಭಣೆಯ ದೀಪಾವಳಿ ರಥೋತ್ಸವ

Published 14 ನವೆಂಬರ್ 2023, 5:09 IST
Last Updated 14 ನವೆಂಬರ್ 2023, 5:09 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ (ಚಾಮರಾಜನಗರ): ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಇಲ್ಲಿನ ಪ್ರಸಿದ್ಧ ಯಾತ್ರಾಸ್ಥಳವಾದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ಬೆಳಿಗ್ಗೆ ಮಹದೇಶ್ವರ ಸ್ವಾಮಿಯ ಬ್ರಹ್ಮ ರಥೋಥತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ 8.40ರ ವೇಳೆಗೆ ರಥದಲ್ಲಿ ಸ್ವಾಮಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ದೇವಾಲಯದ ಸುತ್ತ ಒಂದು ಬಾರಿ ತೇರು ಎಳೆಯಲಾಯಿತು. ದೇವಾಲಯದ ಆವರಣದಲ್ಲಿ ಸೇರಿದ್ದ ಸಾವಿರಾರು ಭಕ್ತರ ‘ಉಘೇ ಮಾದಪ್ಪ’ ಎಂಬ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರ ನೇತೃತ್ವದಲ್ಲಿ ರಥೋತ್ಸವದ ಧಾರ್ಮಿಕ ವಿಧಿ ವಿಧಾನಗಳು ನಡೆದವು.

ದೇವಾಲಯದ ಒಳ ಆವರಣದಲ್ಲಿರುವ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಪುಟ್ಟ ಹೆಣ್ಣುಮಕ್ಕಳು ಸ್ವಾಮಿಗೆ ಬೆಲ್ಲದ ಆರತಿ ಬೆಳಗಿದರು.

ನಂತರ ದೇವಾಲಯದ ಆವರದಲ್ಲಿ ಉತ್ಸವ ಮೂರ್ತಿಯ ಪ್ರದಕ್ಷಿಣೆ ನೆರವೇರಿಸಿ ಹೊರ ಆವರಣಕ್ಕೆ ತಂದು ಬ್ರಹ್ಮ ರಥದಲ್ಲಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಲಾಯಿತು. ಆ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಉಘೇ ಮಾದಪ್ಪ ಘೋಷಣೆಯೊಂದಿಗೆ ನೂರಾರು ಭಕ್ತರು ತೇರನ್ನು ಎಳೆದರು.

ರಥೋತ್ಸವವನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು ತೇರಿಗೆ ಹೂ,ಹಣ್ಣು, ಧಾನ್ಯ, ನಾಣ್ಯ ಎಸೆದು ಹರಕೆ ತೀರಿಸಿದರು.

ಬೆಟ್ಟದಲ್ಲಿ ಬೆಳಿಗ್ಗೆಯಿಂದಲೇ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಅದನ್ನು ಲೆಕ್ಕಿಸದೆ ದೂರದ ಊರು, ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬಂದಿದ್ದ ಭಕ್ತರು ರಥೋತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT